ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹಾಸ್ಯ ನಟ ಚಿಕ್ಕಣ್ಣ ಗುರುವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾದರು.
ಈಗಾಗಲೇ ಪ್ರಕರಣದಲ್ಲಿ ಸಿಆರ್‌ಪಿಸಿ 164 ಅಡಿಯಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದ ಚಿಕ್ಕಣ್ಣ, ಇತ್ತೀಚೆಗೆ ಜೈಲಿನಲ್ಲಿ ಕೆಲವು ನಟರ ಜತೆ ದರ್ಶನ್‌ನನ್ನು ಭೇಟಿಯಾಗಿದ್ದರು. ಪ್ರಕರಣದ ಸಾಕ್ಷಿದಾರನಾಗಿರುವ ವ್ಯಕ್ತಿ ಆರೋಪಿಯನ್ನು ಭೇಟಿ ಮಾಡುವಂತಿಲ್ಲ.
ಹೀಗಾಗಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್, ವಿಚಾರಣೆಗೆ ಹಾಜರಾಗುವಂತೆ 2 ದಿನಗಳ ಹಿಂದಷ್ಟೇ ನೋಟಿಸ್ ನೀಡಿದ್ದರು.
ಬೆಳಗ್ಗೆ ವಿಚಾರಣೆಗೆ ಹಾಜರಾದ ಚಿಕ್ಕಣ್ಣನನ್ನು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಆರೋಪಿಯನ್ನು ಜೈಲಿನಲ್ಲಿ ಭೇಟಿ ಮಾಡಬಾರದು ಎಂಬುದು ಗೊತ್ತಿಲ್ಲ ಎಂದು ಚಿಕ್ಕಣ್ಣ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.