Advertisement

ವಿವಿಧ ಬೇಡಿಕೆ ಈಡೇರಿಕೆಗೆ ರೈತರ ಆಗ್ರಹ

06:51 AM Jan 23, 2019 | Team Udayavani |

ದಾವಣಗೆರೆ: ಅರಣ್ಯ ಭೂಮಿ ಹಕ್ಕುಪತ್ರ ವಿತರಣೆ, ಸಾಲ ವಸೂಲಾತಿ ನಿಲ್ಲಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ನೇತೃತ್ವದಲ್ಲಿ ರೈತರು, ಅರಣ್ಯ ಭೂಮಿ ಸಾಗುವಳಿದಾರರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯಲ್ಲಿ ಅನೇಕ ವರ್ಷದಿಂದ ಸಾವಿರಾರು ಜನರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ 2003ರಲ್ಲಿ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆ ಅನ್ವಯ ಸಾಗುವಳಿ ಮಾಡುತ್ತಿರುವರಿಂದ ಹಕ್ಕುಪತ್ರಕ್ಕೆ 75 ವರ್ಷದ ದಾಖಲೆ ಕೇಳಲಾಗುತ್ತಿದೆ. ನಿಜಕ್ಕೂ ಇದು ಅವೈಜ್ಞಾನಿಕ. ಭಾರತಕ್ಕೆ ಸ್ವಾತಂತ್ರ್ಯವೇ ಬರದೇ ಇದ್ದ ಕಾಲದಲ್ಲಿನ ದಾಖಲೆ ಕೇಳಿದರೆ ಬಡ ಜನರು ಎಲ್ಲಿಂದ ತರಲಿಕ್ಕೆ ಸಾಧ್ಯ ಎಂಬುದನ್ನ ಸರ್ಕಾರವೇ ಪ್ರಶ್ನೆ ಮಾಡಿಕೊಳ್ಳಬೇಕು. ಅತ್ಯಂತ ಅವೈಜ್ಞಾನಿಕವಾಗಿ 75 ವರ್ಷದ ಹಿಂದಿನ ದಾಖಲೆ ಕೇಳುವುದನ್ನ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಾವಣಗೆರೆ ತಾಲೂಕಿನ ಆಲೂರು, ಗುಡಾಳ್‌, ಗುಮ್ಮನೂರು, ಮ್ಯಾಸರಹಳ್ಳಿ, ನೀರ್ಥಡಿ, ಹುಚ್ಚವ್ವನಹಳ್ಳಿ, ಬಾವಿಹಾಳ್‌, ಕಾಡಜ್ಜಿ, ಹೆದ್ನೆ, ರಾಂಪುರ, ದಿಂಡದಹಳ್ಳಿ ಇತರೆ ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಆರಣ್ಯ ಭೂಮಿ ಎಂಬುದಾಗಿ ಪಹಣಿಯಲ್ಲಿ ಬರೆಯಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ವಿಲೇವಾರಿ ಮಾಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಹೇಳುತ್ತಿರುವುದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಹಾಗಾಗಿ ಹಕ್ಕುಪತ್ರಕ್ಕಾಗಿ ಸಾಗುವಳಿದಾರರು, ಅರ್ಜಿಯನ್ನು ಸರ್ಕಾರಿ ಜಮೀನು ಎಂದು ಅರ್ಜಿ ಸಲ್ಲಿಸಬೇಕೆ ಅಥವಾ ಅರಣ್ಯ ಇಲಾಖೆ ಎಂದು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಯನ್ನ ಸಲ್ಲಿಸಬೇಕಾ ಎಂಬುದನ್ನು ಜಿಲ್ಲಾಡಳಿತವೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಎಲ್ಲಾ ಕಡೆ ಹೆಚ್ಚುತ್ತಿರುವಂತಹ ಖಾಸಗಿ ಬ್ಯಾಂಕ್‌ಗಳು ಗ್ರಾಮೀಣ ಭಾಗದಲ್ಲಿನ ರೈತರಿಗೆ ಅತೀ ಹೆಚ್ಚಾಗಿ ಟ್ರ್ಯಾಕ್ಟರ್‌ ಸಾಲವೇನೋ ನೀಡುತ್ತಿವೆ. ಅತೀ ಹೆಚ್ಚಿನ ಬಡ್ಡಿ ಮತ್ತು ವಿಪರೀತ ದಂಡ ವಿಧಿಸುವ ಜೊತೆಗೆ ಬಲವಂತ, ದೌರ್ಜನ್ಯದಿಂದ ಸಾಲ ವಸೂಲು ಮಾಡಲಾಗುತ್ತಿದೆ. ದೌರ್ಜನ್ಯಕ್ಕೆ ನಲುಗಿದ ಅನೇಕ ರೈತರು ಆತ್ಮಹತ್ಯೆಗೂ ಒಳಗಾಗಿದ್ದಾರೆ. ಬರದ ಸಂದರ್ಭದಲ್ಲಿ ಸಾಲ ವಸೂಲಾತಿ ಮಾಡುವಂತಿಲ್ಲ. ಆದರೂ, ಖಾಸಗಿ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ಮುಂದಾಗುತ್ತಿವೆ. ಸರ್ಕಾರ ಕೂಡಲೇ ಸಾಲ ವಸೂಲಾತಿ ನಿಲ್ಲಿಸಲು ಅಗತ್ಯ ಕ್ರಮ ತೆಗೆದುಕೊಂಡು ರೈತರ ಪ್ರಾಣ, ಆಸ್ತಿ ಉಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌, ಅರಸಾನಾಳು ಸಿದ್ದಪ್ಪ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಗುಮ್ಮನೂರು ಬಸವರಾಜ್‌, ಚಿಕ್ಕಮಲ್ಲನಹೊಳೆ ಚಿರಂಜೀವಿ, ಕೋಲ್ಕುಂಟೆ ಬಸವರಾಜಪ್ಪ, ಕುಕ್ಕುವಾಡ ಪರಮೇಶ್‌ ಇತರರು ಇದ್ದರು. ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮನವಿ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next