ಬಾಗಲಕೋಟೆ: ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮುಂದುವರೆದಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಲು ಬಾಗಲಕೋಟೆ ಕೋರ್ ವಿಜ್ಞಾನ ಕೇಂದ್ರದಿಂದ ಉಚಿತ ಡಿಜಿಟಲ್ ಬೇಸಿಗೆ ಶಿಬಿರ ಆರಂಭಿಸಿದೆ.
ಸಮಗ್ರ ಶಿಕ್ಷಣ-ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಬಾಗಲಕೋಟೆ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಡಿ ಕಳೆದ ಹಲವು ವರ್ಷಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಪ್ರಶ್ನಾರ್ಥಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ನವನಗರದ ಸೆಕ್ಟರ್ ನಂ.37ರಲ್ಲಿ ವಿಜ್ಞಾನ ಕೇಂದ್ರದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡು, ಕಲಿಕೆಗೆ ಪ್ರೋತ್ಸಾಹ ನೀಡುತ್ತಿತ್ತು. ಈಗ ಲಾಕ್ ಡೌನ್ ಇರುವುದರಿಂದ ಏ.2ರಿಂದಲೇ ಡಿಜಿಟಲ್ ಶಿಬಿರ ನಡೆಸುತ್ತಿದೆ.
ಆನ್‌ಲೈನ್ ವಾಟ್ಸ್‌ಆ್ಯಪ್ ಮೂಲಕ ಮಕ್ಕಳ ಹಾಗೂ ಪಾಲಕರ ಮೋಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಆನ್‌ಲೈನ್ ವಾಟ್ಸ್‌ಆಪ್ ಗ್ರುಪ್ ಅನ್ನು ನಿರ್ಮಿಸಿ ಆ ಗ್ರೂಪ್ ಗಳಿಂದ ವಿದ್ಯಾಥಿಗಳು ಮನೆಯಲ್ಲಿಯೇ ಕುಳಿತು ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳು ವಿಜ್ಞಾನ ಮತ್ತು ಗಣಿತದ ಕಡಿಮೆ ವೆಚ್ಚದ ಮಾದರಿಗಳ ತಯಾರಿಕೆ, ವಿವಿಧ ಪೇಪರ್ ಕಟಿಂಗ್, ಮೋಜಿನ ವಿಜ್ಞಾನ ಹಾಗೂ ಓರಿಗಾಮಿ, ಕಿರಿಗಾಮಿ ಚಟುವಟಿಕೆಗಳ ವಿಡಿಯೋಗಳನ್ನು ಅಂತರ್ಜಾಲದ ಮೂಲಕ ವಾಟ್ಸಾಪ್ ಗುಂಪುಗಳಿಗೆ ಪ್ರತಿದಿನ ಕಳುಹಿಸಲಾಗುತ್ತಿದೆ. ಗುಂಪಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಆ ವಿಡಿಯೋಗಳನ್ನು ನೋಡಿ ವಿಜ್ಞಾನದ ಚಟುವಟಿಕೆಗಳನ್ನು ಮತ್ತು ಪೇಪರ್ ಕ್ರಾಫ್ಟ್ ಚಟುವಟಿಕೆಗಳನ್ನುತಮ್ಮ ಪಾಲಕೊರೋದಿಗೆ ಮಡಿ ಪುನಃ ಚಟುವಟಿಕೆಗಳ ಛಾಯಾ ಚಿತ್ರಗಳನ್ನು ಗುಂಪುಗಳಿಗೆ ಹಾಕುತ್ತಿದ್ದಾರೆ.
ಹೀಗೆ ಪ್ರತಿ ದಿನ ಮಕ್ಕಳಲ್ಲಿ ವಿಜ್ಞಾನ ವಿಷಯದೆಡೆಗೆ ಆಸಕ್ತಿ, ಪ್ರಶ್ನಾರ್ಥಕ ಮನೋಭಾವ, ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಉಚಿತ ಆನ್‌ಲೈನ್ ಡಿಜಿಟಲ್ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಬಾಗಲಕೋಟೆ ಕೋರ್ ವಿಜ್ಞಾನ ಕೇಂದ್ರದಿಂದ 3 ವಾಟ್ಸಾಪ್ ಗುಂಪುಗಳ ಮೂಲಕ ಉಚಿತ ಆನ್‌ಲೈನ್ ಡಿಜಿಟಲ್ ಬೇಸಿಗೆ ಶಿಬಿರ ನಡೆಯುತ್ತಿದೆ. ಬಾಗಲಕೋಟೆ ತಾಲೂಕಿನ 145, ಬಾದಾಮಿ ಮತ್ತು ಬೀಳಗಿ ತಾಲೂಕಿನ 125 ಹಾಗೂ ಬಿವಿವಿಎಸ್‌ನ ಬಿಇಡಿ ಕಲೇಜಿನ 68 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಕೋರ್ ವಿಜ್ಞಾನ ಕೇಂದ್ರದ ಸಂಚಾಲಕ ಸಂತೋಷಕುಮಾರ ತಿಳಿಸಿದ್ದಾರೆ. ವಿವರವನ್ನು ಸಂತೋಷಕುಮಾರ ಬೆಳಮ್‌ಕರ್ (7795771883), ಬಸವರಾಜ ಕಮತರ (9902375790) ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.