Advertisement
ರಾಜಕೀಯವಾಗಿ ತಮಗೆ ಎದುರಾಗಿದ್ದ ಸವಾಲುಗಳ ಜತೆಗೆ ನೆರೆ ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆ ಎದುರಿಸುತ್ತಿದ್ದ ಹೊತ್ತಿನಲ್ಲೇ ಯಡಿಯೂರಪ್ಪ ಅವರು ನೀಡಿದ ಆ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಿದ ತರಂಗಗಳು ದೂರದ ದೆಹಲಿಯಲ್ಲಿರುವ ವರಿಷ್ಠರನ್ನೂ ತಲುಪಿದಂತಿದೆ. ಹಾಗಾಗಿ ಶುಕ್ರವಾರ ರಾತ್ರಿ 1,200 ಕೋಟಿ ರೂ. ಪರಿಹಾರ ಘೋಷಣೆಯಾಗಿದೆ. ತಮ್ಮ ಒಂದು ಹೇಳಿಕೆ ಮೂಲಕ ಪಕ್ಷ, ಸಂಘಟನೆ ಹಾಗೂ ಸಮುದಾಯಕ್ಕೆ ಯಡಿಯೂರಪ್ಪ ರವಾನಿಸಿದ ಸಂದೇಶದ ಕುರಿತೇ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
Related Articles
Advertisement
ಬಳಿಕ ತಮ್ಮ ನಾಯಕತ್ವದ ವಿರುದ್ಧವೇ ದನಿಯೆತ್ತಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಭಾನುಪ್ರಕಾಶ್, ನಿರ್ಮಲ್ ಸುರಾನಾ ಅವರನ್ನು ಮತ್ತೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದು ಯಡಿಯೂರಪ್ಪನವರ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತ್ತು. ಜತೆಗೆ ಮೇಯರ್ ಅಭ್ಯರ್ಥಿ ಆಯ್ಕೆಗೆ ತಾವು ರಚಿಸಿದ್ದ ಸಮಿತಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಬರ್ಖಾಸ್ತುಗೊಳಿಸಿದ್ದು ಅವರನ್ನು ಇನ್ನಷ್ಟು ಕೆರಳಿಸಿದಂತಿತ್ತು.
ಸಂಚಲನ ಸೃಷ್ಟಿಸಿದ ಹೇಳಿಕೆ: ದಾವಣಗೆರೆಯಲ್ಲಿ ಸೆ. 29ರಂದು ನಡೆದ ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿ ಅವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ “ನಾನು ತಂತಿ ಮೇಲೆ ನಡೆಯುತ್ತಿದ್ದೇನೆ. ಯಾವುದೇ ತೀರ್ಮಾನ ಕೈಗೊಳ್ಳಲು 10 ಬಾರಿ ಯೋಚಿಸುತ್ತಿದ್ದೇನೆ’ ಎಂಬ ಹೇಳಿಕೆ ನೀಡಿದ್ದು ಸಂಚಲನ ಮೂಡಿಸಿತು. ಲಿಂಗಾಯತ ಸಮುದಾಯದ ದೊಡ್ಡ ಸಮಾರಂಭದಲ್ಲಿ ಯಡಿಯೂರಪ್ಪ ಹೇಳಿಕೆ ಅವರ ಅಸಹಾಯತೆ ಎಂಬುದಕ್ಕಿಂತ ಪಕ್ಷದಲ್ಲಿ ಅವರಿಗೆ ಸಹಕಾರ ಸಿಗುತ್ತಿಲ್ಲ ಎಂಬ ಸಂದೇಶ ರವಾನೆಯಾದಂತಾಯಿತು.
ಚರ್ಚೆಯ ದಿಕ್ಕು ಬದಲಿಸಿದ ಮಾತು: ಅಲ್ಲಿಯವರೆಗೆ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದೇ ಪ್ರತಿಪಕ್ಷಗಳು, ಸಂತ್ರಸ್ತರು ಟೀಕೆ ಮಾಡುತ್ತಿದ್ದರು. ಆ ಹೊತ್ತಿಗೆ ನೆರೆ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿ ಎರಡು ತಿಂಗಳಾಗಿ ಜನಾಕ್ರೋಶ ಹೆಚ್ಚಾಗಿತ್ತು. ಆ ಹೊತ್ತಿಗೆ ಯಡಿ ಯೂರಪ್ಪ ಹೇಳಿದ ಮಾತು ಚರ್ಚೆಯ ದಿಕ್ಕನ್ನೇ ಬದಲಿಸಿತು. ಅಲ್ಲಿಂದ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದಿರುವ ಬಗ್ಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಲಾರಂಭಿಸಿತು. ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಮುಗಿಬಿದ್ದವು. ಇದು ಕ್ರಮೇಣ ಜನಾಕ್ರೋಶವಾಗಿ ಪರಿವರ್ತನೆಯಾಗಲಾರಂಭಿಸಿತು.
ಸಚಿವ ಸದಾನಂದಗೌಡ ಅವರು ವಿಜಯದಶಮಿ ನಂತರ ಪರಿಹಾರ ಬಿಡುಗಡೆಯಾಗಲಿದೆ ಎಂದು ಶುಕ್ರ ವಾರ ಮಧ್ಯಾಹ್ನ ಹೇಳಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾರದೊಳಗೆ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಕೇಂದ್ರ ಮಧ್ಯಂತರ ಪರಿಹಾರ ನೀಡದೆ ಒಮ್ಮೆಗೆ ಪೂರ್ಣ ಪರಿಹಾರ ವಿತರಿಸಲಿದೆ ಎಂದು ಕೆಲ ನಾಯಕರು ಸಮಜಾಯಿಷಿ ನೀಡಿದ್ದರು. ಆದರೆ ಶುಕ್ರವಾರ ರಾತ್ರಿ ದಿಢೀರ್ 1,200 ಕೋಟಿ ರೂ. ಬಿಡುಗಡೆಯಾಗಿರುವುದು ಬಿಜೆಪಿ ನಾಯಕರಿಗೂ ಅಚ್ಚರಿ ಜತೆಗೆ ಸಂತಸ ತಂದಿದೆ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆ ಹಾಗೂ ಜನಾಭಿಪ್ರಾಯ ಫಲ ನೀಡಿದಂತಿದೆ.
ಯಡಿಯೂರಪ್ಪ ಪರ ಯತ್ನಾಳ್ ಹೇಳಿಕೆ: ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರ ಪರವಾಗಿ ನೀಡಿದ ಹೇಳಿಕೆ ಇನ್ನಷ್ಟು ಚರ್ಚೆಗೆ ಗ್ರಾಸವಾಯಿತು. ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡಿಕೆಯಲ್ಲಿ ವಿಳಂಬ ಮಾಡುತ್ತಿದೆ ಎಂಬ ಅಸಮಾಧಾನದ ಜತೆಗೆ ಈ ವಿಚಾರವನ್ನೇ ಇಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದು, ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಲಾರಂಭಿಸಿತು.
ನೆರೆ ಸಂತ್ರಸ್ತರು ಹಾಗೂ ಸಾರ್ವಜನಿಕರು ರಾಜ್ಯದ ಕೇಂದ್ರ ಸಚಿವರು, ಸಂಸದರನ್ನು ಪ್ರಶ್ನಿಸಲಾರಂಭಿಸಿದರು. ಈ ಸಂದರ್ಭದಲ್ಲಿ ಕೆಲ ಕೇಂದ್ರ ಸಚಿವರು, ಸಂಸದರು ನೀಡಿದ ಹೇಳಿಕೆಗಳು ಇನ್ನಷ್ಟು ಅವಾಂತರ ಸೃಷ್ಟಿಸಿತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಲಾರಂಭಿಸಿತು. ರಾಜ್ಯದ ಸಂಸದರು, ಕೇಂದ್ರ ಸಚಿವರು ಮಾತ್ರವಲ್ಲದೇ ಪ್ರಧಾನಿ, ಕೇಂದ್ರ ಗೃಹ ಸಚಿವರ ವಿರುದ್ಧವು ಸಂದೇಶಗಳು ಹರಿದಾಡಲಾರಂಭಿಸಿತು. ದಿನ ಕಳೆದಂತೆ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸಚಿವರು, ಸಂಸದರು ಸಹ ಒತ್ತಡಕ್ಕೆ ಒಳಗಾದಂತಾಗಿದೆ ಕೇಂದ್ರ ನಾಯಕರಿಗೆ ಪರಿಹಾರಕ್ಕಾಗಿ ದುಂಬಾಲು ಬೀಳುವಂತಾಯಿತು.
* ಎಂ. ಕೀರ್ತಿಪ್ರಸಾದ್