Advertisement

ಡಿಜಿಟಲ್‌ ಸಂತೆ!

09:21 PM Oct 06, 2019 | Sriram |

ಊರ ಸಂತೆಯಲ್ಲಿ ಮಾರಾಟಗಾರರು ಅಕ್ಕಪಕ್ಕದವರೊಂದಿಗೆ ಜಿದ್ದಿಗೆ ಬಿದ್ದವರಂತೆ ತಮ್ಮಲ್ಲಿಯೇ ಅತ್ಯಂತ ಕಡಿಮೆ ಬೆಲೆ ಎನ್ನುವ ರೀತಿಯಲ್ಲಿ ರೇಟ್‌ ಕೂಗುತ್ತಿರುತ್ತಾರೆ. ಆನ್‌ಲೈನ್‌ ಶಾಪಿಂಗ್‌ ಕೂಡಾ ಒಂದು ರೀತಿಯಲ್ಲಿ ಊರ ಸಂತೆಯ ಹಾಗೆಯೇ… ಆದರಿಲ್ಲಿ ರೇಟ್‌ ಕೂಗುವುದು ಮನುಷ್ಯರಲ್ಲ ಕಂಪ್ಯೂಟರ್‌ ಪ್ರೋಗ್ರಾಮುಗಳು!

Advertisement

ಯಾವುದೇ ಊರಿನ ಸಂತೆ ಅಲ್ಲಿನವರಿಗೆ ಬಹಳ ವಿಶೇಷವಾಗಿರುತ್ತದೆ. ಅಲ್ಲಿನ ವಾತಾವರಣ, ಚಿರಪರಿಚಿತ ಮುಖಗಳು ವಾರ ವಾರವೂ ಜಾತ್ರೆಯ ವಾತಾವರಣವನ್ನು ಸೃಷ್ಟಿಸುತ್ತವೆ. ತರಕಾರಿ, ಸೊಪ್ಪು, ಕರಿದ ತಿನಿಸು, ಅಲಂಕಾರಿಕ ಸಾಮಗ್ರಿ ಮಾರುವವರು, ತಾವು ಗುರುತು ಮಾಡಿಟ್ಟುಕೊಂಡ ಜಾಗದಲ್ಲಿ ಗೋಣಿ ಚೀಲಗಳನ್ನು ಹಾಸಿ ಆಸೀನರಾಗಿರುತ್ತಾರೆ. ಅವರು ಅಕ್ಕಪಕ್ಕದವರ ಜೊತೆ ಪೈಪೋಟಿಗೆ ಬಿದ್ದವರಂತೆ ಬೆಲೆ ಕೂಗುತ್ತಿರುತ್ತಾರೆ. ಬೆಳಿಗ್ಗೆ ಒಂದು ರೇಟಾದರೆ ಸಂಜೆ ಗಂಟುಮೂಟೆ ಕಟ್ಟುವ ಹೊತ್ತು ಹತ್ತಿರವಾಗುತ್ತಿದ್ದಂತೆಯೇ ಇನ್ನೊಂದು ರೇಟು. ತಂದದ್ದೆಲ್ಲವೂ ಒಮ್ಮೆ ಖರ್ಚಾಗಿಬಿಡಲಿ ಎಂಬ ಕಾರಣಕ್ಕೆ ದರ ಕಡಿತ ಮಾರಾಟ! “ಇಂದಿನ ಆನ್‌ಲೈನ್‌ ಜಮಾನಾದಲ್ಲಿ ಹಾಗಿಲ್ಲವೇ ಇಲ್ಲ, ವ್ಯವಹಾರವೆಲ್ಲವೂ ಮುಕ್ತವಾಗಿ ಆಧುನಿಕ ತಂತ್ರಜ್ಞಾನದ ನೆರವಿನಿಂದ ನಡೆಯುತ್ತಿದೆ.’- ಈ ಅಭಿಪ್ರಾಯ ಬಹುತೇಕರಲ್ಲಿದೆ. ಆದರೆ ಆನ್‌ಲೈನ್‌ ಶಾಪಿಂಗ್‌ ಕೂಡಾ ನಮ್ಮ ಊರುಗಳ ಸಂತೆಯಂತೆಯೇ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಅದನ್ನು ಅರಿಯುವುದಕ್ಕೆ ಇ ಕಾಮರ್ಸ್‌ ಕ್ಷೇತ್ರದಲ್ಲಿ “ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌’ ತಂತ್ರಜ್ಞಾನ ಹೇಗೆ ಬಳಕೆಯಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಬೆಲೆ ಕೂಗುತ್ತಿವೆ ಕಂಪ್ಯೂಟರ್‌
ಊರ ಸಂತೆಯಲ್ಲಿ ಮಾರಾಟಗಾರರು ಮಾರುಕಟ್ಟೆಯಲ್ಲಿ ಆಯಾ ಸಾಮಗ್ರಿಯ ಬೆಲೆ ಯಾವ ರೀತಿ ಓಡುತ್ತಿದೆ ಎಂಬುದನ್ನು ಅರಿತು ಅದರ ಪ್ರಕಾರ ಬೆಲೆಯನ್ನು ನಿಗದಿ ಪಡಿಸುತ್ತಾರೆ. ಅವರು ಏನೇ ಆಫ‌ರ್‌ಗಳನ್ನು ನೀಡಿದರೂ ಮೂರುಕಟ್ಟೆಯ ಬೆಲೆಯ ಸುತ್ತಲೇ ಗಿರಕಿ ಹೊಡೆಯುತ್ತಾರೆ. ಇದೇ ವ್ಯವಸ್ಥೆಯನ್ನು ಆನ್‌ಲೈನ್‌ ಶಾಪಿಂಗ್‌ ತಾಣಗಳೂ ಅಳವಡಿಸಿಕೊಂಡಿವೆ. ಇಲ್ಲಿ ವಸ್ತುಗಳ ಬೆಲೆಯನ್ನು ನಿಗದಿ ಪಡಿಸುವುದು ಚಾಣಾಕ್ಷ ಕಂಪ್ಯೂಟರ್‌ ಪ್ರೋಗ್ರಾಮುಗಳು, ಸಾಫ್ಟ್ವೇರುಗಳು. ಈ ಹಿಂದೆ ಕೆಲಸಗಾರರೇ ಮಾರುಕಟ್ಟೆಯ ವ್ಯತ್ಯಯವನ್ನು ಗಮನದಲ್ಲಿರಿಸಿಕೊಂಡು ಬೆಲೆಯನ್ನು ನಮೂದಿಸುತ್ತಿದ್ದರು. ಆದರೆ ಈಗ ಆ ಕೆಲಸವನ್ನು ಕಂಪ್ಯೂಟರ್‌ ಪ್ರೋಗ್ರಾಮುಗಳು ಮಾಡುತ್ತಿವೆ. ಇನ್ನೂ ಪ್ರಯೋಗಾತ್ಮಕ ಹಂತದಲ್ಲಿರುವುದರಿಂದ ಆ ಪ್ರೋಗ್ರಾಮುಗಳ ಕಾರ್ಯಕ್ಷಮತೆಯ ಪರೀಕ್ಷೆಯನ್ನು ಮಾತ್ರ ಮನುಷ್ಯರು ಮಾಡುತ್ತಿದ್ದಾರೆ.

ಬೇಸ್ತು ಬೀಳಿಸುವುದರಲ್ಲೂ ಮುಂದು
ಆನ್‌ಲೈನ್‌ನಲ್ಲಿ ವಸ್ತುಗಳ ಬೆಲೆ ಕಡಿಮೆ ಇರುತ್ತದೆ ಎನ್ನುವ ನಂಬಿಕೆ ಸಾಮಾನ್ಯವಾಗಿ ನಮ್ಮೆಲ್ಲರಲ್ಲೂ ಇದೆ. ಆದರೆ ಈಗೀಗ ಆ ನಂಬಿಕೆ ಅಲ್ಲಾಡತೊಡಗಿದೆ. ಏಕೆಂದರೆ ಯಾವೆಲ್ಲಾ ಮಾರ್ಗಗಳಿಂದ ದುಡ್ಡು ಸಂಪಾದಿಸಬಹುದು ಎನ್ನುವ ತನ್ನ ಚಾಳಿಯನ್ನು ಮನುಷ್ಯ ಎಐ ಪ್ರೋಗ್ರಾಮುಗಳಿಗೂ ಅಂಟಿಸಿಬಿಟ್ಟಿದ್ದಾನೆ. ಹೊರ ಜಗತ್ತಿಗೆ ಗೊತ್ತೇ ಆಗದಂತೆ ಅನೇಕ ವಿಧಾನಗಳಲ್ಲಿ ಅದು ತನ್ನ ಸಂಸ್ಥೆಗೆ ಲಾಭ ತಂದುಕೊಡುತ್ತಿದೆ. ಒಬ್ಬೊಬ್ಬರಿಗೆ ಒಂದೊಂದು ಬೆಲೆಯನ್ನು ತೋರಿಸುವುದು, ಕೆಲ ನಿಮಿಷಗಳ ಮುಂಚೆ ಇದ್ದ ವಸ್ತು ತರುವಾಯ ಪೂರ್ತಿ ಸೋಲ್ಡ್‌ ಔಟ್‌ ಆಗಿಬಿಟ್ಟಿದೆ ಎಂದು ತೋರಿಸುವುದು, ಮತ್ತೂಮ್ಮೆ ಅದೇ ವಸ್ತು ಲಭ್ಯವಿದೆ ಎಂದು ಹೇಳಿ ಹೆಚ್ಚಿನ ಬೆಲೆಗೆ ಮಾರುವುದು, 20%, 30% ದರ ಕಡಿತ ಎಂದು ಹೇಳಿ ಮಾರುಕಟ್ಟೆಯ ಬೆಲೆಯನ್ನೇ ತೋರಿಸುವುದು - ಇವೆಲ್ಲಾ ಕೆಲವು ಉದಾಹರಣೆಗಳಷ್ಟೇ. ದೈತ್ಯ ಇ ಕಾಮರ್ಸ್‌ ಸಂಸ್ಥೆಗಳ ಬಳಿ ಇರುವ ಎಐ ತಂತ್ರಜ್ಞಾನ, ಶಕ್ತಿಶಾಲಿಯಾದುದು. ಅದು ಮಿಕ್ಕ ಶಾಪಿಂಗ್‌ ತಾಣಗಳಲ್ಲಿನ ವಸ್ತುಗಳ ಬೆಲೆಗಳನ್ನು ಪರಿಶೀಲಿಸಿ ತನ್ನ ವಸ್ತುಗಳ ಬೆಲೆಯನ್ನು ಅದಕ್ಕೆ ಪೈಪೋಟಿ ನೀಡುವಂತೆ ನಿಗದಿ ಪಡಿಸುತ್ತದೆ. ಅಲ್ಲದೆ ಜಾಗತಿಕ ಮತ್ತು ಸ್ಥಳೀಯ ವಿದ್ಯಮಾನಗಳು, ಮಾರುಕಟ್ಟೆಯ ಸ್ಥಿತಿಗತಿ ಮುಂತಾದ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಬೆಲೆ ನಿಗದಿ ಪಡಿಸುವುದೂ ಇದೆ.

ಈ ರೀತಿ ಬೆಲೆ ನಿಗದಿ ಪಡಿಸುವುದರ ಬಗ್ಗೆ ಅರ್ಥಶಾಸ್ತ್ರ ಪರಿಣತರು ತಕರಾರು ವ್ಯಕ್ತಪಡಿಸುತ್ತಾರೆ. ಏಕೆಂದರೆ ಇಲ್ಲಿ ಮಾರುಕಟ್ಟೆಯ ಸ್ಥಿತಿಗತಿಗಳಿಗಿಂತ ಸಂಸ್ಥೆಯ ಲಾಭದ ದೃಷ್ಟಿಯಿಂದ ಬೆಲೆ ನಿಗದಿಯಾಗುತ್ತಿದೆ. ಇದರಿಂದಾಗಿ ಆಯಾ ವಸ್ತುಗಳ ಮಾರುಕಟ್ಟೆಯ ಬೆಲೆಯೂ ಹೆಚ್ಚುತ್ತಿದೆ. ಕಡೆಯಲ್ಲಿ ಇದರ ಬಿಸಿ ತಟ್ಟುವುದು ಗ್ರಾಹಕನಿಗೇ ಎನ್ನುವುದು ತಜ್ಞರ ಅಭಿಪ್ರಾಯ. ಇವೆಲ್ಲಾ ವಿದ್ಯಮಾನಗಳಿಂದಾಗಿ “ಡೈನಾಮಿಕ್‌ ಪ್ರೈಸಿಂಗ್‌’ ಎಂಬ ಹೊಸ ಪದಗುತ್ಛವೇ ಹುಟ್ಟಿಕೊಡಿದೆ. ಕ್ಷಣ ಕ್ಷಣವೂ ಬದಲಾಗುವ ಆನ್‌ಲೈನ್‌ ಬೆಲೆಯ ಪರಿಣಾಮವಿದು. ಗ್ರಾಹಕ ಅದಕ್ಕೆ ಒಗ್ಗಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.

Advertisement

ಬೇರೆ ಬೇರೆ ಶಾಪಿಂಗ್‌ ವಿಂಡೋಗಳು
ಇನ್ನೊಂದು ವಿಷಯ. ಯಾವುದೇ ಆನ್‌ಲೈನ್‌ ಶಾಪಿಂಗ್‌ ತಾಣಗಳ ಆ್ಯಪ್‌ ಹಾಗೂ ಜಾಲತಾಣಗಳಿಗೆ ಭೇಟಿ ಕೊಟ್ಟಾಗ ತೆರೆದುಕೊಳ್ಳುವ ವಿಂಡೋ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಅಂದರೆ ಒಬ್ಬ ಗ್ರಾಹಕ ಲಾಗಿನ್‌ ಆದಾಗ ಆತನಿಗೆ ಮೊದಲ ಪುಟದಲ್ಲಿ ಕಾಣುವ ವಸ್ತುಗಳು ಇನ್ನೊಬ್ಬ ಗ್ರಾಹಕನಿಗೂ ಕಾಣಬೇಕೆಂದಿಲ್ಲ. ಪ್ರತಿಯೊಬ್ಬರಿಗೂ ಅವರವರ ಆಸಕ್ತಿಗೆ ತಕ್ಕಂತೆ, ಅವರ ಇಷ್ಟಗಳಿಗೆ ತಕ್ಕಂತೆ ವಸ್ತುಗಳು, ದಿರಿಸುಗಳು ಡಿಸ್‌ಪ್ಲೇ ಆಗುತ್ತವೆ. ಗ್ರಾಹಕ ಈ ಹಿಂದೆ ಖರೀದಿಸಿದ ವಸ್ತುಗಳು, ಕಾಯ್ದಿರಿಸಿದ ವಸ್ತುಗಳು ಮತ್ತಿತರ ಮಾಹಿತಿಯ ಆಧಾರದಲ್ಲಿ ಆತನ ವಿಂಡೋವನ್ನು ಕಂಪ್ಯೂಟರ್‌ ಪ್ರೋಗ್ರಾಮುಗಳು ಅರೇಂಜ್‌ ಮಾಡುತ್ತದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಏಕೆಂದರೆ ಗ್ರಾಹಕ ತನಗೆ ಬೇಕಾದುದನ್ನು ಪಡೆಯಲು ಗಂಟೆಗಳ ಕಾಲ ಸಮಯ ವ್ಯಯ ಮಾಡಬೇಕೆಂದಿಲ್ಲ. ಅವನಿಗೆ ಇಷ್ಟವಿರುವುದನ್ನು ತಾನೇ ಹುಡುಕಿ ಅವನ ಮುಂದಿಡುತ್ತದೆ ಈ ಎಐ ತಂತ್ರಜ್ಞಾನ.

ಚಾಣಾಕ್ಷ ಪ್ರೋಗ್ರಾಮುಗಳು
ಇ ಕಾಮರ್ಸ್‌ ಕ್ಷೇತ್ರದಲ್ಲಿ ಬಳಕೆಯಾಗುವ ಕಂಪ್ಯೂಟರ್‌ ಪ್ರೋಗ್ರಾಮುಗಳು Self learning ಸಾಮರ್ಥ್ಯವನ್ನು ಹೊಂದಿರುವಂಥವು. ಅಂದರೆ, ತಮಗೆ ಸಿಗುವ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಂಡು ಕಾಲದಿಂದ ಕಾಲಕ್ಕೆ ಅಪ್‌ಡೇಟ್‌ ಆಗುತ್ತಿರುತ್ತದೆ. ಎಷ್ಟರ ಮಟ್ಟಿಗೆ ಎಂದರೆ, ಭವಿಷ್ಯದಲ್ಲಿ ಯಾವುದೇ ಉತ್ಪನ್ನದ ಬೆಲೆ ಎಷ್ಟಿರಬಹುದೆಂಬುದನ್ನೂ ಊಹಿಸುವಷ್ಟರಮಟ್ಟಿಗೆ. ಅಷ್ಟೇ ಅಲ್ಲ, ಆನ್‌ಲೈನ್‌ ವಸ್ತ್ರ ಮಾರಾಟ ತಾಣಗಳು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಬಳಸಿ ಭವಿಷ್ಯದಲ್ಲಿ ಯಾವ ಯಾವ ವಿನ್ಯಾಸದ ಬಟ್ಟೆಗಳು ಟ್ರೆಂಡ್‌ ಆಗಲಿವೆ ಎಂಬುದನ್ನೂ ಪತ್ತೆ ಹಚ್ಚಬಲ್ಲ ಸಾಹಸಕ್ಕೆ ಇಳಿದಿವೆ. ಉದಾಹರಣೆಗೆ, ಆನ್‌ಲೈನ್‌ ವಸ್ತ್ರ ಮಾರಾಟ ಸಂಸ್ಥೆ ಮಿಂತ್ರಾ 2015ರಲ್ಲಿ “ರ್ಯಾಪಿಡ್‌ ಮೊಡಾ’ ಎಂಬ ಫ್ಯಾಷನ್‌ ಬ್ರ್ಯಾಂಡನ್ನು ಗ್ರಾಹಕರಿಗೆ ಪರಿಚಯಿಸಿತ್ತು. ಅ ಬ್ರ್ಯಾಂಡ್‌ನ‌ ಶರ್ಟು, ಪ್ಯಾಂಟುಗಳು ಬಹಳ ಬೇಗ ಖರ್ಚಾಗಿ ಹೋದವು. ಗ್ರಾಹಕರು ಅವನ್ನು ಬಹಳ ಇಷ್ಟಪಟ್ಟರು. ಅಚ್ಚರಿಯ ವಿಷಯವೆಂದರೆ ರ್ಯಾಪಿಡ್‌ ಮೊಡಾ ಎನ್ನುವ ಹೆಸರಿನಲ್ಲಿ ಮಿಂತ್ರಾ ನಡೆಸಿದ ಒಂದು ಪ್ರಯೋಗವಾಗಿತ್ತದು. ಆ ಬ್ರ್ಯಾಂಡಿನಡಿ ಪರಿಚಯಿಸಿದ ವಸ್ತ್ರಗಳ ವಿನ್ಯಾಸವನ್ನು ರೂಪಿಸಿದ್ದು ಒಂದು ಕಂಪ್ಯೂಟರ್‌ ಪ್ರೋಗ್ರಾಮು! ಮಿಂತ್ರಾದಲ್ಲಿ ಹೆಚ್ಚು ಬಿಕರಿಯಾದ ವಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ವಿನ್ಯಾಸ ಸೃಷ್ಟಿಸುವಂತೆ ಮಾಡುವುದು ಅದರ ಕೆಲಸವಾಗಿತ್ತು. ಆ ರೀತಿ ಪಳಗಿ, ಈಗ ಹೊಸದೊಂದು ಟ್ರೆಂಡನ್ನೇ ಹುಟ್ಟುಹಾಕುವಂಥ ಸಾಮರ್ಥ್ಯವನ್ನು ಅವು ಪಡೆದುಕೊಂಡು ಬಿಟ್ಟಿವೆ.

 - ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next