ಧಾರವಾಡ: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ ಖಾತೆಗಳಿಗೆ ತಲಾ 500 ರೂ. ನೇರ ನಗದು ಜಮೆ ಮಾಡುವ ಕಾರ್ಯ ಏ.3ರಿಂದ ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಸುಮಾರು ಐದು ಲಕ್ಷಕ್ಕೂ ಅಧಿಕ ಜನರಿಗೆ ಈ ಪ್ರಯೋಜನ ದೊರೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ “ಬ್ಯಾಂಕ್ ಮಿತ್ರ’ರ ಮೂಲಕ ಗ್ರಾಹಕರು ಈ ಸೌಲಭ್ಯದ ಸದುಪಯೋಗಪಡೆಯಬೇಕು. ಕಷ್ಟಕಾಲದಲ್ಲಿ ಜನರಿಗೆ ಸಹಾಯವಾಗಲಿ ಎಂಬ ಆಶಯದೊಂದಿಗೆ ಈ ಯೋಜನೆಯನ್ನು ಜಿಲ್ಲೆಯ ಬ್ಯಾಂಕ್ ಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.
ಎಲ್ಲ ಬ್ಯಾಂಕ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಒಂದು ಮೀಟರ್ ಅಂತರದಲ್ಲಿ ಗುರುತುಗಳನ್ನು ಹಾಕಿ ಗ್ರಾಹಕರಿಗೆ ಆರೋಗ್ಯದ ಅರಿವು ಕೂಡಾ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಅಥವಾ ಬ್ಯಾಂಕ್ ಮಿತ್ರರ ಮೂಲಕ ಗ್ರಾಹಕರಿಗೆ ನಗದು ವಿಲೇವಾರಿ ಮಾಡಬೇಕು. ಬ್ಯಾಂಕ್ ಮಿತ್ರರಿಗೆ ಅಧಿಕೃತವಾಗಿ ಗುರುತಿನ ಕಾರ್ಡು ನೀಡಿ ಪೊಲೀಸರಿಗೆ ಮಾಹಿತಿ ಒದಗಿಸಬೇಕು. ನಗರ ಪ್ರದೇಶಗಳಲ್ಲಿ ಎಟಿಎಂಗಳ ಮೂಲಕ ಫಲಾನುಭವಿಗಳು ತಮ್ಮ ನಗದು ಪಡೆಯಬಹುದು ಎಂದರು. ಬ್ಯಾಂಕ್ ಗಳಲ್ಲಿ 500ಕ್ಕಿಂತ ಹೆಚ್ಚು ಪಿಎಮ್‌ಜೆಡಿವಾಯ್ ಖಾತೆಗಳನ್ನು ಹೊಂದಿದ್ದರೆ ಅಂತಹ ಬ್ಯಾಂಕ್‌ಗಳ ವ್ಯವಸ್ಥಾಪಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ನೆರವು ಪಡೆಯಬಹುದು. ಕೋವಿಡ್ 19 ಸೋಂಕು ತಡೆಯಲು ಅಗತ್ಯವಿರುವ ಸ್ಯಾನಿಟೈಸರ್ ಉಪಯೋಗಿಸಬೇಕು ಎಂದು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎಂ.ಈಶ್ವರ ಮಾತನಾಡಿ, ಜಿಲ್ಲೆಯ ಐದು ಲಕ್ಷಕ್ಕೂ ಅ ಧಿಕ ಗ್ರಾಹಕರಿಗೆ ವಿವಿಧ ಬ್ಯಾಂಕ್‌ಗಳ 348 ಶಾಖೆಗಳು ಹಾಗೂ 450 ಎಟಿಎಮ್ ಗಳ ಮೂಲಕ ಈ ಸೇವೆ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಸಿಇಒ ಡಾ|ಬಿ.ಸಿ.ಸತೀಶ ಇನ್ನಿತರರು ಇದ್ದರು.