Advertisement

ಡಿಜಿಟಲ್‌ ಎಟಿಎಂ; ಫೋನ್‌ ಪೇಯಿಂದ ಹಣ ಡ್ರಾ ಮಾಡುವ ಫೀಚರ್‌!

05:01 PM Feb 02, 2020 | Sriram |

ಬ್ಯಾಂಕ್‌ ಖಾತೆಯಲ್ಲಿ ಹಣ ಇದ್ದರೂ ಕೆಲವೊಮ್ಮೆ ಎಟಿಎಂ ಹತ್ತಿರ ಇರುವುದಿಲ್ಲ. ಇಲ್ಲವೇ ರಿಪೇರಿಗೆ ಬಂದಿರುತ್ತದೆ. ಇಂಥ ಸಮಯದಲ್ಲಿ ಕ್ಯಾಶ್‌ ಪಡೆಯಲು ಫೋನ್‌ ಪೇ ಸವಲತ್ತನ್ನು ತರುತ್ತಿದೆ. ಇಷ್ಟು ದಿನ ಡಿಜಿಟಲ್‌ ಹಣ ಪಾವತಿಗೆ ಮಾತ್ರವೇ ಬಳಕೆಯಾಗುತ್ತಿದ್ದ ಆ್ಯಪ್‌ ಆಧಾರಿತ ತಂತ್ರಜ್ಞಾನ ಸಹಾಯದಿಂದ ಇನ್ನುಮುಂದೆ ಕ್ಯಾಶ್‌ ಡ್ರಾ ಮಾಡುವುದೂ ಸಾಧ್ಯವಾಗಲಿದೆ.

Advertisement

ಬದಲಾವಣೆ ಬದುಕಿನ ಲಕ್ಷಣ. ಯಾವುದೇ ಅವಿಷ್ಕಾರ ನಿಂತ ನೀರಾಗದೆ ಕಾಲಕ್ಕೆ ತಕ್ಕಂತೆ, ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಸವಲತ್ತುಗಳನ್ನು ಒಳಗೊಳ್ಳುತ್ತಾ ಸಾಗಿದರೆ ಮಾತ್ರ ಅದು ಯಾವ ಕಾಲಕ್ಕೂ ಸಲ್ಲುತ್ತದೆ. ಅಂಥ ಬದಲಾವಣೆಯನ್ನು ಫೋನ್‌ ಪೇ ತಂದಿದೆ. ಇದುವರೆಗೂ ಡಿಜಿಟಲ್‌ ಪಾವತಿಗೆ ಮಾತ್ರವೇ ಬಳಕೆಯಾಗುತ್ತಿದ್ದ ಈ ಆ್ಯಪ್‌, ಇನ್ನುಮುಂದೆ ಹಣವನ್ನು ಡ್ರಾ ಮಾಡಲೂ ಬಳಕೆಯಾಗಲಿದೆ. ಅಂದರೆ, ಇನ್ನು ಮುಂದೆ ಎಟಿ.ಎಂಗಳು ಮಾಡುತ್ತಿದ್ದ ಕೆಲಸವನ್ನು ಫೋನ್‌ ಪೇ ಕೂಡಾ ಮಾಡಲಿದೆ. ದೇಶದಲ್ಲಿ ಎ.ಟಿ.ಎಂ.ಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ, ಫೋನ್‌ ಪೇ ಈ ವ್ಯವಸ್ಥೆಯನ್ನು ಕಲ್ಪಿಸುತ್ತಿರುವುದು ಸಮಯೋಚಿತವಾಗಿದೆ.

ಗ್ರಾಹಕರು ಯಪಿಐ (UPI) ಮೂಲಕ ಹಣವನ್ನು ಪಡೆಯುವ ಅವಕಾಶವನ್ನು ಫೋನ್‌ ಪೇ ಕಲ್ಪಿಸಿದೆ. ಈ ವ್ಯವಸ್ಥೆ ಕಳೆದ ವಾರ ಜಾರಿಗೆ ಬಂದಿದ್ದು, ಸದ್ಯ ಪರೀಕ್ಷಾರ್ಥ ದೆಹಲಿ ಮತ್ತು ನವದೆಹಲಿ ಕ್ಯಾಪಿಟಲ್‌ ರೀಜನ್‌ (New Delhi and NewDelhi Capital Region&NCR) ಪ್ರದೇಶದಲ್ಲಿ ಮಾತ್ರವೇ ಲಭ್ಯವಿದೆ. ಕೆಲ ದಿನಗಳಲ್ಲೇ ದೇಶದೆಲ್ಲೆಡೆ ಈ ಸವಲತ್ತನ್ನು ಜಾರಿಗೊಳಿಸಲಾಗುವುದು ಎಂದಿದೆ ಸಂಸ್ಥೆ.

ಇದೇನಿದು ಹೊಸ ವ್ಯವಸ್ಥೆ?
ಈ ವ್ಯವಸ್ಥೆಯನ್ನು ಬಳಸಲು ಗ್ರಾಹಕರು ಸರ್ಕಾರದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ಅನ್ನು ಬಳಸಿ ಖಾತೆಯಲ್ಲಿರುವ ಬ್ಯಾಲೆನ್ಸ ನ್ನು, ಹಣವನ್ನು ನಗದಾಗಿ ಪರಿವರ್ತಿಸಿಕೊಳ್ಳಬಹುದು. ಈಗಾಗಲೇ 75,000 ವ್ಯಾಪಾರಸ್ಥರು ಫೋನ್‌ ಪೇ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಫೋನ್‌ ಪೇ ಗ್ರಾಹಕರು ತಮಗೆ ಕ್ಯಾಶ್‌ ಬೇಕೆಂದಾಗ ಫೋನ್‌ ಪೇ ಆ್ಯಪ್‌ಅನ್ನು ತೆರೆದರೆ ಅದು ಗ್ರಾಹಕರ ಸನಿಹದಲ್ಲಿರುವ ವ್ಯಾಪಾರಸ್ಥರ (ಫೋನ್‌ ಪೇ ಜೊತೆ ಒಪ್ಪಂದ ಮಾಡಿಕೊಂಡ) ಲೊಕೇಷನ್‌ಅನ್ನು ತೋರಿಸುತ್ತದೆ. ಅಲ್ಲಿಗೆ ತೆರಳಿ ಅವರ ಖಾತೆಗೆ ಫೋನ್‌ ಪೇಯ ಹೊಸ ಫೀಚರ್‌(ಯುಪಿಐ ಆಧಾರಿತ) ಬಳಸಿ ಹಣ ಸಂದಾಯ ಮಾಡಿದರೆ ಮುಗಿಯಿತು. ಅಷ್ಟು ಮೊತ್ತವನ್ನು ಅವರು ನಗದು ರೂಪದಲ್ಲಿ ಗ್ರಾಹಕರ ಕೈಗಿಡುತ್ತಾರೆ.

ಒಬ್ಬ ವ್ಯಾಪಾರಿಯು ಈ ಸೌಲಭ್ಯದಡಿ ಫೋನ್‌ ಪೇ ಜೊತೆ ಬಿಜಿನೆಸ್‌ ಆ್ಯಪ್ (business app) ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ತಮ್ಮಲ್ಲಿರುವ ನಗದು ಪ್ರಮಾಣವನ್ನು ಅದರಲ್ಲಿ ಎಂಟ್ರಿ ಮಾಡುತ್ತಾರೆ. ಇದರಿಂದ ಫೋನ್‌ ಪೇ ತನ್ನ ಗ್ರಾಹಕನನ್ನು ಆ ವ್ಯಾಪಾರಿಯ ಬಳಿ ಕಳಿಸಬೇಕೋ ಬೇಡವೋ ಎಂದು ಸುಲಭವಾಗಿ ನಿರ್ಧರಿಸಲು ಸಹಾಯವಾಗುತ್ತದೆ.

Advertisement

ಕ್ಯೂ ನಿಲ್ಲುವುದು ತಪ್ಪುತ್ತದೆ
ಈ ವ್ಯವಸ್ಥೆ ಯಲ್ಲಿ ಗರಿಷ್ಠ ವ್ಯವಹಾರಕ್ಕೆ ಮಿತಿ ಇದ್ದು, ಗ್ರಾಹಕರು ದಿನಕ್ಕೆ ಗರಿಷ್ಠ 1000 ರೂ. ಹಿಂಪಡೆಯಬಹುದು. ಇದು, ಫೋನ್‌ ಪೇ ಯನ್ನು ನಗದು ವ್ಯವಹಾರಕ್ಕೆ ಬಳಸಿಕೊಳ್ಳಲು ವಿನ್ಯಾಸಗೊಳಿಸಿದ ವ್ಯವಸ್ಥೆ. ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ಈ ಯೋಜನೆ, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆಯಾಗಲಿದೆ. ಅಲ್ಲದೆ ನಗದು ಪಡೆಯುವ ಮಿತಿಯನ್ನು 1000 ರೂ.ನಿಂದ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳೂ ದಟ್ಟವಾಗಿವೆ. ಹಾಗಾದಾಗ ಬ್ಯಾಂಕುಗಳ ಕೌಂಟರ್‌, ಎ.ಟಿ.ಎಂ. ಗಳ ಮುಂದೆ ಕ್ಯೂ ನಿಲ್ಲುವ ಅವಶ್ಯಕತೆಯೇ ಇರುವುದಿಲ್ಲ. ಹಣ ಇಲ್ಲ ಎನ್ನುವ ಕಾರಣಕ್ಕೆ ಮತ್ತೂಂದು ಎ.ಟಿ.ಎಂ.ಅನ್ನು ಹುಡುಕಿಕೊಂಡು ಹೋಗಬೇಕಾಗಿಯೂ ಇಲ್ಲ.

ಸರಿಯಾದ ಸಮಯಕ್ಕೆ ಬರುತ್ತಿದೆ
ಭಾರತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎ.ಟಿ.ಎಂ.ಗಳಿಲ್ಲ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಇಂಡಿಯಾ ಮತ್ತು ಚೀನಾ) ರಾಷ್ಟ್ರಗಳಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಅತಿ ಕಡಿಮೆ (22) ಎ.ಟಿ.ಎಂ.ಗಳಿರುವ ದೇಶ ಭಾರತ. ಸುರಕ್ಷತೆ ಮತ್ತು ವ್ಯವಹಾರದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕುಗಳು ಕಳೆದ ಎರಡು ವರ್ಷಗಳಲ್ಲಿ ಎ.ಟಿ.ಎಂ.ಗಳನ್ನು ಬಂದ್‌ ಮಾಡಿವೆ. ಮತ್ತು ಕೆಲವೇ ಹೊಸ ಎ.ಟಿ.ಎಂ.ಗಳ ಸ್ಥಾಪನೆ ಅನಿವಾರ್ಯತೆಯ ದೃಷ್ಟಿಯಲ್ಲಿ ಮಾತ್ರ ಆಗುತ್ತಿದೆ. ಹೀಗಿರುವಾಗ ಫೋನ್‌ ಪೇ ಹೊರತರಲಿರುವ ಡಿಜಿಜಲ್‌ ಎ.ಟಿ.ಎಂ ಸವಲತ್ತು ವರದಾನವಾಗಿ ಪರಿಣಮಿಸಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಫೋನ್‌ ಪೇ ಅಂದರೆ…
“ಫೋನ್‌ ಪೇ’ ಎನ್ನುವುದು ಪೇಟಿಎಂ, ಗೂಗಲ್‌ ಪೇ ಅನ್ನು ರೀತಿಯದೇ ಆ್ಯಪ್‌ ಆಧಾರಿತ ಡಿಜಿಟಲ್‌ ಹಣ ಪಾವತಿಸುವ ವ್ಯವಸ್ಥೆ. 2015ರಲ್ಲೇ ಶುರುವಾದ ಫೋನ್‌ ಪೇ ಬಹುಬೇಗನೆ ಜನಪ್ರಿಯಗೊಂಡಿತ್ತು. ಒಂದು ಕೋಟಿ ಮಂದಿ ಫೋನ್‌ ಪೇ ಬಳಸುತ್ತಿದ್ದಾರೆ ಎನ್ನುತ್ತದೆ ಸಂಸ್ಥೆ. ಸಣ್ಣ ಸಣ್ಣ ಮೊತ್ತದ ಹಣ ಪಾವತಿಗೆ, ಮೊಬೈಲ್‌ ರೀಚಾರ್ಜ್‌ ಮಾಡಿಸಲು ಮತ್ತು ಹಣ ವರ್ಗಾಯಿಸಲು ಜನರು ಇದನ್ನು ನೆಚ್ಚಿಕೊಂಡಿದ್ದರು. ಬಳಸಲು ತುಂಬಾ ಸರಳ, ಸುರಕ್ಷಿತ ಮಾತ್ರವಲ್ಲದೆ ಈ ಸೇವೆಯನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next