Advertisement

ಜಯಾ ಕ್ಷೇತ್ರದಲ್ಲಿ ದಿನಕರನ್‌ಗೆ ಜಯ

06:00 AM Dec 25, 2017 | Harsha Rao |

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್‌.ಕೆ. ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಆಪ್ತ ಹಾಗೂ ಪಕ್ಷೇತರ ಅಭ್ಯರ್ಥಿ ಟಿ.ಟಿ.ವಿ. ದಿನಕರನ್‌ ಭಾರೀ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಎಐಎಡಿಎಂಕೆಯ ಜಯಲಲಿತಾ ಬಣಕ್ಕೆ ಮುಖಭಂಗ ಉಂಟಾಗಿದೆ. ಅಚ್ಚರಿಯ ಸಂಗತಿಯೆಂದರೆ 2016ರಲ್ಲಿ ಜಯಲಲಿತಾ ಗೆದ್ದು ಬಂದಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಅಂತರದಿಂದ ದಿನಕರನ್‌ ಜಯ ಗಳಿಸಿದ್ದಾರೆ. ಜಯಾ 39,545 ಮತಗಳ ಅಂತರದಿಂದ ಗೆದ್ದು ಬಂದಿದ್ದರೆ, ಪ್ರಷರ್‌ ಕುಕ್ಕರ್‌ ಚಿಹ್ನೆಯಡಿ ಸ್ಪರ್ಧಿಸಿದ್ದ ದಿನಕರನ್‌ 40,707 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಐಎಡಿಎಂಕೆ ಅಭ್ಯರ್ಥಿ ಮಧುಸೂದನ್‌ 48,306 ಮತಗಳನ್ನು ಪಡೆದಿದ್ದಾರೆ.

Advertisement

ಎರಡೆಲೆ ಚಿಹ್ನೆಯನ್ನು ಶತಾಯಗತಾಯ ಪಡೆಯಲು ಯತ್ನಿಸಿದ್ದ ದಿನಕರನ್‌ ಕೆಲವೇ ದಿನಗಳ ಹಿಂದೆ ಸೋಲುಂಡಿದ್ದರು. ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬಣಕ್ಕೆ ಎಐಎಡಿಎಂಕೆಯ ಎರಡೆಲೆ ಚಿಹ್ನೆ ಸಿಕ್ಕಿತ್ತು.

ಇದರಿಂದ ಮೂಲ ಎಐಎಡಿಎಂಕೆ ಪನ್ನೀರ್‌ ಸೆಲ್ವಂ ಬಣದ್ದು ಎಂದು ಸಾಬೀತಾಗಿತ್ತು. ಅಷ್ಟೇ ಅಲ್ಲ, ಇದೇ ಚಿಹ್ನೆಯನ್ನು ಪಡೆಯಲು ಚುನಾವಣಾ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ದಿನಕರನ್‌ ಬಂಧನಕ್ಕೂ ಒಳಗಾಗಿದ್ದರು. ಈಗ ಜಾಮೀನು ಪಡೆದಿದ್ದಾರೆ.

ಬಿಜೆಪಿಗಿಂತ ನೋಟಾಗೇ ಹೆಚ್ಚು ಮತ: ಆರ್‌ಕೆ ನಗರ ಕ್ಷೇತ್ರದ ಜನರಿಗೆ ಬಿಜೆಪಿಗಿಂತ ನೋಟಾ ಹೆಚ್ಚು ಪ್ರಿಯವಾದಂತಿದೆ. ಬಿಜೆಪಿ ಅಭ್ಯರ್ಥಿ ಕರು ನಾಗರಾಜ ಕೇವಲ 1,417 ಮತಗಳನ್ನು ಪಡೆದಿದ್ದಾರೆ. ಆದರೆ ನೋಟಾಗೆ 2,373 ಮತಗಳು ಬಿದ್ದಿವೆ.

ದಿನಕರನ್‌ ಇತಿಹಾಸ: ತಮಿಳುನಾಡಿನ ಉಪಚುನಾವಣೆ ಯೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ಮೂಲಕ ದಿನಕರನ್‌ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿಂದೆ ರಾಜ್ಯದ ಯಾವ ಉಪಚುನಾವಣೆಯಲ್ಲೂ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿರಲಿಲ್ಲ. ಇನ್ನೊಂದೆಡೆ ಕಳೆದ 18 ವರ್ಷಗಳಲ್ಲಿ ಒಮ್ಮೆಯೂ ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷವು ಉಪಚುನಾವಣೆಯಲ್ಲಿ ಸೋತಿರಲಿಲ್ಲ.

Advertisement

ಸರಕಾರಕ್ಕೆ ಭೀತಿ: ಉಪಚುನಾವಣೆಯಲ್ಲಿ ಗೆದ್ದ ಅನಂತರದಲ್ಲಿ ಇದೀಗ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಸರಕಾರ ಉರುಳುವ ಭೀತಿ ಉಂಟಾಗಿದೆ. ದಿನಕರನ್‌ ಗೆಲುವಿನಿಂದ ಸಿಕ್ಕ ಆತ್ಮವಿಶ್ವಾಸದಿಂದಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜೈಲುಪಾಲಾಗಿರುವ ಶಶಿಕಲಾ ಬಣವು ಸರಕಾರ ಉರುಳಿಸುವಲ್ಲಿ ಇನ್ನಷ್ಟು ಶ್ರಮಿಸಲಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಗೆಲುವಿನ ಬಳಿಕ ದಿನಕರನ್‌ ಕೂಡ 3 ತಿಂಗಳೊಳಗೆ ಸರಕಾರ ಉರುಳಲಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಚುನಾವಣಾ ಆಯೋಗವು ದಿನಕರನ್‌ ಗೆದ್ದಿದ್ದಾರೆ ಎಂಬುದನ್ನು ಘೋಷಿಸುವುದಕ್ಕೂ ಮುನ್ನವೇ ಎಐಎಡಿಎಂಕೆ ಶಾಸಕರೊಬ್ಬರು ದಿನಕರನ್‌ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಒಂದಷ್ಟು ಶಾಸಕರು ಬಣ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next