ಬೆಂಗಳೂರು: ರೇಣುಕಾಸ್ವಾಮಿ ಕೊಲೆ(Renukaswamy Case) ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅವರು ಜೈಲಿನಿಂದ ಆರೋಪ ಮುಕ್ತರಾಗಿ ಆದಷ್ಟು ಬೇಗ ಬರಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ.
ಚಿತ್ರರಂಗದಲ್ಲೂ ದರ್ಶನ್(Actor Darshan) ಅವರ ಬಗ್ಗೆ ಅನೇಕರು ಮಾತನಾಡಿದ್ದಾರೆ. ಅವರು ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡಲಿ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ದರ್ಶನ್ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಜೈಲಿನಿಂದ ಬರಲಿ ಎಂದು ಆಶಿಸಿದ್ದಾರೆ.
ದರ್ಶನ್ ಜೊತೆ ಕಳೆದ ಹತ್ತಾರು ವರ್ಷಗಳಿಂದ ಸ್ನೇಹಿತನಾಗಿ ಗುರುತಿಸಿಕೊಂಡಿರುವ ನಿರ್ದೇಶಕ ತರುಣ್ ಸುಧೀರ್(Tharun Sudhir) ಇದೇ ಮೊದಲ ಬಾರಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಹಾಗೂ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ʼಮಹಾನಟಿʼ ಫಿನಾಲೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, “ನನಗೆ ಏನು ಹೇಳಬೇಕಂತಲೇ ಗೊತ್ತಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗಿದೆ. ಆ ಕಡೆ ರೇಣುಕಾಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆಯೂ ನನಗೆ ಅಪಾರವಾದ ನೋವಿದೆ. ಆ ಥರ ಘಟನೆ ಆಗಬಾರದಿತ್ತು. ಆದರೆ ಇಲ್ಲೂ ಕೂಡ ನನ್ನ ಕುಟುಂಬನೇ ಇದೆ. ನನ್ನ ಅಣ್ಣನೇ ಆ ರೀತಿ ಮಾಡಿದ್ದರೆ ಏನು ಆಗುತ್ತೋ ಅದೇ ನೋವಿನಲ್ಲಿ ನಾನಿದ್ದೇನೆ. ಈಗಲೂ ಕೂಡ ಅವರದ್ದೇನು ತಪ್ಪು ಇಲ್ಲ ಅಂತಲೇ ಹೊರಗೆ ಬರಬಹುದಲ್ಲ ಎಂಬ ನಂಬಿಕೆ ನನ್ನದು. ಎಲ್ಲದಕ್ಕೂ ಕಾನೂನಿದೆ. ಇದರ ತನಿಖೆ ಸರಿಯಾಗಿ ಆಗುತ್ತದೆ. ಹಾಗಾಗಿ ವೈಯಕ್ತಿಕವಾಗಿ ನಾನೂ ಏನೂ ಹೇಳೋಕೆ ಆಗಲ್ಲ. ದರ್ಶನ್ ಅವರನ್ನು ನಂಬಿಕೊಂಡ ದೊಡ್ಡ ಕುಟುಂಬಕ್ಕೆ ಕೂಡ ನೋವು ಆಗಿದೆ’ ಎಂದು ತರುಣ್ ಸುಧೀರ್ ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ದರ್ಶನ್ , ಪವಿತ್ರಾ ಗೌಡ ಸೇರಿದಂತೆ 17 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜು.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.