Advertisement

ಶಾಸಕರ ಅಸಮಾಧಾನ ಶಮನಕ್ಕೆ ಇಂದು ಮುಖ್ಯಮಂತ್ರಿಗಳಿಂದ “ಭೋಜನ’ಕೂಟ

11:43 PM Feb 01, 2021 | Team Udayavani |

ಬೆಂಗಳೂರು: ಪಕ್ಷ ಹಾಗೂ ಸರ್ಕಾರದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಬಿಜೆಪಿಯ ಪಕ್ಷ ನಿಷ್ಠ ಶಾಸಕರು ಖಾಸಗಿ ಹೋಟೆಲ್‌ ಸಭೆ ನಡೆಸುವ ಬದಲು ಮಧ್ಯಾಹ್ನ ವಿಧಾನಸೌಧದಲ್ಲಿಯೇ ಭೋಜನದ ನೆಪದಲ್ಲಿ ಸಭೆ ನಡೆಸಿದ್ದಾರೆ.

Advertisement

ಅಸಮಾಧಾನಿತರ ವಿಶ್ವಾಸಗಳಿಸಲು ಸಿಎಂ ಯಡಿಯೂರಪ್ಪ ಇಂದು ಭೋಜನ ಕೂಟ ಏರ್ಪಡಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಅವರ ಕಚೇರಿಯಲ್ಲಿ ಭೋಜನದ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿ.ಎಚ್‌.ತಿಪ್ಪಾರೆಡ್ಡಿ, ಸಿದ್ದು ಸವದಿ, ಅಪ್ಪಚ್ಚು ರಂಜನ್‌ ಸೇರಿದಂತೆ 15 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಸಂಪುಟ ವಿಸ್ತರಣೆಯಲ್ಲಿ ಪಕ್ಷ ನಿಷ್ಠ ಹಿರಿಯ ಶಾಸಕರನ್ನು ಕಡೆಗಣಿಸಿ ವಲಸಿಗರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕೆಲವು ಸಚಿವರು ಸಚಿವರಾದ ಮೇಲೆ ಮುಖ್ಯಮಂತ್ರಿಗಳು ನೀಡಿದ ಖಾತೆಯನ್ನು ಒಪ್ಪಿಕೊಳ್ಳದೇ ತಮಗೆ ಇಂಥಹುದೇ ಖಾತೆ ಬೇಕೆಂದು ಪಟ್ಟು ಹಿಡಿಯುತ್ತಿರುವುದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದಂತಾಗುತ್ತಿದೆ.

ಮೋದಿ ಮಾದರಿ ಆಡಳಿತ ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಇಲ್ಲದಂತಾಗಿದೆ. ನಿಗಮ ಮಂಡಳಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಇಲ್ಲದಂತಾಗಿದೆ. ಇದರಿಂದ 2023ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಎರಡನೇ ಹಂತದ ನಾಯಕರನ್ನು ಬೆಳೆಸಲು ಅವಕಾಶ ಇಲ್ಲದಂತಾಗಿದೆ ಎನ್ನುವ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಭೇಟಿ ಮಾಡಿದ ರೇಣುಚಾರ್ಯ ತಂಡ:
ಇನ್ನೊಂದೆಡೆ ಅಸಮಾಧಾನಿತ ಶಾಸಕರ ಇನ್ನೊಂದು ಗುಂಪು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹಾಗೂ ರಾಜೂಗೌಡ ನೇತೃತ್ವದಲ್ಲಿ ಸೋಮವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

Advertisement

ಈ ತಂಡದಲ್ಲಿ ಶಿವರಾಜ್‌ ಪಾಟೀಲ್‌, ಪ್ರೊ. ಲಿಂಗಣ್ಣ, ಶಂಕರ ಪಾಟೀಲ್‌ ಮುನೇನಕೊಪ್ಪ ಸೇರಿದಂತೆ ಸುಮಾರು ಎಂಟರಿಂದ ಹತ್ತು ಜನರನ್ನು ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಮೂಲಕ ಕರೆಯಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏಪ್ರಿಲ್‌ ವರೆಗೂ ತಾಳ್ಮೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅನಗತ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡದೆ, ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಸಿಎಂ ಭೋಜನ ಕೂಟ
ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದಿರುವುದರಿಂದ ಮುನಿಸಿಕೊಂಡಿರುವ ಶಾಸಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಭೋಜನ ಕೂಟ ಏರ್ಪಡಿಸಿದ್ದಾರೆ.

ಸಂಜೆ ವಿಧಾನಸಭೆ ಕಲಾಪ ಮುಗಿದ ನಂತರ ತಮ್ಮ ನಿವಾಸ ಕಾವೇರಿಯಲ್ಲಿ ಪಕ್ಷದ ಶಾಸಕರಿಗೆ ವಿಶೇಷ ಭೋಜನ ಕೂಟ ಏರ್ಪಡಿಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next