Advertisement

ಡೀಸೆಲ್‌ ನೀಡಿ ಸಿಗ್ನಲ್‌ ಪಡೆದು ಸಾವಿನ ಸುದ್ದಿ ಮುಟ್ಟಿಸಿದರು!

02:38 AM Apr 09, 2019 | Sriram |

ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರ ನಿಧನ ವಾರ್ತೆಯನ್ನು ತತ್‌ಕ್ಷಣಕ್ಕೆ ಸಂಬಂಧಿಕರಿಗೆ ತಿಳಿಸಲು ಮೊಬೈಲ್‌ ಸೇವೆ ದೊರೆಯದೆ ಇದ್ದಾಗ ಊರಿನವರೊಬ್ಬರು ಡೀಸೆಲ್‌ ಹಿಡಿದು ದೂರವಾಣಿ ಕೇಂದ್ರಕ್ಕೆ ತೆರಳಿ ಜನರೇಟರ್‌ ಚಾಲುಗೊಳಿಸಿ ಮೊಬೈಲ್‌ ಸಿಗ್ನಲ್‌ ಪಡೆದು ಸಾವಿನ ಸುದ್ದಿ ಮುಟ್ಟಿಸಿದ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದಲ್ಲಿ ನಡೆದಿದೆ.

Advertisement

ಕಲ್ಮಕಾರು ಗ್ರಾಮದ ಕಿನ್ನಾನ ಮನೆ ನಿವಾಸಿ ವೆಂಕಟ್ರಮಣ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಸಂಬಂಧಿಕರಿಗೆ ವಿಷಯ ತಿಳಿಸಲೆಂದು ಮೊಬೈಲ್‌ ಕೈಗೆತ್ತಿಕೊಂಡರೆ ಅದರಲ್ಲಿ ಸಿಗ್ನಲ್‌ ಇರಲಿಲ್ಲ. ಆ ಭಾಗದಲ್ಲಿರುವುದು ಸರಕಾರಿ ಸಾಮ್ಯದ ಬಿಎಸ್‌ಎನ್‌ಎಲ್‌ ಸೇವೆ ಮಾತ್ರ. ವಿನಿಮಯ ಕೇಂದ್ರದ ಜನರೇಟರ್‌ನಲ್ಲಿ ಡೀಸೆ‌ಲ್‌ ಇಲ್ಲದ್ದ ರಿಂದ ಸಿಗ್ನಲ್‌ ಸಿಗುತ್ತಿಲ್ಲ ಎಂದು ಅರಿತ ಸ್ಥಳೀಯ ಮೋನಪ್ಪ ಅವರು ಡೀಸೆಲ್‌ ಹಿಡಿದುಕೊಂಡು ದೂರವಾಣಿ ಕೇಂದ್ರಕ್ಕೆ ಧಾವಿಸಿದರು. ಇಂಧನ ತುಂಬಿ ಜನರೇಟರ್‌ ಚಾಲೂ ಆದಾಗ ಸಿಗ್ನಲ್‌ ಬಂದಿತು. ಬಳಿಕ ಸಾವಿನ ಸುದ್ದಿಯನ್ನು ಬಂಧುಗಳಿಗೆ ತಿಳಿಸಿದರು.

ತಾಲೂಕಿನ ಕೊಲ್ಲಮೊಗ್ರು,ಹರಿಹರ ಪಳ್ಳತ್ತಡ್ಕ, ಬಾಳು ಗೋಡು,ನಡುಗಲ್ಲು,
ಯೇನೆಕಲ್ಲು,ಕಲ್ಮಕಾರು, ಮಡಪ್ಪಾಡಿ ಪ್ರದೇಶಗಳ ಜನ ಬಿಎಸ್‌ಎನ್‌ಎಲ್‌ ಸೇವೆಯನ್ನೇ ಅವಲಂಬಿತಗೊಂಡಿದ್ದಾರೆ. ಈ ಭಾಗದಲ್ಲಿ ಟವರ್‌ ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್‌ ಪೂರೈಕೆ ಸ್ಥಗಿತವಾದಾಗ ಜನರೇಟರು ಚಾಲನೆಗೆ ಡೀಸೆಲ್‌ ಇಲ್ಲ. ಆರ್ಥಿಕ ನಷ್ಟದಿಂದ ಡೀಸೆಲ್‌ ವೆಚ್ಚಭರಿಸಲು ಸಾಧ್ಯವಾಗುತ್ತಿಲ್ಲ.

ಬಿಎಸ್ಸೆನ್ನೆಲ್‌ ಮೊಬೈಲ್‌ ಸೇವೆಯನ್ನೇ ನಂಬಿರುವ ಜನ ತುರ್ತು ಸಂದರ್ಭ ಗಳಲ್ಲಿ ಪರಸ್ಪರ ಸಂಪರ್ಕ ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಇತ್ತೀಚೆಗೆ ಈ ಭಾಗದ ಜನತೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರೂ ತಹಶೀಲ್ದಾರ್‌ ಮಧ್ಯ ಪ್ರವೇಶಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದ್ದರು. ಬಿಎಸ್‌ಎನ್‌ಎಲ್‌ ಮತ್ತು ಮೆಸ್ಕಾಂ ಅಧಿಕಾರಿಗಳ ಸಭೆ ಕರೆದು ತುರ್ತು ಸೇವೆ ನೀಡಲು ಕ್ರಮ ಕೈಗೊಳ್ಳು ವಂತೆ ಸೂಚಿಸಿದ್ದರು. ವಿಫಲರಾದ ಅಧಿಕಾರಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಶಿಕ್ಷಿಸುವ ಎಚ್ಚರಿಕೆ ಯನ್ನೂ ನೀಡಿದ್ದರು. ಇಲಾಖೆಯ ಅಧಿಕಾರಿಗಳ ಮೇಲೆ ಇದಾವುದೂ ಪರಿಣಾಮ ಬೀರಿದಂತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದ್ದಾರಲ್ಲದೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಡೀಸೆಲ್‌ಗೆ ಕಾಣಿಕೆ ಡಬ್ಬಿ!
ಡೀಸೆಲ್‌ ಕೊರತೆಯಿಂದ ಮೊಬೈಲ್‌ ಟವರ್‌ಗಳ ಜನರೇಟರ್‌ ಚಾಲೂ ಆಗದೆ ಸಿಗ್ನಲ್‌ ಲಭಿಸದಿರುವ ಪ್ರದೇಶ ಗಳಲ್ಲಿ ಡೀಸೆಲ್‌ ಖರೀದಿಗಾಗಿ ಕಾಣಿಕೆ ಡಬ್ಬಿ ಇರಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next