Advertisement

ದ.ಕ., ಉಡುಪಿಯ 306 ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಲೈಬ್ರೆರಿ

12:50 AM Jan 26, 2022 | Team Udayavani |

ಮಂಗಳೂರು: “ಡಿಜಿಟಲ್‌ ಇಂಡಿಯಾ’ ಪರಿಕಲ್ಪನೆಗೆ ಪೂರಕವೆಂಬಂತೆ ಗ್ರಾಮ ಪಂಚಾಯತ್‌ಗಳ ಗ್ರಂಥಾಲಯಗಳು ಡಿಜಿಟಲೀಕರಣಗೊಳ್ಳುತ್ತಿದ್ದು ಗ್ರಾಮೀಣ ಓದುಗರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ.

Advertisement

ಪುಸ್ತಕಗಳ ಸಂಗ್ರಹ ಮಾತ್ರವೇ ಇದ್ದ ಗ್ರಾಮೀಣ ಗ್ರಂಥಾಲಯಗಳಲ್ಲಿ ಈಗ ಇಂಟರ್‌ನೆಟ್‌ ಸಂಪರ್ಕ ಸಹಿತವಾದ ಕಂಪ್ಯೂಟರ್‌ಗಳು, ಪ್ರಿಂಟರ್‌ ಮೊದಲಾದ ಸೌಲಭ್ಯಗಳಿವೆ. ಕಟ್ಟಡಗಳೂ ಹೊಸ ಸ್ವರೂಪ ಪಡೆದುಕೊಂಡು ಗಮನ ಸೆಳೆಯುತ್ತಿವೆ.

ದ.ಕ. ಜಿಲ್ಲೆಯ ಒಟ್ಟು 223 ಗ್ರಾ.ಪಂ.ಗಳ ಪೈಕಿ 218ರಲ್ಲಿ ಗ್ರಂಥಾಲಯಗಳಿದ್ದು 167ಕ್ಕೆ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ. ಉಡುಪಿ ಜಿಲ್ಲೆಯ 155 ಗ್ರಾ.ಪಂ. ಗ್ರಂಥಾಲಯಗಳ ಪೈಕಿ 139 ಡಿಜಿಟಲ್‌ ಆಗಿವೆ. 3 ಗ್ರಾ.ಪಂ.ಗಳು ಒಂದೊಂದು ಹೆಚ್ಚುವರಿ “ಬ್ರಾಂಚ್‌’ ಲೈಬ್ರೆರಿ ಹೊಂದಿವೆ. 16 ಗ್ರಾ.ಪಂ.ಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು ಅಲ್ಲಿಯೂ ಡಿಜಿಟಲ್‌ ಗ್ರಂಥಾಲಯ ರಚನೆಗೆ ರೂಪರೇಖೆ ಸಿದ್ಧವಾಗಿದೆ.

ಗ್ರಾ.ಪಂ.ಗಳ ಆಸಕ್ತಿ
ಹೆಚ್ಚಿನ ಗ್ರಾ.ಪಂ.ಗಳ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ಡಿಜಿಟಲ್‌ ಲೈಬ್ರೆರಿ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕೆಲವು ಗ್ರಂಥಾಲಯಗಳಲ್ಲಿ ಒಂದಕ್ಕಿಂತ ಹೆಚ್ಚು ಕಂಪ್ಯೂಟರ್‌ ವ್ಯವಸ್ಥೆ ಮಾಡಲಾಗಿದೆ. ದ.ಕ. ಜಿಲ್ಲೆಯ ಪೆರ್ಮುದೆಯಲ್ಲಿ ಜಿಲ್ಲೆಯಲ್ಲೇ ಮೊದಲ ಡಿಜಿಟಲ್‌ ಗ್ರಂಥಾಲಯ ಆರಂಭಿಸಲಾಗಿತ್ತು. “ಡಿಜಿಟಲ್‌ ಲೈಬ್ರೆರಿಯಿಂದ ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಮಕ್ಕಳನ್ನು ಸೆಳೆಯಲು ಕಟ್ಟಡವನ್ನು ಕೂಡ ಆಕರ್ಷಕವಾಗಿ ವಿನ್ಯಾಸಗೊಳಿಸಿದ್ದೇವೆ’ ಎನ್ನುತ್ತಾರೆ ಪೆರ್ಮುದೆ ಗ್ರಾ.ಪಂ. ಅಧ್ಯಕ್ಷ ಪ್ರಸಾದ್‌ ಎನ್‌. ಅಂಚನ್‌. “ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪಠ್ಯಗಳು ಕೂಡ ಇಲ್ಲಿ ಲಭ್ಯವಿದೆ’ ಎನ್ನುತ್ತಾರೆ ಉಡುಪಿ ಜಿಲ್ಲೆಯ ಎಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಂತ ಭಟ್‌.

ನಾನು 7ನೇ ತರಗತಿಯಿಂದಲೂ ಗ್ರಾ.ಪಂ.ನ ಗ್ರಂಥಾಲಯ ಬಳಸುತ್ತಿದ್ದೇನೆ. ಈಗ ನಮ್ಮ ಗ್ರಂಥಾಲಯ ಡಿಜಿಟಲ್‌ ಆಗಿರುವುದರಿಂದ ಇಂಟರ್‌ನೆಟ್‌ ಮೂಲಕ ಯಾವುದೇ ಪುಸ್ತಕವನ್ನು ಸುಲಭವಾಗಿ ಹುಡುಕಿ ಓದಬಹುದಾಗಿದೆ. ತರಗತಿಯ ಇತರ ಚಟುವಟಿಕೆಗಳಿಗೆ ಬೇಕಾದ ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ.
– ಮಮತಾ, ಪೆರ್ಮುದೆ
8ನೇ ತರಗತಿ, ಬಜಪೆ ಸೈಂಟ್‌ ಜೋಸೆಫ್ ಪ.ಪೂ. ಕಾಲೇಜು

Advertisement

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಪೂರಕವಾಗಿ ಗ್ರಾಂ.ಪಂ.ಗಳ ಗ್ರಂಥಾಲಯಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿ ಡಿಜಿಟಲೀಕರಣ ಮಾಡಲಾಗಿದೆ. ಉಚಿತವಾಗಿ ಬಳಸಬಹುದಾಗಿದೆ. ಸಾರ್ವಜನಿಕರೂ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಅನುಕೂಲವಾಗಲು ರಜಾದಿನಗಳಲ್ಲೂ ತೆರೆದಿಡುವಂತೆ ಸೂಚಿಸಿದ್ದೇವೆ.
– ಡಾ| ಕುಮಾರ್‌, ಸಿಒಒ ದ.ಕ. ಜಿ.ಪಂ
– ಡಾ| ನವೀನ್‌ ಭಟ್‌, ಸಿಇಒ ಉಡುಪಿ ಜಿ.ಪಂ.

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next