ಮಂಗಳೂರು: ಮೆಸ್ಕಾಂ ವ್ಯಾಪ್ತಿಯ ಎಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳನ್ನು ಬದಲಿಸಿ ಡಿಜಿಟಲ್ ಎಲೆಕ್ಟ್ರೋಸ್ಟಾಟಿಕ್ ಮಾಪಕಗಳನ್ನು ಅಳವಡಿಸುವ ಯೋಜನೆ 5 ವರ್ಷ ವಾದರೂ ಪೂರ್ಣವಾಗಿಲ್ಲ!
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 2019 ರಲ್ಲಿ ಹೊಸ ಮಾಪಕ ಅಳವಡಿಕೆಯ ಹೊಣೆಯನ್ನು ಖಾಸಗಿ ಏಜೆನ್ಸಿಗೆ ನೀಡಿದ್ದು, ಇದುವರೆಗೆ 18,89,753 ಮಾಪಕ ಬದಲಾಯಿಸಲಾಗಿದೆ. 5,39,656 ಬಾಕಿಯಿದೆ.
ಹೊಸ ಮಾಪಕ “ಸ್ವಯಂ ಚಾಲಿತ ‘ ವ್ಯವಸ್ಥೆ ಹೊಂದಿದ್ದು, ಬಳಕೆ ವಿದ್ಯುತ್ ಯೂನಿಟ್ ಪ್ರದರ್ಶಿತವಾಗಲಿದೆ. ಇದರಿಂದ ವಿದ್ಯುತ್ ದುರ್ಬಳಕೆ ಅಥವಾ ನಕಲಿ ರೀಡಿಂಗ್ ಗೆ ಅವಕಾಶವಿಲ್ಲ. ಕೇಂದ್ರ ಸರಕಾರದ ಸೂಚನೆ ಮೇರೆಗೆ ಅನುಷ್ಠಾನಿಸಲಾಗುತ್ತಿದೆ.
ಮೆಸ್ಕಾಂ 2021-22ರಲ್ಲಿ ಶೇ. 9.02 ವಿತರಣ ನಷ್ಟ ಹೊಂದಿದ್ದು, ಇದರ ಪರಿಹಾರಕ್ಕೆ ಹೊಸ ಮಾಪಕ ಅಸ್ತ್ರವಾಗ ಬೇಕಿತ್ತು. ಆದರೆ, ಮೀಟರ್ ಅಳವಡಿಕೆ ಮಾತ್ರ ನಿರೀಕ್ಷೆಯ ಗುರಿ ತಲುಪಿಲ್ಲ.
ಗ್ರಾಹಕರಾದ ಸತ್ಯನಾರಾಯಣ ಉಡುಪ ಅವರು, ಹೊಸ ಮಾಪಕದಿಂದ ವಿದ್ಯುತ್ ಸೋರಿಕೆ ತಡೆದು ನಿಖರತೆ ಕಾಯ್ದುಕೊಳ್ಳಲು ಸಾಧ್ಯ. ಆದರೆ ಮೆಸ್ಕಾಂಗೆ ಆಸಕ್ತಿ ಇಲ್ಲ. ಹೀಗಾಗಿ ಹೊಸ ಮಾಪಕ ಅಳವಡಿಕೆಗೆ ವೇಗ ನೀಡುತ್ತಿಲ್ಲ’ ಎಂದು ಉದಯವಾಣಿಗೆ ತಿಳಿಸಿದ್ದಾರೆ.
Related Articles
ಮೆಸ್ಕಾಂ ಅಧಿಕಾರಿಗಳ ಪ್ರಕಾರ, “ಟೆಂಡರ್ ಪಡೆದ ಏಜೆನ್ಸಿಯಿಂದ ಮೀಟರ್ ಅಳವಡಿಸಲಾಗಿದೆ. ಆದರೆ, ಬಾಕಿ ಮೀಟರ್ ಅಳವಡಿಕೆಗೆ ಹೊಸ ಟೆಂಡರ್ ಕರೆಯಲಾಗಿದೆ. ಇದರಂತೆ, ಪ್ರಸ್ತುತ 3.75 ಲಕ್ಷ ಸಿಂಗಲ್ ಫೇಸ್ ಹಾಗೂ 22.50 ಸಾವಿರ ತ್ರೀ ಫೇಸ್ ಎಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳನ್ನು ಬದಲಾಯಿಸಲು ಬೇಕಾದ ಸ್ಟಾÂಟಿಕ್ ಮಾಪಕ ಖರೀದಿಗೆ ಟೆಂಡರ್ ಕರೆದಿದ್ದು, ಬಾಕಿ ಮಾಪಕಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು ಎನ್ನುತ್ತಾರೆ.
ಈ ಮಧ್ಯೆ, ಹೊಸ ಮಾಪಕದ ಜತೆ “ಪ್ರೀಪೇಯ್ಡ ಸ್ಮಾರ್ಟ್ ವಿದ್ಯುತ್ ಮೀಟರ್’ ಅಳವಡಿಸುವ ಕಾರ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಇದಕ್ಕೆ ಮತ್ತೆ ಹೊಸ ಮೀಟರ್ ಅಳವಡಿಸಲು ಮತ್ತೂಮ್ಮೆ ಮೆಸ್ಕಾಂ ವ್ಯಾಪ್ತಿಯಲ್ಲಿ ಮೀಟರ್ ಅಳವ ಡಿಸಬೇಕಾ? ಎಂಬ ಬಗ್ಗೆ ಗ್ರಾಹಕರಲ್ಲಿ ಪ್ರಶ್ನೆ ಮೂಡಿದೆ.
ಸೋರಿಕೆ ತಡೆಗೆ ಡಿಜಿಟಲ್ ಪ್ರಯೋಗ
ಎಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳು ಬಳಸಿದ ಯೂನಿಟ್‌ಗಳನ್ನು ಮಾತ್ರ ಅಳೆಯುತ್ತವೆ. ನಿಖರತೆ, ಸೋರಿಕೆ ಹಾಗೂ ಕಳ್ಳತನ ತಡೆ ಆಗದು. ಹೊಸ ಮಾಪಕದಲ್ಲಿ ನಿಖರತೆ ಖಚಿತ. ನಿರ್ವಹಣೆ ಸುಲಭ. ಬಳಕೆಯ ಜತೆಗೆ ಬೇಡಿಕೆಯನ್ನೂ ದಾಖಲಿಸುತ್ತದೆ. ಕಡಿಮೆ ಲೋ ಡಿಂಗ್‌ನಲ್ಲೂ ನಿಖರತೆ ತಪ್ಪದು. ಮಾಪಕ ಕಾರ್ಯ ನಿರ್ವಹಣೆಗೂ ಕಡಿಮೆ ವಿದ್ಯುತ್ ಸಾಕು ಎಂಬುದು ಮೆಸ್ಕಾಂ ಅಭಿಪ್ರಾಯ.
ಬಾಕಿ ಮೀಟರ್ ಶೀಘ್ರ ಅಳವಡಿಕೆ
ಹಳೆಯ ಮೆಕ್ಯಾನಿಕಲ್ ಮೀಟರ್ ಅನ್ನು ಡಿಜಿಟಲ್ ಮೀಟರ್‌ಗೆ ಬಹುತೇಕ ಬದಲಾಯಿಸಲಾಗಿದೆ. ಉಳಿದವುಗಳಿಗೆ ಟೆಂಡರ್ ಕರೆದಿದ್ದು, ಶೀಘ್ರವೇ ಅಳವಡಿಸಲಾಗುವುದು.
-ಮಂಜಪ್ಪ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
– ದಿನೇಶ್ ಇರಾ