Advertisement

ದಿಂಗಾಲೇಶ್ವರ ಮಠ ಜಾತ್ರೆ; ರಥೋತ್ಸವ

04:02 PM Apr 25, 2019 | pallavi |

ಲಕ್ಷ್ಮೇಶ್ವರ: ಭಾರತೀಯ ಪರಂಪರೆ ಅದರಲ್ಲೂ ಮುಖ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ವಿಶಿಷ್ಟವಾದ ಸ್ಥಾನಮಾನವಿದೆ. ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡುವವರು ಪರಸ್ಪರ ಅರಿತು ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಸತಿ-ಪತಿಗಳು ಒಬ್ಬರನ್ನೊಬ್ಬರು ಅರಿತು ಬಾಳಿದಾಗ ಮಾತ್ರ ಸಂಸಾರ ಸುಖಮಯ ಮತ್ತು ಸಾರ್ಥಕವಾಗುತ್ತದೆ ಎಂದು ಹಿರೇಮಣಕಟ್ಟಿಯ ಮೃಗೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಜಾತ್ರಾಮಹೋತ್ಸವ ಅಂಗವಾಗಿ ಬುಧವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ದಂಪತಿಗಳನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು. ಆದರ್ಶಮಯ ಸಂಸಾರಕ್ಕೆ ಸಂಸ್ಕಾರ ಕೊಡುವುದರಲ್ಲಿ ಜೀವನದ ಅರ್ಥ ಅಡಗಿದೆ. ಉತ್ತಮ ನಾಗರಿಕನಾಗಿ ಬಾಳಿ ಬದುಕುವುದು ಸಂಸಾರದ ಸಾರವಾಗಿದೆ. ಹಿಂದೂ ಧರ್ಮದ ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ವಿಶೇಷವಾದ ಗೌರವವಿದೆ. ಸಾಮೂಹಿಕ ಮದುವೆಗಳಲ್ಲಿ ಎಲ್ಲ ಜಾತಿ, ಧರ್ಮ, ಮತ, ಪಂತಗಳ ಜನರು ಭಾಗವಹಿಸಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮತ್ತು ಹೊಸತನಕ್ಕೆ ನಾಂದಿ ಹಾಡುತ್ತಿರುವ ಸಂಪ್ರದಾಯ ಸಾರ್ವತ್ರಿಕವಾಗಬೇಕು ಎಂದರು.

ಕೊನ್ನೂರಿನ ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಹಬ್ಬ, ಹರಿದಿನ, ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತೀಕ. ಇವುಗಳ ಆಚರಣೆ ಜತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಮಠ-ಮಾನ್ಯಗಳ ಸಂಪ್ರದಾಯವಾಗಿದೆ. ವ್ಯಕ್ತಿ ಹೊಂದುವ ಆಧ್ಯಾತ್ಮಿಕ ಜ್ಞಾನ ಬದುಕಿನ ಶಾಂತಿ, ನೆಮ್ಮದಿಗೆ ಪೂರಕ ಎಂದು ಹೇಳಿದರು.

ಎಂಟು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು. ದಿಂಗಾಲೇಶ್ವರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ದುಂಡಸಿಯ ಕುಮಾರ ಮಹಾಸ್ವಾಮಿಗಳು ಷಟಸ್ಥಳ ಧ್ವಜಾರೋಹಣ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ವಿಶ್ವಾರಾದ್ಯ ಶ್ರೀಗಳು ಜಂಗಮ ವಟುಗಳಿಗೆ ಅಯ್ನಾಚಾರ ಲಿಂಗದೀಕ್ಷೆ ಕಾರ್ಯಕ್ರಮ ನೆರವೇರಿಸಿದರು. ಸಂಜೆ ಅಪಾರ ಭಕ್ತ ಸಮೂಹದ ನಡುವೆ ಅದ್ದೂರಿ ರಥೋತ್ಸವ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next