Advertisement

ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ

09:46 AM Jun 04, 2019 | Team Udayavani |

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಮತ್ತು ಹೂತಗೆರೆ ಗ್ರಾಪಂ ವ್ಯಾಪ್ತಿಗಳಲ್ಲಿ ಪ್ರತಿ ಬೇಸಿಗೆಯಲ್ಲೂ ಕುಡಿವ ನೀರಿನ ಪೂರೈಕೆಯಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫ‌ಲವಾಗಿದ್ದು ಸ್ಥಳೀಯ ನಿವಾಸಿಗಳು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನ ಬರ ಪೀಡಿತ ಪ್ರದೇಶಗಳಲ್ಲಿ ಒಂದಾದ ಆತಗೂರು ಹೋಬಳಿ ಹಾಗೂ ಕೆಲ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಪ್ರತಿ ವರ್ಷವು ಕುಸಿತ ಕಾಣುತ್ತಲೇ ಬಂದಿದ್ದು ಇಲ್ಲಿನ ಕೆರೆಗಳು ಬತ್ತಿಹೋಗಿವೆ ದಶಕಗಳೇ ಕಳೆದಿದ್ದರೂ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸದಿರುವುದು ಶೋಚನೀಯ ಸಂಗತಿಯಾಗಿದೆ.

ಮಲ್ಲನಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ 13ಕ್ಕೂ ಹೆಚ್ಚು ಗ್ರಾಮಗಳ 7 ಸಾವಿರಕ್ಕೂ ಅಧಿಕ ಜನಸಂಖ್ಯೆಯ ಜತೆಗೆ ಜಾನುವಾರುಗಳಿಗೂ ಕುಡಿಯುವ ನೀರಿನ ಆತಂಕ ಪ್ರತಿ ವರ್ಷವು ಬೇಸಿಗೆಯ ಸಂದರ್ಭಗಳಲ್ಲಿ ಕಂಡು ಬರುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫ‌ಲವಾಗಿದೆ.

ಈಗಾಗಲೇ ಗ್ರಾಮಗಳಲ್ಲಿ ಚಾಲ್ತಿಯಲ್ಲಿರುವ ಸುಮರು 30ಕ್ಕೂ ಹೆಚ್ಚು ಕೊಳವೆ ಬಾವಿಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂತರ್ಜಲಮಟ್ಟ ಕುಸಿತದಿಂದ ವೈಫ‌ಲ್ಯ ಕಂಡಿದ್ದು ಈವರೆವಿಗೆ ಮಲ್ಲನಕುಪ್ಪೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕೊಳವೆ ಬಾವಿಗಳು ನೀರಿಲ್ಲದೆ ತಟಸ್ಥವಾಗಿದ್ದು ಈ ಹಿಂದೆ ಅಳವಡಿಸಿದ್ದ ಕೊಳವೆ ಬಾವಿಯ ಯಂತ್ರೋಪಕರಣಗಳು ತುಕ್ಕುಹಿಡಿಯುತ್ತಿರುವ ನಿದರ್ಶನಗಳು ಕಂಡು ಬರುತ್ತಿವೆ.

ಯೋಜನೆ ಅಗತ್ಯ: ಪ್ರತಿ ವರ್ಷ ಅನಗತ್ಯವಾಗಿ ಕೊಳವೆ ಬಾವಿ ಕೊರೆಸಲು ಮುಂದಾಗುವ ಅಧಿಕಾರಿಗಳ ವರ್ಗ ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಪರಿಹಾರ ರೂಪಿಸಲು ಅಗತ್ಯ ಯೋಜನೆ ಕೈಗೊಳ್ಳಬೇಕಾದ ಮಾರ್ಗದತ್ತ ಮುಖಮಾಡಬೇಕಿದೆ.

Advertisement

ಬೇಸಿಗೆ ಆರಂಭದ ದಿನಗಳಲ್ಲಿ ಅಲ್ಪಸ್ವಲ್ಪ ನೀರು ಒದಗಿಸುತ್ತಿದ್ದ ಕೊಳವೆ ಬಾವಿಗಳು ಇತ್ತೀಚಿನ ದಿನಗಳಲ್ಲಿ ವೈಪಲ್ಯದತ್ತ ಮುಖಮಾಡಿದ್ದು ಕುಂದನಕುಪ್ಪೆ ಗ್ರಾಮದಲ್ಲಿ ಕಳೆದ ತಿಂಗಳಿಂದೀಚೆಗೆ ಎದುರಾದ ಕುಡಿಯುವ ನೀರಿನ ತತ್ವಾರ ನೀಗಿಸಲು ಖಾಸಗಿ ಬೋರ್‌ವೆಲ್ನ ಮೊರೆಹೋಗಿದ್ದಾರೆ. ಕಳೆದ ವರ್ಷ ಸ್ಥಳೀಯ ಜನರ ನೀರಿನ ದಾಹ ನೀಗಿಸಲು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿದ ತಾಲೂಕು ಆಡಳಿತ, ಸ್ಥಳೀಯ ಗ್ರಾ.ಪಂ. ಆಡಳಿತ ಮುಂದೆ ಎದುರಾಗಬಹುದಾದ ಸಮಸ್ಯೆಯ ಕಾರಣಕ್ಕಾಗಿ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿರುವುದು ಸಮಾಧಾನಕರ ಸಂಗತಿಯಾಗಿದ್ದು ಈಗಾಗಲೇ ಸ್ಥಳೀಯ ಗ್ರಾ.ಪಂ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ.

ಜಿಲ್ಲಾಡಳಿತ ಆತಗೂರು ಹೋಬಳಿಯ ಕುಡಿಯುವ ನೀರಿನ ಕೂಗಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವತ್ತ ಕ್ರಮವಹಿಸಬೇಕೆಂಬುದೇ ಈ ವ್ಯಾಪ್ತಿಯ ನಾಗರೀಕರ ಬಹುದಿನದ ಬೇಡಿಕೆಯಾಗಿದ್ದು ಇದಕ್ಕೆ ಮುಂದಿನ ದಿನಗಳಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು ಅಗತ್ಯ ಕ್ರಮವಹಿಸುವರೇ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next