Advertisement

ಮರದ ಮೇಲೆ ಡಿಜಿಟಲ್‌ ಇಂಡಿಯಾ! ನೆಟ್ ವರ್ಕ್ ಕಿರಿಕ್

03:45 AM Jun 06, 2017 | Harsha Rao |

ಬಿಕನೇರ್‌: ಈ ಮೊಬೈಲ್‌ ನೆಟ್ವರ್ಕ್ ಅನ್ನೋದು ಪಕ್ಕಾ 420. ಅಗತ್ಯವಿದ್ದಾಗ ಕೈಗೆ ಸಿಗದೆ ಮನುಷ್ಯರನ್ನು ಕೋತಿಗಳ ರೀತಿ ಆಡಿಸುತ್ತದೆ. ಈ ನೆಟ್ವರ್ಕ್ ಆಡಿಸುವ ಆಟದಿಂದ ಕೇಂದ್ರ ಸಚಿವರು ಕೂಡ ಹೊರತಾಗಿಲ್ಲ. ಮೊಬೈಲ್‌ ನೆಟ್ವರ್ಕ್ನ ಇಂಥ ಕಿತಾಪತಿಗೆ ತಾಜಾ ಉದಾಹರಣೆ ರಾಜಸ್ಥಾನದ ಗ್ರಾಮವೊಂದರಲ್ಲಿ ಸಿಕ್ಕಿದ್ದು, ಇಲ್ಲಿ ಸಿಗ್ನಲ್‌ ಸರಿಯಾಗಿ ಸಿಗುತ್ತಿಲ್ಲ ಎಂದು ಕೇಂದ್ರ ಸಚಿವರೊಬ್ಬರು ಮರ ಏರಿ ಮಾತಾಡಿದ್ದಾರೆ.

Advertisement

ಮಾಧ್ಯಮ ಅಭಿಯಾನವೊಂದರ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಕೇಂದ್ರದ ವಿತ್ತ ಖಾತೆ ಸಹಾಯಕ ಸಚಿವ ಅರ್ಜುನ್‌ ರಾಂ ಮೇಘವಾಲ್‌ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ ವೇಳೆ ಜನರಿಗೆ ಸೌಲಭ್ಯ ತಲುಪಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಫೋನಾಯಿಸಲು ಮುಂದಾದಾಗ, ಸಿಗ್ನಲ್ಲೇ ಇರಲಿಲ್ಲ.

ಮೊಬೈಲ್‌ ಹಿಡಿದ ಕೈ ಮೇಲೆ ಮಾಡಿಕೊಂಡು ಆಚೀಚೆ ಓಡಾಡಿದರೂ ಸಿಗ್ನಲ್‌ ಬರಲಿಲ್ಲ. ಸಿಗ್ನಲ್‌ ಪ್ರಾಬ್ಲಿಂನಿಂದ ಬೇಸತ್ತ ಸಚಿವರು ಕಡೆಗೆ, ಸ್ಥಳೀಯರ ಸಲಹೆ ಮೇರೆಗೆ ಅಲ್ಲೇ ಇದ್ದ ಮರವೊಂದಕ್ಕೆ ಏಣಿ ಹಾಕಿಸಿಕೊಂಡು ಹತ್ತಿ ನಿಂತರು. ಆಗ ಬಂತು ನೋಡಿ ನೆಟ್ವರ್ಕ್!

ಒಂದೆಡೆ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಮಂತ್ರ ಜಪಿಸುತ್ತಿದ್ದರೆ, ಮತ್ತೂಂದೆಡೆ ಸಚಿವರ ಸ್ವಕ್ಷೇತ್ರದಲ್ಲೇ ಮೊಬೈಲ್‌ ಸಿಗ್ನಲ್‌ಗೆ ಸಮಸ್ಯೆಯಾಗಿರುವುದು ಮತ್ತು ಸಚಿವರು ಮರ ಹತ್ತಿ ಸಿಗ್ನಲ್‌ ಹಿಡಿದಿರುವುದು ಇದೀಗ ಪ್ರತಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next