Advertisement

ಪರಂಪರೆಗೆ ಡಿಜಿಟಲ್‌ ಸ್ಪರ್ಶ! ಸಾಕ್ಷಾತ್‌ ಅನುಭವಕ್ಕಾಗಿ ನಂದಿಬೆಟ್ಟದಲ್ಲಿ ತಲೆಯೆತ್ತಲಿದೆ ಮೆಟಾವರ್ಸ್‌

12:32 AM Nov 28, 2022 | Team Udayavani |

ಬೆಂಗಳೂರು: ಕೃಷ್ಣದೇವ ರಾಯರ ಕಾಲದಲ್ಲಿ ಹಂಪಿಯ ವೈಭವ ಹೇಗಿತ್ತು? ಶತಮಾನಗಳ ಹಿಂದೆ ಆಂಧ್ರಪ್ರದೇಶದ ಐತಿಹಾಸಿಕ ಲೇಪಾಕ್ಷಿ ದೇವಾಲಯ ಹೇಗೆ ಕಾಣುತ್ತಿತ್ತು? 450 ವರ್ಷಗಳ ಹಿಂದಿನ ಗೋವಾದ ಅತಿದೊಡ್ಡ ಮಂಗೇಶಿ ದೇವಸ್ಥಾನದ ವೈಶಿಷ್ಟ್ಯ ಏನು?

Advertisement

– ಡಿಜಿಟಲ್‌ ತಂತ್ರಜ್ಞಾನ ಸ್ಪರ್ಶದಿಂದ ಇಂತಹ ಹತ್ತು ಹಲವು ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳ ಮರುಸೃಷ್ಟಿಗೆ ತಂಡವೊಂದು ಮುಂದಾಗಿದೆ. ಶೀಘ್ರದಲ್ಲೇ ನಗರದ ಹೊರವಲಯದಲ್ಲಿರುವ ನಂದಿಬೆಟ್ಟದಲ್ಲಿ ಈ ತಾಣಗಳ ಯಥಾವತ್‌ ಅನುಭವ (ವರ್ಚುವಲ್‌ ರಿಯಾಲಿಟಿ) ನೀಡುವ ಮೆಟಾವರ್ಸ್‌ ಕೂಡ ತಲೆಯೆತ್ತಲಿದೆ.
ಹೌದು, ಸಾಫ್ಟ್ವೇರ್‌ ಎಂಜಿನಿಯರ್‌ಗಳು, ಇತಿಹಾಸ ತಜ್ಞರು, ದೇವಾಲಯಗಳ ವಾಸ್ತುಶಿಲ್ಪಿಗಳು ಒಂದೇ ವೇದಿಕೆಯಲ್ಲಿ ಬಂದು “ಹು ವಿಆರ್‌’ ಎಂಬ ಕಂಪೆನಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಗತಕಾಲದ ದೇವಾಲಯಗಳು, ಪಾರಂಪರಿಕ ತಾಣಗಳನ್ನು ಡಿಜಿಟಲ್‌ ತಂತ್ರಜ್ಞಾನದಿಂದ ಯಥಾವತ್ತಾಗಿ ಮರುಸೃಷ್ಟಿಸಿ ಈಗಿನ ಪೀಳಿಗೆಗೆ ಪರಿಚಯಿಸುತ್ತಿದ್ದಾರೆ. ಇಂಥ ಪ್ರಯತ್ನ ದೇಶದಲ್ಲಿ ಇದೇ ಮೊದಲುಎನ್ನಲಾಗಿದೆ. ದೇಶದಲ್ಲಿ ಸಾವಿರಾರು ದೇವಾಲಯಗಳು, ಪಾರಂಪರಿಕ ತಾಣಗಳಿವೆ.

ಅವೆಲ್ಲವುಗಳಿಗೆ ಒಂದೊಂದು ಇತಿಹಾಸ ಇದೆ. ಅವುಗಳಲ್ಲಿ ಬಹುತೇಕ ಹಾಳಾಗಿವೆ. ಉದಾಹರಣೆಗೆ ಹಂಪಿ ಕಣ್ಮುಂದೆಯೇ ಇದೆ. ಕೃಷ್ಣದೇವ ರಾಯನ ಕಾಲದಲ್ಲಿ ಹೇಗಿತ್ತು ಎಂಬುದನ್ನು ಕೇಳಿದ್ದೇವೆಯೇ ವಿನಾ ಕಣ್ಣಲ್ಲಿ ಕಂಡಿಲ್ಲ. ಈಗಿರುವ ಸ್ಥಿತಿ ಯಲ್ಲೇ ಆ ತಾಣಗಳ ಅಧ್ಯಯನ ನಡೆಸಿ, ಆ್ಯನಿಮೇಷನ್‌ ಸೇರಿದಂತೆ ಡಿಜಿಟಲೀಕರಣದಿಂದ ಅದನ್ನು ಮತ್ತೆ ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎಂದು “ಹು ವಿಆರ್‌ ಸಂಸ್ಥಾಪಕ ಅಜಿತ್‌ ಪದ್ಮನಾಭ್‌ ತಿಳಿಸುತ್ತಾರೆ.

“ಸುಮಾರು 9 ಜನರಿರುವ ಕಂಪೆನಿ ಇದಾಗಿದ್ದು, ಇತಿಹಾಸ ತಜ್ಞರು, ದೇವಾಲಯಗಳ ವಾಸ್ತುಶಿಲ್ಪಿಗಳು, ನರವಿಜ್ಞಾನಿಗಳು, ಟೆಕಿಗಳು, ಚಿತ್ರ ನಿರ್ಮಾಪಕರು, ಸಂಗೀತಗಾರರು ಇದ್ದಾರೆ. ಅವರು ಗತಕಾಲದ ಈ ದೇವಾಲಯಗಳು ಅಥವಾ ತಾಣಗಳ ಅಧ್ಯಯನ ನಡೆಸಿ ವಿನ್ಯಾಸ ಸಿದ್ಧಪಡಿಸುತ್ತಾರೆ. ಅನಂತರ ತಂತ್ರಜ್ಞಾನದ ಸಹಾಯದಿಂದ ಅದನ್ನು ಮರುಸೃಷ್ಟಿ ಮಾಡಿ ಈಗಿನ ಪೀಳಿಗೆಗೆ ಪರಿಚಯಿಸಲಾಗುವುದು. ಈಗಾಗಲೇ ಹಂಪಿ, ಗೋವಾದ ಮಂಗೇಶಿ ದೇವಸ್ಥಾನ, ಲೇಪಾಕ್ಷಿ ಸೇರಿ ದಂತೆ ಆರು ತಾಣಗಳನ್ನು ಮರುಸೃಷ್ಟಿ ಮಾಡಲಾಗುತ್ತಿದೆ. ಅನಂತರ ವರ್ಚುವಲ್‌ ರಿಯಾಲಿಟಿ ಮೂಲಕ ಅದರ ಅನುಭವ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ಈಚೆಗೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಅನಾವರಣಗೊಂಡ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ, ಆಂಧ್ರಪ್ರದೇಶದ 175 ದೇವಾಲಯಗಳು, ಹಂಪಿಯ ಮರುಸೃಷ್ಟಿ ಯೋಜನೆಗಳಿಗೆ ಸಂಬಂ ಧಿಸಿ ಸರಕಾರಗಳೊಂದಿಗೆ ಮಾತುಕತೆ ನಡೆದಿದೆ.

ಇದಲ್ಲದೆ ಅಯೋಧ್ಯೆ ರಾಮ ಮಂದಿರ ವಸ್ತುಸಂಗ್ರಹಾಲಯ, ಏಕತಾ ಪ್ರತಿಮೆ, ಮೈಸೂರು ಪರಂಪರೆ ಬಗ್ಗೆಯೂ ಚರ್ಚೆ ನಡೆದಿದೆ. ಈ ಮಧ್ಯೆ ಮುಂದಿನ ಐದಾರು ತಿಂಗಳುಗಳಲ್ಲಿ ನಂದಿಬೆಟ್ಟದಲ್ಲಿ ಪಾರಂಪರಿಕ ತಾಣಗಳ ಅನುಭವ ಕೇಂದ್ರವನ್ನು ತೆರೆಯಲಾಗುತ್ತಿದೆ. ಅಲ್ಲಿಗೆ ಬರುವ ಜನ ಪ್ರಕೃತಿ ಸೌಂದರ್ಯದ ಜತೆಗೆ ಪರಂಪರೆಯ ಸವಿಯನ್ನೂ ಸವಿಯಬಹುದು. ಹೀಗೆ ಬರುವವರಿಗೆ 3ಡಿ ತಂತ್ರಜ್ಞಾನದಿಂದ ತಯಾರಿಸಿದ ಆಯಾ ತಾಣಗಳ ಪ್ರತಿ ಮೆಯೂ ಮಾರಾಟಕ್ಕೆ ಲಭ್ಯ ಎಂದೂ ಅಜಿತ್‌ ಪದ್ಮನಾಭ್‌ ಹೇಳಿದ್ದಾರೆ.

Advertisement

ಪ್ರವಾಸೋದ್ಯಮಕ್ಕೂ ಪೂರಕ
ಇಂಗ್ಲೆಂಡ್‌, ಅಮೆರಿಕ ಸರಕಾರ ಗಳೊಂದಿಗೂ ಮಾತುಕತೆ ನಡೆದಿದೆ. ಇಲ್ಲಿನ ತಾಣಗಳನ್ನು ಡಿಜಿಟಲ್‌ ರೂಪದಲ್ಲಿ ತಯಾರಿಸಿ ಆ ದೇಶಗಳಿಗೆ ಕಳುಹಿಸಲಾಗುವುದು. ಅಲ್ಲಿನ ಪ್ರತಿನಿಧಿಗಳು ಸ್ಥಳೀಯವಾಗಿ ಪ್ರಚುರಪಡಿಸುತ್ತಾರೆ. ಆಗ ಅಲ್ಲಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಹೀಗೆ ಇದು ಪ್ರವಾ ಸೋದ್ಯಮ ಬೆಳವಣಿಗೆಗೂ ಪೂರಕ ವಾಗಲಿದೆ ಎಂದು ಹೇಳಿದರು.

“ಬಹುತೇಕ ಹಿರಿಯ ನಾಗರಿಕರಿಗೆ ಈ ತಾಣಗಳಿಗೆ ತೆರಳಲು ಆಗುವು ದಿಲ್ಲ. ಅಂತಹವರು ತಾವಿದ್ದಲ್ಲಿಯೇ ಅದರ ಅನುಭವವನ್ನು ಪಡೆಯ ಬಹುದು. ನಿಗದಿತ ಶುಲ್ಕ ವಿಧಿಸ ಲಾಗುವುದು’ ಎಂದು ಅಜಿತ್‌ ಪದ್ಮನಾಭ್‌ ತಿಳಿಸಿದ್ದಾರೆ.

 - ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next