Advertisement

ಅಂಗವಿಕಲ ಗುತ್ತಿಗೆ ನೌಕರರ ಸೇವೆ ಖಾಯಂ

06:38 AM Jan 15, 2019 | |

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌)ದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 492 ಅಂಗವಿಕಲರನ್ನು ಹೈಕೋರ್ಟ್‌ ಆದೇಶದ ಅನ್ವಯ ಖಾಯಂಗೊಳಿಸುವ ಮೂಲಕ ಸರ್ಕಾರ ಮಕರ ಸಂಕ್ರಾಂತಿಗೆ ಬಂಪರ್‌ ಕೊಡುಗೆ ನೀಡಿದೆ. 

Advertisement

ಎಸ್ಸೆಸ್ಸೆಲ್ಸಿ ಪೂರೈಸಿದ 244 ಹಾಗೂ ಮತ್ತು ಪದವಿ ಪೂರೈಸಿದ 248 ಅಭ್ಯರ್ಥಿಗಳು ಈ ಮೊದಲು ವಿವಿಧ ವಿದ್ಯುತ್‌ ಸರಬರಾಜು ಕಂಪನಿ (ಎಸ್ಕಾಂ)ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಕಂದಾಯ ಸಹಾಯಕರನ್ನಾಗಿ ಖಾಯಂಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಸಂಕ್ರಾಂತಿ ಮುನ್ನಾ ದಿನವಾದ ಸೋಮವಾರ ಖುದ್ದು ಮುಖ್ಯಮಂತ್ರಿ ಹಾಗೂ ಇಂಧನ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆ ಫ‌ಲಾನುಭವಿಗಳಿಗೆ ಆದೇಶದ ಪ್ರತಿ ನೀಡಿದರು. 

2010ರಿಂದ ಪೂರ್ವಾನ್ವಯ ಆಗುವಂತೆ ವೇತನ ಪರಿಷ್ಕರಣೆ ಹಾಗೂ ಬಾಕಿ ಹಣವನ್ನೂ ಸರ್ಕಾರ ಈ ಫ‌ಲಾನುಭವಿಗಳಿಗೆ ನೀಡಲಿದೆ. ಖಾಯಂಗೊಳಿಸುವ ಸಂಬಂಧ ನಿಗಮದ ಈ ಹಿಂದಿನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಆದೇಶ ಜಾರಿಗೊಳಿಸಲಾಗಿದೆ. 

ಆದೇಶ ಪ್ರತಿ ವಿತರಿಸಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, “ಅಂಗವಿಕಲತೆ ನಡುವೆಯೂ ಕಷ್ಟಪಟ್ಟು ನೀವು ಶಿಕ್ಷಣ ಪೂರೈಸಿದ್ದೀರಿ. ನಿಮ್ಮ ಇಡೀ ಬದುಕು ಯಾತನಾಮಯ ಆಗಿದೆ. ನಿಮಗೆ ಸೇವಾ ಭದ್ರತೆ ನೀಡುವ ಮೂಲಕ ಸರ್ಕಾರವು ತಾಯಿ ಹೃದಯವನ್ನು ಪ್ರದರ್ಶಿಸಿದೆ. ಸಂಕ್ರಾಂತಿಯಿಂದ ನಿಮ್ಮ ಬದುಕಿಗೆ ಹೊಸ ಚೈತನ್ಯ ಸಿಕ್ಕಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸಚಿವ ಎಚ್‌.ಡಿ. ರೇವಣ್ಣ, ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಲೈನ್‌ಮನ್‌, ಮೀಟರ್‌ ರೀಡಿಂಗ್‌ ಸೇರಿದಂತೆ ಮತ್ತಿತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ನೂ 500 ಅಂಗವಿಕಲರನ್ನು ಗುರುತಿಸಿ ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು. 

Advertisement

ಹಿಂದಿನ ಸರ್ಕಾರದ ಹುನ್ನಾರ: ರೇವಣ್ಣ ಅವರ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿತ್ತು ಎಂಬ ಕಾರಣಕ್ಕಾಗಿಯೇ ನಿಮ್ಮನ್ನು (ಅಂಗವಿಕಲರನ್ನು) ಹಿಂದಿನ ಸರ್ಕಾರದಲ್ಲಿ ಕಿತ್ತುಹಾಕಬೇಕು ಎಂಬ ಹುನ್ನಾರ ನಡೆದಿತ್ತು. ಹಿಂದಿನದನ್ನು ನಾನು ಈಗ ಕೆದಕಲು ಹೋಗುವುದಿಲ್ಲ. ಆದರೆ, ರೇವಣ್ಣ ಅವರ ಅವಧಿಯಲ್ಲಿ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಎಂಬ ಕಾರಣಕ್ಕೆ ಕಿತ್ತುಹಾಕುವ ಪ್ರಯತ್ನ ನಡೆದಿತ್ತು ಎಂದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೆಲುಕುಹಾಕಿದರು. 

ಕುಟುಕಿದ ಕುಮಾರಣ್ಣ: ಖಾಯಂಗೊಳಿಸಿದ ಆದೇಶ ಪತ್ರವನ್ನು ಪಡೆಯಲು ವೇದಿಕೆಗೆ ತೆವಳಿಕೊಂಡು ಬರುತ್ತಿದ್ದಾಗ ನಿಮ್ಮ ಮುಖದಲ್ಲಿನ ಆನಂದಭಾಷ್ಪ ಕಂಡಾಗ ನನಗೆ ಕಣ್ಣಲ್ಲಿ ನೀರು ಬರುತ್ತದೆ’ ಎಂದು ಭಾವುಕರಾದ ಕುಮಾರಸ್ವಾಮಿ, “ನಿಮ್ಮನ್ನು ನೋಡಿ ಕಣ್ಣೀರು ಹಾಕಿದರೆ, ನಾನು ಯಾವುದಕ್ಕೆ ಕಣ್ಣೀರು ಹಾಕಿದೆ ಎಂದು ಯೋಚಿಸದೆ ಬೇರೆ ರೀತಿ ಪ್ರಸಾರ ಮಾಡಲಾಗುತ್ತದೆ ಎಂದು ಮಾಧ್ಯಮದವರನ್ನು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next