Advertisement

ದಿನೇಶ್‌ಗೆ ಮತ್ತೆ “ಕೈ’ಉಸ್ತುವಾರಿ ಸೂಚನೆ

09:52 AM Jan 21, 2020 | Lakshmi GovindaRaj |

ಬೆಂಗಳೂರು: “ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ’! ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ದಿನೇಶ್‌ ಗುಂಡೂರಾವ್‌ ಅವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೀಡಿದ್ದಾರೆ ಎನ್ನಲಾದ ಈ ಸೂಚನೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Advertisement

ವೇಣುಗೋಪಾಲ್‌ ಅವರ ಈ ಒಂದು ಮಾತು ಕೈ ಪಾಳೆಯದ ಸದ್ಯದ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದೆ. ಕೆಪಿಸಿಸಿಗೆ ಹೊಸ ಸಾರಥ್ಯದ ನಿರೀಕ್ಷೆಯಲ್ಲಿ ದಿನಗಣನೆಯಲ್ಲಿರುವಾಗ “ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರಿಗೆ ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉಸ್ತುವಾರಿಗಳು ಹೇಳಿದ್ದು ಯಾಕೆ’ ಎಂಬ ಪ್ರಶ್ನೆ ಮೂಡಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಖ್ಯೆ, ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರ. ಪ್ರತಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕನ ಹುದ್ದೆಯ ವಿಚಾರದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕ ಪ್ರಹಸನ ಸದ್ಯಕ್ಕೆ ಮುಗಿಯುವುದು ಕಷ್ಟ ಎನ್ನಲಾಗುತ್ತಿದ್ದು, ಇದು ಇನ್ನೊಂದಿಷ್ಟು ದಿನ ನನೆಗುದಿಗೆ ಬೀಳಲಿದೆ. ಆದ್ದರಿಂದ ರಾಜೀನಾಮೆ ಕೊಟ್ಟ ಅಧ್ಯಕ್ಷರಿಗೆ ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು’ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಜತೆಗೆ, ದಿನೇಶ್‌ ಗುಂಡೂರಾವ್‌ ಅವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಈ ಸೂಚನೆ ಕೊಡುವ ಮೂಲಕ ಸ್ವಪ್ರತಿಷ್ಠೆ, ಗುಂಪುಗಾರಿಕೆ, ಮೂಲ-ವಲಸಿಗ, ಕಿರಿಯರು-ಹಿರಿಯರು ಸೇರಿ ಜಾತಿ, ಪ್ರಾದೇಶಿಕತೆ ಮತ್ತು ವೈಯಕ್ತಿಕ ವರ್ಚಸ್ಸುಗಳನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಅಡಚಣೆ ಉಂಟು ಮಾಡುತ್ತಿರುವ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಹೈಕಮಾಂಡ್‌ ಸಂದೇಶ ರವಾನಿಸಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ತಮ್ಮ ಆಪ್ತ ಎಂ.ಬಿ ಪಾಟೀಲ್‌ ಪರ ಹೈಕಮಾಂಡ್‌ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊನೆಗೆ ಅಧ್ಯಕ್ಷ ಹುದ್ದೆ ಡಿ.ಕೆ. ಶಿವಕುಮಾರ್‌ಗೆ ಪಕ್ಕಾ ಎಂದು ಹೇಳಲಾಗುತ್ತಿದ್ದಂತೆ ನಾಲ್ವರು ಕಾರ್ಯಾಧ್ಯಕ್ಷ ಸೂತ್ರವನ್ನು ಹೈಕಮಾಂಡ್‌ ಮುಂದಿಟ್ಟರು. ಇದಕ್ಕೆ ಆಕ್ಷೇಪವೆತ್ತಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಲ್ವರು ಕಾರ್ಯಾಧ್ಯಕ್ಷರಾದರೆ ಅಧಿಕಾರ ಕೇಂದ್ರಗಳು ಹೆಚ್ಚಾಗುತ್ತವೆ. ಇದು ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ಇಬ್ಬರು ಕಾರ್ಯಾಧ್ಯಕ್ಷರು ಸಾಕು ಎಂಬ ವಾದ ಮುಂದಿಟ್ಟರು.

Advertisement

ಈ ನಡುವೆ, ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನ ಹುದ್ದೆ ವಿಭಜಿಸುವುದು ಬೇಡ ಎಂದು ಸಿದ್ದರಾಮಯ್ಯ ಹೊಸ ವರಸೆ ತೆಗೆದರು. ಇದೆಲ್ಲಾ ಕಾರಣಗಳಿಂದಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬವಾಗುವ ಸಾಧ್ಯತೆಯಿದ್ದು, ಪಕ್ಷ ಸಂಘಟನೆಯ ದೃಷ್ಟಿಯಿಂದ ದಿನೇಶ್‌ ಗುಂಡೂರಾವ್‌ ಅವರಿಗೆ ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವೇಣುಗೋಪಾಲ್‌ ಮೂಲಕ ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ . ಈ ವಿಚಾರದಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್‌ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ತಾನು ಬದ್ಧ.

ಹೈಕಮಾಂಡ್‌ ತೀರ್ಮಾನ ಏನು ಬರುತ್ತದೆ, ಯಾವಾಗ ಬರುತ್ತದೆ ಎಂದು ಹೇಳಲು ನನಗೆ ಭವಿಷ್ಯ ಗೊತ್ತಿಲ್ಲ. ನಾನು ಜಾದೂಗಾರನೂ ಅಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಮಹಾರಾಷ್ಟ್ರ ಮಾದರಿ ಅಳವಡಿಕೆ ವಿಚಾರ ನನಗೆ ಗೊತ್ತಿಲ್ಲ. ಸಿಎಲ್‌ಪಿ, ಪ್ರತಿಪಕ್ಷ ನಾಯಕ ಹುದ್ದೆ ಪ್ರತ್ಯೇಕಗೊಳಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದ ಖರ್ಗೆ ನಾಲ್ವರು ಕಾರ್ಯಾಧ್ಯಕ್ಷರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ತಟಸ್ಥವಾಗಿದ್ದ ದಿನೇಶ್‌ ಗುಂಡೂರಾವ್‌: ಉಪ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ದಿನೇಶ್‌ ಗುಂಡೂರಾವ್‌ ಸುಮಾರು ಎರಡು ತಿಂಗಳಿಂದ ಪಕ್ಷದ ಕಾರ್ಯಚಟುವಟಿಕೆಗಳಿಗೂ ತಮಗೂ ಸಂಬಂಧವಿಲ್ಲ ಎಂಬಂತೆ ತಟಸ್ಥವಾಗಿ ಉಳಿದಿದ್ದರು. ಕೆಪಿಸಿಸಿ ಕಚೇರಿಗೆ ಒಂದೆರಡು ಬಾರಿ ಬಂದು ಹೋಗಿದ್ದು, ಬಿಟ್ಟರೆ ಪಕ್ಷದ ಕೆಲಸದಲ್ಲಿ ಅಷ್ಟೊಂದು ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ. ಈ ಮಧ್ಯೆ, ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ದಿನೇಶ್‌ ಗುಂಡೂರಾವ್‌ಗೆ ಹೇಳಿರುವುದು ಕುತೂಹಲ ಮೂಡಿಸಿದೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next