ಒಂದು ಕಡೆ ಆತನ ಮದುವೆ ತಯಾರಿ, ಮತ್ತೂಂದು ಕಡೆ ಬೇಡ ಬೇಡವೆಂದರೂ ಆತನಿಗೆ ಗಂಟುಬೀಳುವ ಸಖತ್ ಸ್ಟೈಲಿಶ್ ಹುಡುಗಿ… ಈ ಇಬ್ಬರ ಮಧ್ಯೆ ಸಿಕ್ಕಿ ಒದ್ದಾಡುವ ನಾಯಕ.
ಹೇಗಾದರೂ ಮಾಡಿ ಈ ಪೇಚಾಟದಿಂದ ಪಾರಾಗಬೇಕೆಂದು ಏನೇನೋ ಪ್ರಯತ್ನ ಮಾಡಿದರೂ ಅದು ಫಲಿಸುವುದಿಲ್ಲ. ಹಾಗಾದರೆ, ನಾಯಕ ಯಾರನ್ನು ಮದುವೆಯಾಗುತ್ತಾನೆ, ಆತನ ಸಮಸ್ಯೆಗೆ ಪರಿಹಾರ ಸಿಗುತ್ತಾ? ಈ ಕುತೂಹಲ ನಿಮಗಿದ್ದರೆ ನೀವು ಈ ವಾರ ತೆರೆಕಂಡಿರುವ “ದಿಲ್ ಪಸಂದ್’ ಸಿನಿಮಾ ನೋಡಬೇಕು.
“ದಿಲ್ ಪಸಂದ್’ ಒಂದು ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್‌ಟೈನರ್. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ನಗಿಸುತ್ತಲೇ ಸಾಗುವುದು ಈ ಸಿನಿಮಾದ ಪ್ಲಸ್. ಚಿತ್ರದಲ್ಲೊಂದು ಕಥೆ ಇದೆ. ಅದನ್ನು ಹೆಚ್ಚು ಗಂಭೀರವಾಗಿ ಹೇಳದೇ ಫನ್ ಆಗಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಇಬ್ಬರು ಹುಡುಗಿಯರ ಮಧ್ಯೆ ಸಿಕ್ಕಿ ಒದ್ದಾಡುವ ಹುಡುಗನಾಗಿ ಕೃಷ್ಣ ಕಾಣಿಸಿಕೊಂಡಿದ್ದಾರೆ.
ಇಡೀ ಸಿನಿಮಾವನ್ನು ಕಲರ್‌ಫುಲ್ ಆಗಿ ಕಾಣಲು ಏನೇನು ಬೇಕೋ ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಒಂದು ಕಮರ್ಷಿಯಲ್ ಸಿನಿಮಾದಲ್ಲಿರಬೇಕಾದ ಭರ್ಜರಿ ಹೀರೋ ಇಂಟ್ರೊಡಕ್ಷನ್, ಪಂಚಿಂಗ್ ಡೈಲಾಗ್, ಗ್ಲಾಮರಸ್ ನಾಯಕಿಯರು, ಕಲರ್‌ಫುಲ್ ಸಾಂಗ್… ಎಲ್ಲವೂ ಈ ಚಿತ್ರದಲ್ಲಿದೆ. ದೃಶ್ಯಗಳನ್ನು ಹೆಚ್ಚು ಎಳೆದಾಡದೇ, ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೂಲಕ “ದಿಲ್ ಪಸಂದ್’ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿ ಇಷ್ಟವಾಗುತ್ತದೆ.
Related Articles
ಸಿನಿಮಾದಲ್ಲಿ ನಗುವಿನ ಜೊತೆ ಜೊತೆಗೆ ಅಲ್ಲಲ್ಲಿ ಸಿಗುವ ಟ್ವಿಸ್ಟ್‌ಗಳು ಚಿತ್ರದ ಕುತೂಹಲವನ್ನು ಹೆಚ್ಚಿಸುತ್ತಾ ಸಾಗುತ್ತದೆ. ನಾಯಕ ಕೃಷ್ಣ ತಮ್ಮ ಮ್ಯಾನರಿಸಂ ಮೂಲಕ ಇಷ್ಟವಾಗುತ್ತಾರೆ. ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ, ಮುದ್ದಿನ ಮಗನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇನ್ನು ನಾಯಕಿ ನಿಶ್ವಿಕಾ ಸಿನಿಮಾದುದ್ದಕ್ಕೂ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೂಬ್ಬ ನಾಯಕಿ ಮೇಘಾ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಜೊತೆಗೆ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ತಬಲನಾಣಿ, ಗಿರಿ ಸೇರಿದಂತೆ ಇತರರು ನಟಿಸಿದ್ದಾರೆ. ಒಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವನ್ನು ಬಯಸುವವರಿಗೆ ದಿಲ್ “ಪಸಂದ್’ ಆಗಬಹುದು.
ರವಿಪ್ರಕಾಶ್ ರೈ