ಬೀಜಿಂಗ್: ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಜನರನ್ನು, ವೈದ್ಯರನ್ನು ಬೆಚ್ಚಿಬೀಳಿಸಿರುವ ನಡುವೆಯೇ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದ್ದು, ಕೊರೊನಾ ವೈರಸ್ ಗೆ ತುತ್ತಾಗಿದ್ದ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆರೈಕೆ ಮಾಡಲು ಯಾರೂ ಇಲ್ಲದೆ ಮನೆಯಲ್ಲಿ ಒಂಟಿಯಾಗಿದ್ದ ವಿಕಲಚೇತನ ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜ್ವರದಿಂದ ನರಳುತ್ತಿದ್ದ ತಂದೆಯನ್ನು ಬೇರೆಡೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಮನೆಯಲ್ಲಿ ಒಂಟಿಯಾಗಿ ಗಾಲಿ ಕುರ್ಚಿಯಲ್ಲಿದ್ದ ವಿಶೇಷ ಚೇತನ ಮಗ ಯಾನ್ ಚೆಂಗ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
17 ವರ್ಷದ ಪುತ್ರನಿಗೆ ಮಾತನಾಡಲು ಬರುವುದಿಲ್ಲ, ನಡೆಯಲು, ತಿನ್ನಲೂ ಆಗದ ಸ್ಥಿತಿಯಲ್ಲಿ ಗಾಲಿ ಕುರ್ಚಿಯಲ್ಲಿದ್ದ. ಹಲವಾರು ವರ್ಷಗಳ ಹಿಂದೆಯೇ ತಾಯಿ ತೀರಿ ಹೋಗಿದ್ದರು. ತಂದೆಯನ್ನು ಬೇರೆಡೆ ಸ್ಥಳಾಂತರಿಸಿದ ಮೇಲೆ ಮಗನಿಗೆ ದಿನನಿತ್ಯದ ಊಟೋಪಚಾರ ನೀಡುವವರು, ನೋಡಿಕೊಳ್ಳುವವರು ಯಾರೂ ಇಲ್ಲದ ಪರಿಣಾಮ ಪ್ರಾಣ ಬಿಡುವಂತಾಗಿದೆ ಎಂದು ವರದಿ ವಿವರಿಸಿದೆ.
ಜನವರಿ 22ರಂದು ತಂದೆ ಯಾನ್ ಕ್ಸಿಯೋವೆನ್ ಅವರನ್ನು ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿದ್ದಾಗಲೇ ಅಸಹಾಯಕ ತಂದೆ ನನ್ನ ಮಗನನ್ನು ಯಾರಾದರೂ ನೋಡಿಕೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಆದರೆ ಕೊರೊನಾ ವೈರಸ್ ಮಹಾಮಾರಿಯಿಂದಾಗಿ ಜನರನ್ನು ತಲುಪುವುದು ತಡವಾಗಿತ್ತು ಎಂದು ವರದಿ ತಿಳಿಸಿದೆ.
ಹೋಗಾನ್ ಕೌಂಟಿ ಸರ್ಕಾರದ ಪ್ರಕಟಣೆ ಪ್ರಕಾರ, ಜನವರಿ 29ರಂದು ಯಾನ್ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಯುವಕನ ಸಾವಿಗೆ ಸ್ಥಳೀಯ ಹಿರಿಯ ಅಧಿಕಾರಿಗಳು ಬೆಲೆ ತೆರಬೇಕಾಗಲಿದೆ ಎಂದು ತಿಳಿಸಿದೆ. ಅಧಿಕಾರಿಗಳು ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕಿತ್ತು ಎಂದು ಸ್ಥಳೀಯ ಕಮ್ಯೂನಿಷ್ಟ್ ಪಕ್ಷದ ಕಾರ್ಯದರ್ಶಿ ತಿಳಿಸಿರುವುದಾಗಿ ವರದಿ ಹೇಳಿದೆ.