Advertisement

ಸಿಜೆಯಾಗಿ ನ್ಯಾ.ದಿನೇಶ್‌ ಮಹೇಶ್ವರಿ ಪ್ರಮಾಣ

07:15 AM Feb 13, 2018 | Harsha Rao |

ಬೆಂಗಳೂರು: ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ದಿನೇಶ್‌ ಮಹೇಶ್ವರಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್‌ ವಾಲಾ ಅವರು ರಾಜ್ಯಹೈಕೋರ್ಟ್‌ನ 9ನೇ ಮುಖ್ಯನ್ಯಾಯಮೂರ್ತಿಯಾದ ನ್ಯಾ. ದಿನೇಶ್‌ ಮಹೇಶ್ವರಿ ಅವರಿಗೆ ಪ್ರಮಾಣವಚನ ಬೋಧಿಸಿದರು. ನೂತನ ಸಿ.ಜೆ. ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾದ ಟಿ.ಬಿ ಜಯಚಂದ್ರ, ಕೆ.ಜೆ ಜಾರ್ಜ್‌, ಕಾಗೋಡು ತಿಮ್ಮಪ್ಪ ಸೇರಿ ಉಪಲೋಕಾಯುಕ್ತ ನ್ಯಾ. ಸುಭಾಷ್‌ ಬಿ. ಅಡಿ, ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಉಪಸ್ಥಿತರಿದ್ದರು.

Advertisement

5 ತಿಂಗಳಿಂದ ಖಾಲಿಯಿದ್ದ ಸ್ಥಾನ: ಈ ಹಿಂದೆ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿದ್ದ ಸುಬ್ರತೊ ಕಮಲ್‌ ಮುಖರ್ಜಿ 2017ರ
ಅ. 9ರಂದು ನಿವೃತ್ತಿ ಹೊಂದಿದ್ದರು. ಬಳಿಕ ಹಂಗಾಮಿ ಸಿ.ಜೆಯಾಗಿ ಹಿರಿಯ ನ್ಯಾ. ಎಚ್‌.ಜಿ ರಮೇಶ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ನ್ಯಾ. ದಿನೇಶ್‌ ಮಹೇಶ್ವರಿ ಅವರು ಸಿ.ಜೆ. ಆಗಿ ಅಧಿಕಾರ ವಹಿಸಿಕೊಂಡಿರುವುದರಿಂದ, ಕಳೆದ ಐದು ತಿಂಗಳಿಂದ ಖಾಲಿಯಿದ್ದ ಮುಖ್ಯನ್ಯಾಯ ಮೂರ್ತಿಗಳ ಸ್ಥಾನ ಭರ್ತಿಯಾದಂತಾಗಿದೆ. ನ್ಯಾ. ಎಚ್‌.ಜಿ ರಮೇಶ್‌, ಇನ್ನು ಮುಂದೆ ಸಿ.ಜೆ. ದಿನೇಶ್‌ ಮಹೇಶ್ವರಿ ನಂತರದ ಸ್ಥಾನದಲ್ಲಿ ಅಂದರೆ ಎರಡನೇ ಹಿರಿಯ ನ್ಯಾಯ ಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ನ್ಯಾ.ದಿನೇಶ್‌ ಮಹೇಶ್ವರಿ ಹಿನ್ನೆಲೆ: ರಾಜಸ್ಥಾನದ ಉದಯ್‌ಪುರ ಮೂಲದ ನ್ಯಾ. ದಿನೇಶ್‌ ಮಹೇಶ್ವರಿ 1958ರ ಮೇ15ರಂದು ಜನನ. ತಂದೆ ರಮೇಶ್ಚಂದ್ರ ರಾಜಸ್ಥಾನ ಹೈಕೋರ್ಟ್‌ನ ಖ್ಯಾತ ವಕೀಲರು ತಾಯಿ ರುಕ್ಮಿಣಿ ಮಹೇಶ್ವರಿ. ರಾಜಸ್ಥಾನ ವಿವಿ ಮಹಾರಾಜ ಕಾಲೇಜಿನಲ್ಲಿ ಭೌತಶಾಸ್ತ್ರ ಪದವಿ, ಬಳಿಕ 1980ರಲ್ಲಿ ಜೋಧ್‌ ಪುರ ವಿವಿಯಲ್ಲಿ ಕಾನೂನು ಪದವಿ ಪೂರೈಸಿ,
1981ರಲ್ಲಿ ರಾಜಸ್ಥಾನ ರಾಜ್ಯ ವಕೀಲರ ಪರಿಷತ್‌ ನಲ್ಲಿ ನೋಂದಣಿ ಸದಸ್ಯರಾದರು. ಸಿವಿಲ್‌ ಮೊಕದ್ದಮೆ ಹಾಗೂ ಸಾಂವಿಧಾನಿಕ
ವಿಷಯಗಳಲ್ಲಿ ಖಾತಿ ಪಡೆದಿದ್ದ ಅವರು, ರಾಜಸ್ಥಾನ ಸರ್ಕಾರದ ಪರ ನಗರಾಭಿವೃದ್ದಿ ಇಲಾಖೆ ಸೇರಿದಂತೆ ಹಲವೆಡೆ ಕರ್ತವ್ಯ
ನಿರ್ವಹಣೆ. 15 ವರ್ಷಗಳ ವೃತ್ತಿ ಬಳಿಕ 2004ರಿಂದ 2014ರವರೆಗೆ ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ, ಬಳಿಕ
2014 ರಿಂದ 2016ರ ಫೆಬ್ರವರಿಯವರೆಗೆ ಅಹಮದಾಬಾದ್‌ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಮೇಘಾಲಯ ಹೈಕೋರ್ಟ್‌ ಸಿಜೆಯಾಗಿ 2016 ಫೆ.24ರಂದು ನೇಮಕಗೊಂಡರು. ಬಳಿಕ ರಾಜ್ಯ ಹೈಕೋರ್ಟ್‌ಗೆ ಮುಖ್ಯ ನಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಆದೇಶ ಹೊರಡಿಸಿತು.

ಸಿಎಂಗಾಗಿ ಕಾದು ಕುಳಿತ ಗೌರ್ನರ್‌!:
ಸೋಮವಾರ ಸಂಜೆ. 4.30ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಸಿಂಧನೂರಿನಲ್ಲಿ ನಡೆದ ಕಾಂಗ್ರೆಸ್‌ ಜನಾಶೀರ್ವಾದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರಿಂದ ವಾಪಸ್‌ ಬಂದಿದ್ದು ತಡವಾಗಿತ್ತು. ಹೀಗಾಗಿ ಗಡಿಬಿಡಿಯಲ್ಲಿಯೇ ಸಂಜೆ ಐದು ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲ್ಲಿಯವರೆಗೂ ರಾಜ್ಯಪಾಲರು, ಸಿಜೆ ಸೇರಿದಂತೆ ಗಣ್ಯರು
ಕಾಯುವಂತಾಗಿತ್ತು. ತಡವಾಗಿ ಬಂದ ಕೂಡಲೇ ಸಿಎಂ ರಾಜ್ಯಪಾಲರ ಕೈ ಕುಲುಕಿ ತಡವಾಗಿ ಆಗಮಿಸಿದ್ದಕ್ಕೆ ಸಮಜಾಯಿಷಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next