Advertisement
“ರಂಗನಾಯಕಿ’ ಈ ಹೆಸರು ಕೇಳುತ್ತಿದ್ದಂತೆ ಇಂದಿಗೂ ಅದೆಷ್ಟೋ ಸಿನಿಪ್ರಿಯರ ಕಣ್ಣುಗಳು ಅರಳುತ್ತವೆ. 1981ರಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ಮೂಡಿಬಂದಿದ್ದ “ರಂಗನಾಯಕಿ’ ಕನ್ನಡದ ಎವರ್ ಗ್ರೀನ್ ಸಿನಿಮಾಗಳ ಪಟ್ಟಿಯಲ್ಲಿ ಸಿಗುವ ಅಪರೂಪದ ಹೆಸರು. “ರಂಗನಾಯಕಿ’ ತೆರೆಕಂಡು ಬರೋಬ್ಬರಿ 38 ವರ್ಷಗಳಾದರೂ, ಇಂದಿಗೂ ಆ ಚಿತ್ರದ ಹಾಡುಗಳು, ಪಾತ್ರಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವುದೇ “ರಂಗನಾಯಕಿ’ ಚಿತ್ರದ ಜನಪ್ರಿಯತೆಗೆ ಸಾಕ್ಷಿ.
“ರಂಗನಾಯಕಿ’ ಅಂತ ಟೈಟಲ್ ಇದ್ದರೂ, ಪುಟ್ಟಣ್ಣ ಅವರ “ರಂಗನಾಯಕಿ’ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥಾಹಂದರ ಇಂಥದ್ದೊಂದು ಟೈಟಲ್ ಬಯಸಿದ್ದರಿಂದ ಅದನ್ನೆ ಮರುಬಳಕೆ ಮಾಡಿಕೊಳ್ಳುತ್ತಿದ್ದೇವೆ’ ಅನ್ನೋದು ನಿರ್ದೇಶಕ ದಯಾಳ್ ಮಾತು.
Related Articles
Advertisement
ಇತ್ತೀಚೆಗೆ “ರಂಗನಾಯಕಿ’ ಕಾದಂಬರಿಯ ಲೋಕಾರ್ಪಣೆ ಮತ್ತು ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ, ಈ ಕಿರು ಕಾದಂಬರಿಯನ್ನು ಲೋಕಾರ್ಪಣೆ ಮಾಡಿ, ಅದನ್ನು ಚಿತ್ರವನ್ನಾಗಿಸುವ ಕೆಲಸಕ್ಕೂ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ದಯಾಳ್, ಈ “ರಂಗನಾಯಕಿ’ ಚಿತ್ರದಲ್ಲಿ ಅಂಥದ್ದೇನಿದೆ? ಇಲ್ಲಿ “ರಂಗನಾಯಕಿ’ ಯಾರು? ಇದರ ವಿಶೇಷತೆಗಳೇನು? ಎನ್ನುವುದರ ಬಗ್ಗೆ ಒಂದಷ್ಟು ವಿಷಯಗಳನ್ನು ತೆರೆದಿಟ್ಟರು. “ಕೆಲ ವರ್ಷಗಳ ಹಿಂದೆ ದೇಶದಲ್ಲಿ ನಡೆದ ನಿರ್ಭಯಾ ಪ್ರಕರಣ ಅನೇಕರಿಗೆ ನೆನಪಿರಬಹುದು. ಅದೇ ಘಟನೆ “ರಂಗನಾಯಕಿ’ ಕಾದಂಬರಿ ಮತ್ತು ಚಿತ್ರಕ್ಕೆ ಕಾರಣ.
ಅತ್ಯಾಚಾರದಂಥ ಘಟನೆ ಹೆಣ್ಣೊಬ್ಬಳ ಬದುಕನ್ನ ಹೇಗೆ ಹಿಂಸಿಸುತ್ತದೆ, ಸಂತ್ರಸ್ತೆಯನ್ನು ಸಮಾಜ ಹೇಗೆ ನೋಡುತ್ತದೆ. ಅದನ್ನೆಲ್ಲ ಮೆಟ್ಟಿ ಆಕೆ ಹೇಗೆ ನಿಲ್ಲುತ್ತಾಳೆ ಎನ್ನುವುದೇ “ರಂಗನಾಯಕಿ’ಯ ಕಥಾಹಂದರ. ನಮ್ಮ ಸುತ್ತಮುತ್ತ ಕಂಡು-ಕೇಳಿದ ಕೆಲವು ನೈಜ ಘಟನೆಗಳನ್ನು ಆಧರಿಸಿ, ಅದಕ್ಕೊಂದಷ್ಟು ಸಿನಿಮಾ ಟಚ್ ಕೊಟ್ಟು “ರಂಗನಾಯಕಿ”ಯನ್ನು ತೆರೆಮೇಲೆ ತರುವ ಯೋಜನೆ ಇದೆ’ ಎನ್ನುವುದು ದಯಾಳ್ ಮಾತು.
ಇನ್ನು ಚಿತ್ರದಲ್ಲಿ ರಂಗನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶ್ರೀನಿ, ತ್ರಿವಿಕ್ರಮ್, ಸಿಹಿಕಹಿ ಚಂದ್ರು, ಸುಂದರ ರಾಜ್ ಮೊದಲಾದವರು ರಂಗನಾಯಕಿಯ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ “ಎಟಿಎಂ’ ಎನ್ನುವ ಚಿತ್ರವನ್ನು ನಿರ್ಮಿಸಿದ್ದ ಎಸ್.ವಿ ನಾರಾಯಣ್, “ಎಸ್.ವಿ ಎಂಟರ್‌ಟೈನ್ಮೆಂಟ್ಸ್’ ಬ್ಯಾನರ್‌ನಲ್ಲಿ “ರಂಗನಾಯಕಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
“ರಂಗನಾಯಕಿ’ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನೀಲ್ ಕಶ್ಯಪ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆಯಿದೆ. ಚಿತ್ರವನ್ನು ಬೆಂಗಳೂರು, ಹಾಸನ, ಕೊಡಗು ಸುತ್ತಮುತ್ತ ಚಿತ್ರೀಕರಿಸುವ ಯೋಜನೆಯಲ್ಲಿದೆ ಚಿತ್ರತಂಡ. ಸದ್ಯತನ್ನ ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿರುವ “ರಂಗನಾಯಕಿ’ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.
— ಜಿ.ಎಸ್.ಕಾರ್ತಿಕ ಸುಧನ್