Advertisement

Editorial: ಶಿಕ್ಷಣದಲ್ಲಿ ಡಿಜಿಟಲ್‌ ಕ್ರಾಂತಿ: ಆರೋಗ್ಯ ವಿ.ವಿ. ನಡೆ ಸ್ತುತ್ಯರ್ಹ

09:49 AM Feb 28, 2024 | Team Udayavani |

ಕೊರೊನಾನಂತರ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ಆವಿಷ್ಕಾರಗಳು ನಡೆಯುತ್ತಲೇ ಬಂದಿವೆ. ತಂತ್ರಜ್ಞಾನದ ನೈಜ ಫ‌ಲಾನುಭವಿಯಾಗಬೇಕಿರುವ ಶಿಕ್ಷಣ ರಂಗ ಇತ್ತ ಇನ್ನಷ್ಟು ಹೆಚ್ಚಿನ ಗಮನ ಹರಿಸುವ ಅನಿವಾರ್ಯತೆ ಇದೆ.

Advertisement

ಈ ನಿಟ್ಟಿನಲ್ಲಿ ದೇಶದ ಹಲವು ವಿಶ್ವ ವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು ಪ್ರಯೋಗ ನಿರತವಾಗಿವೆ. ಈ ದಿಸೆಯಲ್ಲಿ ಕರ್ನಾಟಕದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವೂ ಕಾರ್ಯೋನ್ಮುಖವಾಗಿದ್ದು, ಈಗಾಗಲೇ ಕೆಲವೊಂದು ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ.

ಈಗ ಆರೋಗ್ಯ ವಿ.ವಿ ಡಿಜಿಟಲ್‌ ಕ್ರಾಂತಿಯಲ್ಲಿ ಇನ್ನೊಂದು ಹೆಜ್ಜೆ ಇರಿಸಿದ್ದು ಕಾಗದರಹಿತ ಪರೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ಕಾಗದ ರಹಿತ ಪರೀಕ್ಷೆಯ ಚಿಂತನೆ ಹೊಸದೇನಲ್ಲ. ಬೆರಳೆಣಿಕೆಯ ಸಂಸ್ಥೆಗಳಲ್ಲಿ ಈ ಮಾದರಿಯ ಪರೀಕ್ಷೆ ನಡೆಯುತ್ತಿದೆಯಾದರೂ ಅದಿನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.

ಮಾರ್ಚ್‌ನಲ್ಲಿ ನಡೆಯಲಿರುವ ಫೆಲೋಶಿಪ್‌ ಮತ್ತು ಫಿಸಿಯೋಥೆರಪಿ ವಿಭಾಗದ ಪರೀಕ್ಷೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಕಾಗದ ರಹಿತವಾಗಿ ನಡೆಸಲು ಆರೋಗ್ಯ ವಿವಿ ಸನ್ನದ್ಧವಾಗಿದೆ. ಈಗಾಗಲೇ “ಡಿಜಿಟಲ್‌ ಮೌಲ್ಯಮಾಪನ’ ವ್ಯವಸ್ಥೆಯನ್ನು ಪರಿಚಯಿಸಿ, ಯಶಸ್ವಿಯಾಗಿರುವ ಆರೋಗ್ಯ ವಿವಿಗೆ ದೇಶಾದ್ಯಂತ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗಿದೆ.

ದೇಶದ ವಿವಿಧ ರಾಜ್ಯಗಳು ವಿವಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ತಮ್ಮ ವ್ಯಾಪ್ತಿಯಲ್ಲಿ ಡಿಜಿಟಲ್‌ ಮೌಲ್ಯಮಾಪನವನ್ನು ಅನುಷ್ಠಾನಗೊಳಿಸಲು ಆಸಕ್ತಿ ತೋರಿವೆ.

Advertisement

ಇದರಿಂದ ಆರೋಗ್ಯ ವಿ.ವಿ. ಯ ಡಿಜಿಟಲ್‌ ಕ್ರಾಂತಿಗೆ ಹೆಚ್ಚಿನ ಬಲ ಲಭಿಸಿದೆ. ನಿಮ್ಹಾನ್ಸ್‌ನಲ್ಲಿ ಈಗಾಗಲೇ ನಿರ್ದಿಷ್ಟ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಕಾಗದ ರಹಿತ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಇದೇ ಮಾದರಿಯಲ್ಲಿ ಆರೋಗ್ಯ ವಿವಿ ಕೂಡ ಪ್ರಾಯೋಗಿಕ ನೆಲೆಯಲ್ಲಿ ಡಿಜಿಟಲ್‌ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿ ಕೊಂಡಿದೆ.

ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಂಡಂತಾಗುವುದರ ಜತೆಯಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಪ್ರತೀ ವರ್ಷ ಉತ್ತರಪತ್ರಿಕೆಗಳಿಗಾಗಿ ವಿವಿ ಕೋಟ್ಯಂತರ ರೂ.ಗಳನ್ನು ವ್ಯಯಿಸುತ್ತಿದ್ದು, ಕಾಗದ ರಹಿತ ಪರೀಕ್ಷಾ ವ್ಯವಸ್ಥೆ ಜಾರಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಉಳಿತಾಯವಾಗಲಿದೆ.

ಡಿಜಿಟಲ್‌ ಪರೀಕ್ಷೆಗಾಗಿ ಟ್ಯಾಬ್‌ಗಳನ್ನು ಖರೀದಿಸಿ, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಹಲವಾರು ವರ್ಷಗಳ ವರೆಗೆ ಬಳಸಬಹುದಾಗಿದೆ. ಇದರಿಂದ ಉತ್ತರಪತ್ರಿಕೆಗಾಗಿ ಪ್ರತೀವರ್ಷ ವ್ಯಯಿಸುವ ಕೋಟ್ಯಂತರ ರೂ. ಉಳಿತಾಯವಾಗಲಿದೆ. ಆ ಮೂಲಕ ಮರಗಳನ್ನು ಸಂರಕ್ಷಣೆ ಮಾಡಿದಂತಾಗುತ್ತದೆ.

ಕಾಗದ ರಹಿತ ಪರೀಕ್ಷ ವ್ಯವಸ್ಥೆ ಜಾರಿ ಅಷ್ಟೊಂದು ಸುಲಭದ ಮಾತೇನಲ್ಲ. ತಂತ್ರಜ್ಞಾನದ ಬಳಕೆಯ ಸಂದರ್ಭದಲ್ಲಿ ಹಲವಾರು ತಾಂತ್ರಿಕ ಅಡಚಣೆಗಳು ಎದುರಾಗುವುದು ಸಹಜ. ಇನ್ನು ಆವಿಷ್ಕಾರಗಳು ಮುಂದುವರಿದಂತೆ ಅವುಗಳ ದುರುಪಯೋಗ, ಅಕ್ರಮಗಳು ಕೂಡ ಅಷ್ಟೇ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿವೆ.

ಈಗಿನ ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಇದು ಅಕ್ಷರಶಃ ಬಲುದೊಡ್ಡ ಸವಾಲಾಗಿದ್ದು, ಇವೆಲ್ಲ ದರ ಸಂಪೂರ್ಣ ಅರಿವಿದ್ದುಕೊಂಡೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಸಾಹಸಕ್ಕೆ ಆರೋಗ್ಯ ವಿವಿ ಮುಂದಾಗಿರುವುದು ಸ್ತುತ್ಯಾರ್ಹ.

ಪ್ರಾಯೋಗಿಕ ನೆಲೆಯಲ್ಲಿ ಈಗ ಕಾಗದ ರಹಿತ ಪರೀಕ್ಷೆಯನ್ನು ನಡೆಸಿ, ಅದರ ಫ‌ಲಶ್ರುತಿಯನ್ನು ಆಧರಿಸಿ ಮುಂದಿನ ಹಂತದಲ್ಲಿ ಇನ್ನಷ್ಟು ಸುಧಾರಣೆಗಳೊಂದಿಗೆ ಅದನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪೂರ್ಣರೂಪದಲ್ಲಿ ಅನುಷ್ಠಾನಗೊಳಿಸುವ ಚಿಂತನೆ ವಿವಿಯದ್ದಾಗಿದೆ. ಆರೋಗ್ಯ ವಿವಿಯ ಈ ಸಾಹಸ, ಸೃಜನಶೀಲ ಮತ್ತು ಆವಿಷ್ಕಾರ ಮನೋಭಾವಕ್ಕೆ ಶಹಭಾಸ್‌ ಸಲ್ಲಲೇಬೇಕು. ಇದು ರಾಜ್ಯ ಮತ್ತು ದೇಶದ ಇತರ ಶಿಕ್ಷಣ ಸಂಸ್ಥೆಗಳು, ವಿವಿಗಳಿಗೆ ಮಾದರಿಯಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next