Advertisement
ಗ್ರಾಪಂಗಳು ಆರ್ಥಿಕವಾಗಿ ಸದೃಢಗೊಳ್ಳಲು ತಮ್ಮ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕ. ಆದ್ದರಿಂದ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳನ್ನೂ ಡಿಜಟಲೀಕರಣಗೊಳಿಸಿ ತೆರಿಗೆ ವ್ಯಾಪ್ತಿಯ ಹೊರಗೆ ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ 2019ರ ಫೆ.8ರಂದು ಮಂಡಿಸಲಾದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
Related Articles
Advertisement
ತೆರಿಗೆ ವ್ಯಾಪ್ತಿಯ ಹೊರಗೆ ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು, ಪಂಚತಂತ್ರದ ಎಲ್ಲ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶಕ್ಕೆ ತರಲು ಬೇಕಾದ ದಾಖಲೆಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಬೇಕು. ಆಸ್ತಿಗಳ ಡಿಜಟಲೀಕರಣಕ್ಕೆ ಸ್ವಯಂಸೇವಾ ಸಂಸ್ಥೆಗಳಿಂದ ಸೇವೆ ಪಡೆದುಕೊಳ್ಳಬೇಕು. ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ಕರಾರುವಕ್ಕಾಗಿ ದಾಖಲಿಸಲು ಕಿಯೋನಿಕ್ಸ್ ಅಥವಾ ಬೇರೆ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎರಡು ತಿಂಗಳಲ್ಲಿ ಚಾಲನೆ: ಗ್ರಾಪಂಗಳ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲು ಇಲಾಖಾ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕೆ ಬೇಕಾದ ಪ್ರಾಥಮಿಕ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ಡಿಜಿಟಲೀಕರಣಕ್ಕೆ ಬೇಕಾದ “ಟ್ಯಾಬ್’ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗುತ್ತದೆ.
ಅದಕ್ಕಾಗಿ ತಾಂತ್ರಿಕ ಅನುಮೋದನಾ ಸಮಿತಿ ರಚಿಸಲಾಗಿದ್ದು, ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಂಡ ಬಳಿಕ ಇನ್ನೆರಡು ತಿಂಗಳಲ್ಲಿ ಅಧಿಕೃತವಾಗಿ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗುವುದು. ಇದರಿಂದ ಎಲ್ಲ ಆಸ್ತಿಗಳ ಪಕ್ಕಾ ಲೆಕ್ಕ ಸಿಗಲಿದ್ದು, ಅದರಿಂದಾಗಿ ಆಸ್ತಿಗಳಿಗೆ ತೆರಿಗೆ ವಿಧಿಸಲು ಅನುಕೂಲವಾಗಲಿದೆ. ಹೆಚ್ಚೆಚ್ಚು ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ, ಆದಾಯ ಹೆಚ್ಚಾಗಿ, ಆ ಮೂಲಕ ಗ್ರಾಪಂಗಳು ಆರ್ಥಿಕವಾಗಿ ಸದೃಢವಾಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಅನುಷ್ಠಾನ: “ಆಸ್ತಿಗಳ ಡಿಜಿಟಲೀಕರಣ’ ಯೋಜನೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಎಲ್ಲ ಗ್ರಾಪಂಗಳಲ್ಲಿ ಅನುಷ್ಠಾನಕ್ಕೆ ತರಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಚಿಕ್ಕಬಾಣಾವರ ಗ್ರಾಪಂನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಇದೀಗ ಅದನ್ನು ನಗರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸಲಾಗುತ್ತಿದೆ. ಇದರ ಸಾಧಕ-ಬಾಧಕಗಳನ್ನು ಅವಲೋಕಿಸಿ, ರಾಜ್ಯಾದ್ಯಂತ ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಸುಧಾರಣೆ ಮತ್ತು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ. ಬೆಂಗಳೂರು ನಗರ ಜಿಲ್ಲೆಯ ಪ್ರತಿ ಗ್ರಾಪಂಗಳಿಗೆ ತಲಾ 8ರಂತೆ 250 ಟ್ಯಾಬ್‌ಗಳನ್ನು ಖರೀದಿಸಲು ನಗರ ಜಿಲ್ಲಾ ಪಂಚಾಯಿತಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಸದ್ಯ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾಪಂಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಇದರ ಸಾಧಕ-ಬಾಧಕಗಳನ್ನು ಅವಲೋಕಿಸಿ ರಾಜ್ಯಾದ್ಯಂತ ಜಾರಿಗೆ ತರಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಒಂದೆರಡು ತಿಂಗಳಲ್ಲಿ ಡಿಜಿಟಲೀಕರಣ ಅಧಿಕೃತವಾಗಿ ಪ್ರಾರಂಭವಾಗಲಿದೆ.-ಯಾಲಕ್ಕಿಗೌಡ, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ. * ರಫೀಕ್ ಅಹ್ಮದ್