Advertisement

ಪಥ್ಯ ಆಹಾರಕ್ಕಿದೆ ಕಾಯಿಲೆ ಗುಣಪಡಿಸುವ ಶಕ್ತಿ 

03:20 PM Oct 30, 2018 | |

ಶಿಸ್ತು ಬದ್ಧ ಜೀವನದಲ್ಲಿ ಆರೋಗ್ಯ ಕಾಳಜಿಯೂ ಇರುತ್ತದೆ. ಆಹಾರವನ್ನು ಹಿತ, ಮಿತವಾಗಿ ಹಾಗೂ ಸಮತೋಲನದಿಂದ ಬಳಸಿದರೆ ಮಾತ್ರ ಸದೃಢ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ವಿವಿಧ ರೀತಿಯ ಕಾಯಿಲೆಗಳು ಬಾಧಿಸಿದಾಗ ಆಹಾರ ಕ್ರಮದಲ್ಲಿ ಅನಿವಾರ್ಯತೆಯ ಮಿತಿಗಳನ್ನು ಹೇರಿಕೊಳ್ಳುವುದೂ ಅಗತ್ಯವಾಗುತ್ತದೆ. ದೇಹದ ಅಗತ್ಯಗಳಿಗನುಗುಣವಾಗಿ ಸೇವಿಸುವ ಆಹಾರದಲ್ಲಿ ಮಾಡಿಕೊಳ್ಳುವ ಮಿತಿ ಅಥವಾ ಬದಲಾವಣೆಯನ್ನು ಪಥ್ಯ ಆಹಾರ ಎನ್ನಬಹುದು. ಲೈಟ್‌ ಫುಡ್‌, ನೊ ಕ್ಯಾಲೊರಿ , ಲೋ ಕ್ಯಾಲೊರಿ, ಲೋ ಫ್ಯಾಟ್‌, ನೊ ಫ್ಯಾಟ್‌, ಫ್ಯಾಟ್‌ಫ್ರೀ , ಶುಗರ್‌ ಲೆಸ್‌, ಝೀರೊ ಕ್ಯಾಲೊರಿ ಮೊದಲಾದ ಅಂಶಗಳ ಪಥ್ಯವನ್ನು ಕಾಯಿಲೆಗಳು ಇದ್ದ ಸಂದರ್ಭದಲ್ಲಿ ಅನುಸರಿಸಬೇಕಾಗುತ್ತದೆ.

Advertisement

ಉದಾಹರಣೆಗೆ ಮಧುಮೇಹ ಕಾಯಿಲೆ ಇರುವವರು ಸಕ್ಕರೆಯ ಅಂಶಗಳ ವಸ್ತುಗಳ ಸೇವನೆಯ ಕುರಿತು ಜಾಗರೂಕರಾಗಬೇಕಾಗುತ್ತದೆ. ಸಿಹಿ ಅಂಶ ಹೆಚ್ಚಿರುವ ಅನ್ನದಿಂದ ಹಿಡಿದು ಇತರ ತಿಂಡಿತಿನಿಸುಗಳ ಕುರಿತೂ ಪಥ್ಯೆ ಮಾಡಬೇಕಾಗುತ್ತದೆ. ರಾಗಿ ಮೊದಲಾದ ಆಹಾರ ಸೇವನೆಗೆ ಗಮನಹರಿಸಬೇಕಾಗುತ್ತದೆ. ಇನ್ನು ಮೂಲವ್ಯಾಧಿ ಬಾಧೆಗೆ ಒಳಗಾದವರು ಖಾರ, ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಪದಾರ್ಥಗಳಿಂದ ದೂರವಿರಬೇಕು. ಮಧುಮೇಹಿಗಳು ಆಹಾರ ಪಥ್ಯ ಕ್ರಮವನ್ನು ಹೆಚ್ಚು ಸಮಯದವರೆಗೆ ಪಾಲಿಸಬೇಕಾದ ಅನಿವಾರ್ಯ ಇದ್ದರೆ ಮೂಲವ್ಯಾಧಿ ಬಾಧೆಗೆ ಒಳಗಾದವರು ನಿಯಂತ್ರಣಕ್ಕೆ ಬಂದ ಬಳಿಕ ಪಥ್ಯವನ್ನು ಸಡಿಲಿಸಬಹುದು.

ಜಗತ್ತಿನ ಶೇ. 25ರಷ್ಟು ಮಂದಿಯಲ್ಲಿ ಇಂದು ಬೊಜ್ಜಿನ ತೊಂದರೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಆಹಾರ ಪಥ್ಯ ಕ್ರಮವನ್ನು ಅನುಸರಿಸಿದರೆ ಇದನ್ನು ಸಾಧ್ಯವಾಗಿಸಬಹುದು ಎನ್ನುತ್ತಾರೆ ಆಹಾರ ತಜ್ಞೆ ಪ್ರಿಯಾ ತೇವ್‌.

ಸಾಮಾನ್ಯ ಜಾಗೃತಿ
·ನಮ್ಮ ಆಹಾರ ಕ್ರಮದಲ್ಲಿ ವೈವಿಧ್ಯವಿರಲಿ ಆದರೆ ಕೊಬ್ಬು ಹೆಚ್ಚಿಸುವ ವೈವಿಧ್ಯತೆ ಬೇಡ.
·ಹೆಚ್ಚು ನಾರು ಪದಾರ್ಥಗಳನ್ನು ತಿನ್ನಿ.
·ಪ್ರೋಟೀನ್‌ ಮತ್ತು ಕೊಬ್ಬು ಭರಿತ ಆಹಾರದ ಬದಲಾಗಿ ಹೆಚ್ಚು ತರಕಾರಿ, ಮೊಳಕೆ ಬರಿಸಿದ ಕಾಳುಗಳು, ಸೌತೆಕಾಯಿ, ಹಣ್ಣುಗಳನ್ನು ಸೇವಿಸಿ.
·ಮದ್ಯಪಾನ ಆಹಾರ ಕ್ರಮದಲ್ಲೂ ವ್ಯತ್ಯಾಸಕ್ಕೆ ಕಾರಣವಾಗಿ ಕಾಯಿಲೆಗಳನ್ನು ಸೃಷ್ಟಿಸುತ್ತದೆ.
·ಪ್ರಾಣಿಜನ್ಯ ಕೊಬ್ಬನ್ನು ಆಹಾರದಲ್ಲಿ ಕಡಿಮೆಗೊಳಿಸಿ.
·ಸಕ್ಕರೆ ಪೇಯಗಳನ್ನು ತ್ಯಜಿಸುವುದು ಉತ್ತಮ.
·ಚಹಾ, ಕಾಫಿ ಸೇವನೆಯಲ್ಲಿ ಮಿತಿಯಿರಲಿ. ಇದರಲ್ಲಿ ಸಕ್ಕರೆಗೆ ಪರ್ಯಾಯವಾಗಿ ಶುಗರ್‌ ಫ್ರೀ ವಸ್ತುಗಳನ್ನು ಬಳಸಬಹುದು.

ಆಯುರ್ವೇದದಲ್ಲಿ ಏನಿದೆ?
ಪಥ್ಯದ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಕೆಲವು ಕಾಯಿಲೆಗಳನ್ನು ಶೇ. 100ರಷ್ಟು ಗುಣಪಡಿಸಬಹುದು. ಆದರೆ ಇದು ಕೆಲವೇ ದಿನಗಳಲ್ಲಿ ಆಗಿ ಬಿಡುವ ಕ್ರಮವಲ್ಲ. ನಾರು ಬೇರು ಸೇರಿಸಿದ ಗುಳಿಗೆಯನ್ನೋ, ಕಷಾಯವನ್ನೋ ನೀಡುತ್ತಿದ್ದ ನಾಟಿ ವೈದ್ಯರ ಕಾಲದ ಆಯುರ್ವೇದ ವ್ಯವಸ್ಥೆಯಲ್ಲಿ ಕಾಯಿಲೆಗಳಿಗೆ ಪಥ್ಯಾಹಾರ ಕ್ರಮವನ್ನು ಸೂಚಿಸಲಾಗುತ್ತಿತ್ತು. ಆದರೆ ನಾಟಿ ವೈದ್ಯ ಪದ್ಧತಿ ಮೂಲೆಗುಂಪಾದಂತೆ ಪಥ್ಯಾಹಾರದ ಕುರಿತ ಜಾಗೃತಿಯೂ ಕಡಿಮೆಯಾಗಿದೆ.  

Advertisement

 ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next