ಕೆ.ಆರ್.ನಗರ: ಅಂಗವಿಕಲರು ಅಂಗವೈಫಲ್ಯ ಇದೆ ಎಂದು ಧೃತಿಗೆಡದೆ, ಕೇಂದ್ರ-ರಾಜ್ಯ ಸರ್ಕಾರಗಳು ನೀಡುವ ಸವಲತ್ತುಗಳನ್ನು ಪಡೆಯುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್ ಹೇಳಿದರು.
ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಗುರುವಾರ ಶ್ರೀಕೃಷ್ಣಮಂದಿರದಲ್ಲಿ ತಾಲೂಕು ಅಂಗವಿಕಲರ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಅಂಗವೈಫಲ್ಯತೆ ಇದ್ದರೂ ಸಮಾಜದಲ್ಲಿ ನೀವೂ ನಮ್ಮಂತೆ ಕುಟುಂಬ ನಿರ್ವಹಣೆ ಮಾಡಿಕೊಂಡು ಮಕ್ಕಳ ಲಾಲನೆ ಪೋಷಣೆ, ವಿದ್ಯಾಭ್ಯಾಸ ಮಾಡಿಸಿ ಜೀವನ ಸಾಫಲ್ಯತೆ ಪಡೆಯುವಲ್ಲಿ ಯಶಸ್ಸು ಪಡೆಬೇಕಿದ್ದು ಕೆಲವರು ಕ್ರೀಡೆ, ಸಾಹಿತ್ಯ ಕೇತ್ರಗಳಲ್ಲಿ ಯಶಸ್ಸು ಗಳಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಣ್ಣು ಚಿಕಿತ್ಸೆ ಹಾಗೂ ಕೃತಕ ಕಾಲು ಜೋಡಣೆ ಅಗತ್ಯವಿರುವವರು ತಮ್ಮ ಕಚೇರಿಯನ್ನು ಸಂಪರ್ಕಿಸಿದಲ್ಲಿ ಸೂಕ್ತ ಸಹಕಾರ ನೀಡುವ ಭರವಸೆ ನೀಡಿದರು. ಅಲ್ಲದೆ, ಅಂಗವಿಕಲರ ಮಾಸಾಶನ ಹೆಚ್ಚಿಸಬೇಕೆಂಬ ಬೇಡಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದರು.
ದಿ.ಶಾಸಕ ಮಂಚನಹಳ್ಳಿ ಮಹದೇವುರವರ ಪುತ್ರಿ ಐಶ್ವರ್ಯ, ತನ್ನ ತಂದೆಯವರು ಶಾಸಕರಾಗಿದ್ದಾಗ ಮಾಡಿದ ಒಳ್ಳೆಯ ಕೆಲಸಗಳೇ ತನ್ನ ರಾಜಕೀಯ ವಿಚಾರಗಳಿಗೆ ಸ್ಪೂರ್ತಿ ನೀಡಿದೆ. ಅಂಗವಿಕಲರಿಗೆ ಸಹಾಯ ಮಾಡಲು ತಾನು ಸದಾ ಸಿದ್ಧಳಾಗಿದ್ದೇನೆಂದರು.
ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ನಗರ ಹಾಗೂ ಪುರಸಭೆಗಳಿಂದ ಅಂಗವಿಕಲರಿಗೆ ದೊರೆಯುವ ಸರ್ಕಾರದ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಮಾಹಿತಿ ದೊರೆಯದೆ ವಾಪಸ್ ಹೋಗುತ್ತಿವೆ.
ಸರ್ಕಾರ ನಮ್ಮ ಮಾಸಾಶನವನ್ನು ದುಪ್ಪಟ್ಟುಗೊಳಿಸಬೇಕು. ಇಲ್ಲದೇ ಹೋದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು. ವೇದಿಕೆಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಶೇಕರ್, ಬಿಜೆಪಿ ಮುಖಂಡ ಕುಪ್ಪೆ ಪ್ರಕಾಶ್ ಇದ್ದರು.