Advertisement

Koppala: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯ!

11:32 AM Dec 07, 2024 | sudhir |

ಕೊಪ್ಪಳ: ತಮ್ಮ ವಾರ್ಡಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಕೊಪ್ಪಳ ನಗರಸಭೆ 16ನೇ ವಾರ್ಡಿನ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಅವರು ತಲೆಯ ಮೇಲೆ ಮೂರು ನಾಮ ಹಾಕಿದ ಕಲ್ಲನ್ನು ಹೊತ್ತು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಗರಸಭೆ ಮುಂಭಾಗದ ಆವರಣದಲ್ಲಿ ನಡೆದಿದೆ.

Advertisement

ತಮ್ಮ 16ನೇ ವಾರ್ಡಿನಲ್ಲಿ ಹಲವು ಸಮಸ್ಯೆಗಳು ಇರುವ ಕುರಿತು ನಗರಸಭೆ ಪೌರಾಯುಕ್ಯರು ಹಾಗೂ ನಗರಸಭೆ ಅಧ್ಯಕ್ಷರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ತಮ್ಮ ವಾರ್ಡಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ, ಶೌಚಾಲಯ ನಿರ್ಮಾಣ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ನಗರಸಭೆ ಸರಿಯಾಗಿ ಸ್ಪಂದನೆ ಮಾಡದೆ ನಿರ್ಲಕ್ಷ ವಹಿಸಿರುವ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ತಲೆಯ ಮೇಲೆ ಮೂರು ನಾಮದ ಕಲ್ಲನ್ನು ಹೊತ್ತು ಪ್ರತಿಭಟನೆ ನಡೆಸಿ ನಗರಸಭೆಯ ಅಧ್ಯಕ್ಷರ ಹಾಗೂ ಸದಸ್ಯರ ಮತ್ತು ಅಧಿಕಾರಿಗಳ ಗಮನ ಸೆಳೆದರು. ಶನಿವಾರ ನಗರಸಭೆ ಸಾಮಾನ್ಯ ಸಭೆ ನಡೆಯುವ ಹಿನ್ನೆಲೆಯಲ್ಲಿ ಅವರು ಈ ರೀತಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ಈ ಹಿಂದೆಯೂ ಸಹಿತ ಸೋಮಣ್ಣ ಹಳ್ಳಿ ಅವರು ಸಾಮಾನ್ಯ ಸಭೆಯಲ್ಲಿ ತಮ್ಮ ಕಿವಿಗೆ ಹೂವನ್ನ ಇಟ್ಟುಕೊಂಡು ನಗರಸಭೆ ಅಧಿಕಾರಿಗಳು ನಮ್ಮ ವಾರ್ಡನ್ನು ಅಭಿವೃದ್ಧಿ ಮಾಡುತ್ತಿಲ್ಲ, ಅಧಿಕಾರಿಗಳು ಅನುದಾನ ಕೊಡುತ್ತಿಲ್ಲ. ಜನರ ಹಾಗೂ ನಮ್ಮ ನನಗೆ ಕಿವಿಗೆ ನಿತ್ಯ ಹೂವನ್ನು ಇಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕಿವಿಗೆ ಹೂವು ಇಟ್ಟು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ನಗರಸಭೆ ಸದಸ್ಯರ ಗಮನ ಸೆಳೆದಿದ್ದರು. ಶನಿವಾರವು ಸಹಿತ ಪುನಃ ತಮ್ಮ ವಿಭಿನ್ನ ಶೈಲಿಯ ಮೂಲಕ ತಲೆಯ ಮೇಲೆ ಕಲ್ಲನ್ನು ಹೊತ್ತು ಪ್ರತಿಭಟನೆ ನಡೆಸಿದರು. ಈ ವೇಳೆ ನಗರ ಕಾಣೆ ಪಿಐ ಜೈಪ್ರಕಾಶ್ ಅವರ ಹಾಗೂ ಪೊಲೀಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಘಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಇತರೆ ಸದಸ್ಯರು ಸ್ಥಳಕ್ಕೆ ಆಗಮಿಸಿ ಸದಸ್ಯ ಸೋಮಣ್ಣ ಹಳ್ಳಿಯವರ ಮನವೊಲಿಸುವ ಪ್ರಯತ್ನ ಮಾಡಿದರು. ಅವರ ಮನವೊಲಿಕೆಗೆ ಸೋಮಣ್ಣ ಹಳ್ಳಿಯವರು ಯಾವುದೇ ಸೊಪ್ಪು ಹಾಕಿದೆ ಸ್ಥಳಕ್ಕೆ ಡಿಸಿ ಆಗಮಿಸಿ ನನ್ನ ಮನವಿ ಸ್ವೀಕರಿಸಬೇಕು ಎಂದು ಬಿಗಿ ಪಟ್ಟು ಹಿಡಿದರು.

ಇಲ್ಲವೇ ನಗರಸಭೆ ಅಧ್ಯಕ್ಷರು ಸೇರಿದಂತೆ ಎಲ್ಲ ವಾರ್ಡಿನ ಸದಸ್ಯರು ನನ್ನ ವಾರ್ಡಿನಲ್ಲಿನ ಸಮಸ್ಯೆಗಳನ್ನು ಆಲಿಸಲು ಸ್ಥಳಕ್ಕಾಗಿಸಬೇಕೆಂದು ಬಿಗಿಪಟ್ಟು ಹಿಡಿದರು. ಇದರಿಂದ ನಗರಸಭೆ ಅಧ್ಯಕ್ಷ ಪಟೇಲ್ ಅವರು ಅಲ್ಲಿಂದ ನಿರ್ಗಮಿಸಿದರು. ಸೋಮಣ್ಣ ಹಳ್ಳಿ ತಮ್ಮ ಪ್ರತಿಭಟನೆ ಮುಂದುವರಿಸಿದರು. ತಲೆ ಮೇಲೆ ಕಲ್ಲು ಹೊತ್ತಿದ್ದನ್ನು ಗಮನಿಸಿದ ಪೊಲೀಸರು ತಕ್ಷಣ ಅವರ ತಲೆಯ ಮೇಲಿನ ಕಲ್ಲನ್ನು ತೆಗೆದು ನಗರಸಭೆ ಪಕ್ಕದ ಸ್ಥಳದಲ್ಲಿ ಇರಿಸಿದ್ದರು. ಇದನ್ನು ವಿರೋಧಿಸಿದ ಸದಸ್ಯ ಸೋಮಣ್ಣ ಅವರು ಕಲ್ಲನ್ನು ಬಿಟ್ಟು ಸಹಜವಾಗಿ ನಗರಸಭೆ ಮುಂದೆ ಆಕ್ರೋಶ ಹೊರ ಹಾಕಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನನ್ನ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲವೆಂದು ಹೇಳಿ ನಮ್ಮ ಧರಣಿಯನ್ನು ಮುಂದುವರಿಸಿದರು. ಮತ್ತೆ ಧರಣಿ ತಳಕ್ಕೆ ಆಗಮಿಸಿದ ಅಧ್ಯಕ್ಷ ಪಟೇಲ್ ಅವರು ಸದಸ್ಯ ಸೋಮಣ್ಣ ಅವರ ಮನವೊಲಿಸಿ ಸಾಮಾನ್ಯ ಸಭೆಗೆ ಕರೆದೊಯ್ದು ಅವರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next