ಹುಬ್ಬಳ್ಳಿ: ಸೋಮವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ತುಳಜಾ ಭವಾನಿ ವೃತ್ತದಲ್ಲಿ ಕೊಳಚೆ ಸಂಗ್ರಹವಾಗಿ ಓಡಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹಾಗೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ರಸ್ತೆ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಹೃದಯ ಭಾಗ ಹಾಗೂ ಪ್ರಮುಖ ಜವಳಿ ಅಂಗಡಿಗಳಿರುವ ವಾಣಿಜ್ಯ ಪ್ರದೇಶ ದಾಜಿಬಾನ ಪೇಟೆಯ ತುಳಜಭವಾನಿ ವೃತ್ತ ಸಣ್ಣ ಮಳೆಗೂ ನೀರಿನಿಂದ ಆವೃತವಾಗುತ್ತದೆ. ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ರೋಸಿ ಹೋಗಿದ್ದ ಈ ಭಾಗದ ಜನರಿಗೆ ಸೋಮವಾರ ಮಧ್ಯರಾತ್ರಿ ಸುರಿದ ಮಳೆಯಿಂದ ತೀವ್ರ ಸಂಕಷ್ಟ ಅನುಭವಿಸುವಂತೆ ಮಾಡಿದೆ. ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳು ಚರಂಡಿ ನೀರು ಹಾಗೂ ಕೊಳಚೆಯಿಂದ ತುಂಬಿದ್ದು, ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾಲಾ ಹಾಗೂ ಒಳಚರಂಡಿಯ ಕೊಳಚೆ ಸಂಗ್ರಹವಾಗಿರುವುದರಿಂದ ದುರ್ವಾಸನೆ ವ್ಯಾಪಿಸಿತ್ತು. ತುಳಜಾ ಭವಾನಿ ದೇವಸ್ಥಾನ ಸೇರಿದಂತೆ ಸುತ್ತಲಿನ ಕೆಲ ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಸ್ಥಳದಲ್ಲಿ ಕೊಳಚೆ ಹಾಗೂ ಮಳೆ ನೀರು ಸಂಗ್ರಹವಾಗಿದ್ದು, ಜನರೇಟರ್ ಮೂಲಕ ಹೊರಹಾಕಲು ಹರಸಾಹಸ ಪಡುತ್ತಿದ್ದರು.
ದಿಢೀರ್ ಪ್ರತಿಭಟನೆ: ಶಾಶ್ವತ ಪರಿಹಾರ ಕಲ್ಪಿಸುವಂತೆ ಪಾಲಿಕೆ ಸೇರಿದಂತೆ ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ, ಸಚಿವ ಜಗದೀಶ ಶೆಟ್ಟರಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಆರೋಪಿಸಿ ಸ್ಥಳೀಯರು ದಾಜಿಬಾನ ಪೇಟೆ, ಪೆಂಡಾರ ಗಲ್ಲಿ, ಮ್ಯಾದಾರ ಓಣಿ ರಸ್ತೆ ಸಂಪೂರ್ಣ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಟೈರ್‌ಗೆ ಬೆಂಕಿ ಹಚ್ಚಿದ ಘಟನೆ ಕುರಿತು ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ಲಾಸ್ಟಿಕ್, ಥರ್ಮಾಕೋಲ್‌ನಂತಹ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮ್ಮ ತಪ್ಪಿನಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ: ಮೇದಾರ ಓಣಿಯ ನಾಲಾ ಮೇಲೆ ಪಾಲಿಕೆಯ ಕಟ್ಟಡ ಬೀಳುವ ಸ್ಥಿತಿಗೆ ತಲುಪಿದ ಪರಿಣಾಮ ಪಾಲಿಕೆ ಅಧಿಕಾರಿಗಳು ಕಟ್ಟಡ ನೆಲಸಮ ಮಾಡಿದ್ದರು. ಕಟ್ಟಡ ತ್ಯಾಜ್ಯ ಸೇರಿದಂತೆ ಇಲ್ಲಿನ ವ್ಯಾಪಾರಿಗಳು ಬಿಸಾಡಿದ ಪ್ಲಾಸ್ಟಿಕ್, ಥರ್ಮಾಕೋಲ್ ನಂತಹ ವಸ್ತುಗಳು ನಾಲಾದಲ್ಲಿ ಬಿಟ್ಟಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯದಂತಾಗಿದೆ. ರಾತ್ರಿ ಧಾರಾಕಾರ ಮಳೆಯಾಗಿದ್ದರಿಂದ ಮಳೆ ನೀರು ನಾಲಾದಲ್ಲಿ ಹರಿಯದೇ ರಸ್ತೆ ಮೇಲೆ ಹರಿದಿದ್ದರಿಂದ ಕೊಳಚೆ, ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳು ವೃತ್ತದಲ್ಲಿ ಸಂಗ್ರಹವಾಗಿದೆ. ಸುಮಾರು ಒಂದು ಅಡಿಯಷ್ಟು ಕೊಳಚೆ ರಸ್ತೆಯ ಮೇಲೆ ನಿಂತಿದ್ದು, ದ್ವಿಚಕ್ರ ವಾಹನ ಸೇರಿದಂತೆ ಪಾದಚಾರಿಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳೇ ಹೊಣೆ ಎಂದು ಹುಬ್ಬಳ್ಳಿ ರಸ್ತೆ ಮೇಲೆ ಸಂಗ್ರಹವಾಗಿರುವ ಕೊಳಚೆ ಸ್ವಚ್ಛ ಗೊಳಿಸಿದ ಪಾಲಿಕೆ ಸಿಬ್ಬಂದಿ. ಆರೋಪಿಸಿದರು.
ಪಾಲಿಕೆಯಿಂದ ಸ್ವಚ್ಛತೆ :
ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಪೌರ ಕಾರ್ಮಿಕರು ರಸ್ತೆ ಮೇಲೆ ಸಂಗ್ರಹವಾಗಿದ್ದ ಕೊಳಚೆ ಸ್ವತ್ಛಗೊಳಿಸುವ ಕೆಲಸ ನಡೆಸಿದರು. ಒಂದಿಷ್ಟು ತ್ಯಾಜ್ಯವನ್ನು ವಾಹನಗಳ ಮೂಲಕ
ಸಾಗಿಸಲಾಯಿತು. ಆದರೆ ತಿಳಿಯಾದ ಕೊಳಚೆ ರಸ್ತೆ ಪಕ್ಕದ ಚಿಕ್ಕ ಗಟಾರು, ಅಂಗಡಿಗಳ ಮುಂದೆಯೇ ಗುಡ್ಡೆ ಮಾಡಲಾಗುತ್ತಿತ್ತು. ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ
ಕಾರ್ಮಿಕರು ಕೈಗವಸು, ಬೂಟು ಸೇರಿದಂತೆ ಇತರೆ ಯಾವುದೇ ಸುರಕ್ಷತಾ ಸಾಮಗ್ರಿ ಧರಿಸದಿರುವುದು ಕಂಡು ಬಂತು