Advertisement

“ಆ” ನಿರ್ಧಾರವೇ ಸಿಲ್ಕ್ ಬದುಕಿಗೆ ಮುಳುವಾಯಿತೇ?ದುರಂತ ಅಂತ್ಯ ಕಂಡ ಕ್ಯಾಬರೆ ಡ್ಯಾನ್ಸರ್…

02:42 PM Dec 02, 2022 | Team Udayavani |

80ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ “ಸೆಕ್ಸ್ ಸಿಂಬಲ್” ಎಂದೇ ಗುರುತಿಸಿಕೊಂಡಿದ್ದ ಸಿಲ್ಕ್ ಸ್ಮಿತಾ ಬಗ್ಗೆ ಬಹುತೇಕರಿಗೆ ಗೊತ್ತು. ಸಿನಿ ಲೋಕಕ್ಕೆ ಸಹ ನಟಿಯಾಗಿ ಎಂಟ್ರಿ ಕೊಟ್ಟಿದ್ದ ಸ್ಮಿತಾ ನಿಜ ನಾಮಧೇಯ ವಿಜಯಲಕ್ಷ್ಮಿ ವಡ್ಲಾಪಾಟಿ. ಆಂಧ್ರಪ್ರದೇಶದ ಎಲ್ಲೂರಿನಲ್ಲಿ 1960 ಡಿಸೆಂಬರ್ 2ರಂದು ವಿಜಯಲಕ್ಷ್ಮಿ ಜನಿಸಿದ್ದರು. ವಿಜಯಲಕ್ಷ್ಮಿ ತಂದೆ, ತಾಯಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಯಲಸೀಮೆಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿ ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದರು! ಆಕೆಯ ಮಾದಕ ಕಣ್ಣುಗಳ ನೋಟ, ಮನೆಯಲ್ಲಿನ ಬಡತನ ಪೋಷಕರನ್ನು ಚಿಂತೆಗೀಡು ಮಾಡಿತ್ತು. ಏತನ್ಮಧ್ಯೆ ಮಗಳು ವಿಜಯಲಕ್ಷ್ಮಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಸುತ್ತಾರೆ. ಆದರೆ ಮದುವೆ ಆಕೆ ಪಾಲಿಗೆ ಮತ್ತಷ್ಟು ನರಕವನ್ನೇ ಸೃಷ್ಟಿಸಿತ್ತು. ಗಂಡ ಹಾಗೂ ಅತ್ತೆಯ ಕಿರುಕುಳದಿಂದ ಬದುಕು ದಿಕ್ಕೆಟ್ಟಂತಾಗಿತ್ತು. ಆಗ ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ವಿಜಯಲಕ್ಷ್ಮಿ ಆಂಧ್ರಪ್ರದೇಶದಿಂದ ಕಾಲ್ಕಿತ್ತು ಮದ್ರಾಸ್ ಗೆ ಬಂದು ತನ್ನ ಚಿಕ್ಕಮ್ಮನ ಜೊತೆ ವಾಸ ಮಾಡತೊಡಗಿದ್ದರು!

Advertisement

70-80ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ವಿಜಯಲಕ್ಷ್ಮಿ ಅಲಿಯಾಸ್ ಸಿಲ್ಕ್ ಸ್ಮಿತಾ ಸಿನಿ ಜರ್ನಿಯಲ್ಲಿ ಅವರಿಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ಯಾವುದು? ನಿರ್ದೇಶಕರ ಪಾಲಿಗೆ ಸಿಲ್ಕ್ ಇದ್ದರೆ ಬಾಕ್ಸಾಫೀಸ್ ಕಲೆಕ್ಷನ್ ಖಚಿತ ಎಂದೇ ನಂಬಿದ್ದರು. ಇಷ್ಟೆಲ್ಲಾ ಖ್ಯಾತಿ, ಹೆಸರು ಗಳಿಸಿದ್ದ ಸಿಲ್ಕ್ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ ಎಂಬುದು ಕುತೂಹಲದ ಪ್ರಶ್ನೆ…

ಸಿಲ್ಕ್ ಹೆಸರು ಬಂದಿದ್ದು ಹೇಗೆ?

ಚೆನ್ನೈ ನಗರಿಗೆ ಬಂದಿದ್ದ ಸ್ಮಿತಾ ಕಾಲಿವುಡ್ ನಲ್ಲಿ ಟಚ್ ಅಪ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸಿನಿಮಾದಲ್ಲಿ ಸಣ್ಣ, ಪುಟ್ಟ ಪಾತ್ರಗಳನ್ನು ನಿರ್ವಹಿಸತೊಡಗಿದ್ದರು. ಈ ವೇಳೆ ಟರ್ನಿಂಗ್ ಪಾಯಿಂಟ್ ಎಂಬಂತೆ ಎವಿಎಂ ಸ್ಟುಡಿಯೋ ಸಮೀಪವಿದ್ದ ನಿರ್ದೇಶಕ ವಿನು ಚಕ್ರವರ್ತಿ ಅವರ ಸಾಮೀಪ್ಯ ದೊರೆಯುತ್ತದೆ. ವಿನು ಅವರು ವಿಜಯಲಕ್ಷ್ಮಿ ಹೆಸರನ್ನು “ಸ್ಮಿತಾ” ಎಂಬುದಾಗಿ ಬದಲಾಯಿಸಿದ್ದರು. ಅಷ್ಟೇ ಅಲ್ಲ ಆಕೆಯನ್ನು ವಿನು ಚಕ್ರವರ್ತಿ ತನ್ನ ಪತ್ನಿ ಸುಪರ್ದಿಗೆ ಬಿಟ್ಟು ಇಂಗ್ಲೀಷ್ ಕಲಿಸಿದ್ದರು ಹಾಗೂ ಡ್ಯಾನ್ಸ್ ತರಬೇತಿ ಕೊಡಿಸಿದ್ದರು. ಆಕೆಯ ಮಾದಕ ನೋಟದ ಚೆಲುವು, ವೈಯ್ಯಾರ ಗಮನಸೆಳೆಯತೊಡಗಿದ್ದರು. ಅಂದಹಾಗೆ 1979ರಲ್ಲಿ ತಮಿಳಿನ ವಂಡಿಚಕ್ರಂ ಸಿನಿಮಾದಲ್ಲಿ ಸ್ಮಿತಾ “ಸಿಲ್ಕ್” ಹೆಸರಿನ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ಹಿಟ್ ಆಗಿದ್ದು ಸ್ಮಿತಾ ಜೀವನದ ದಿಕ್ಕನ್ನೇ ಬದಲಾಯಿಸಿತು. ಜೊತೆಗೆ ಸಿಲ್ಕ್ ಸ್ಮಿತಾ ಹೆಸರೇ ಜಗಜ್ಜಾಹೀರಾಯಿತು!

Advertisement

ಕ್ಯಾಬರೆ ಡ್ಯಾನ್ಸ್ ಅಂದ್ರೆ ಸಿಲ್ಕ್, ಸಿಲ್ಕ್ ಅಂದ್ರೆ ಕ್ಯಾಬರೆ ಎಂಬಷ್ಟರ ಮಟ್ಟಿಗೆ ಸ್ಮಿತಾ ಸಿನಿಮಾರಂಗದಲ್ಲಿ ಬೆಳೆಯತೊಡಗಿದ್ದರು. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಕೆಲವು  (1984ರಲ್ಲಿ ತೆರೆ ಕಂಡ ಕನ್ನಡದ ಪ್ರಚಂಡ ಕುಳ್ಳ, ಹಳ್ಳಿ ಮೇಷ್ಟ್ರು, ಅಳಿಮಯ್ಯ, ಚಿನ್ನಾ, ಲಾಕಪ್ ಡೆತ್ ಸಿನಿಮಾಗಳಲ್ಲಿ ಸಿಲ್ಕ್ ನಟಿಸಿದ್ದರು) ಹಿಂದಿ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಅಪಾರ ಹೆಸರು, ಹಣವನ್ನು ಗಳಿಸಿದ್ದರು. ಬಾಲು ಮಹೇಂದರ್ ಅವರ ಮೂನ್ ಡ್ರಮ್ ಪಿರೈ ತಮಿಳು ಸಿನಿಮಾ ಸಿಲ್ಕ್ ಸ್ಮಿತಾರನ್ನು ಒಂದು ಪಕ್ಕಾ ಕೌಟುಂಬಿಕಾ ಹುಡುಗಿಯ ಇಮೇಜ್ ಕ್ರಿಯೇಟ್ ಮಾಡಿ ಕೊಟ್ಟಿತ್ತು. ಚಿತ್ರದಲ್ಲಿ ಶ್ರೀದೇವಿ, ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿದ್ದರು. ಅದೇ ಸಿನಿಮಾ ಹಿಂದಿಯಲ್ಲಿ ಸದ್ಮಾ ಎಂಬ ಹೆಸರಿನಲ್ಲಿ ರಿಮೇಕ್ ಕೂಡಾ ಆಯಿತು.

“ಆ” ನಿರ್ಧಾರವೇ ಸಿಲ್ಕ್ ಬದುಕಿಗೆ ಮುಳುವಾಯಿತೇ?

ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ತುಂಡುಡುಗೆ ತೊಟ್ಟು ನಟಿಸಿ ಪ್ರೇಕ್ಷಕರ ನಿದ್ದೆಗೆಡಿಸುತ್ತಿದ್ದರೆ, ಮತ್ತೊಂದೆಡೆ ವೈಯಕ್ತಿಕ ಬದುಕಿನಲ್ಲಿ ಸಿಲ್ಕ್ ಒತ್ತಡಕ್ಕೆ ಒಳಗಾಗಿದ್ದರು. ಆಕೆಗೆ ಆಪ್ತ ಗೆಳೆಯರ ಬಳಗದ ಪ್ರಮಾಣ ಕೂಡಾ ಚಿಕ್ಕದಿತ್ತು. ಸಿಲ್ಕ್ ಯಾರನ್ನೂ ಅಷ್ಟು ಸುಲಭವಾಗಿ ತನ್ನ ಗೆಳೆಯರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲವಾಗಿತ್ತು! ಸಿಲ್ಕ್ ಸ್ಮಿತಾಳ ಕೆಟ್ಟ ಗುಣ ಅಂದರೆ ಆಕೆಗೆ ಕೂಡಲೇ ಸಿಟ್ಟು ನೆತ್ತಿಗೇರುತ್ತಿತ್ತು ಮತ್ತು ಹೇಳೋದನ್ನು ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದಳು..ಇದರ ಹೊರತಾಗಿ ಸಿಲ್ಕ್ ಸ್ಮಿತಾ ಸಿನಿಮಾ ಶೂಟಿಂಗ್ ಗೆ ಬರುವ ಸಮಯ ಪಕ್ಕಾ ಆಗಿತ್ತು. ತನ್ನ ಸೀಮಿತ ಶಿಕ್ಷಣದ ಜೊತೆಗೂ ಸಿಲ್ಕ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು. ಆಕೆಯ ಆಪ್ತ ಗೆಳೆತಿಯರ ಪ್ರಕಾರ ಸಿಲ್ಕ್ ಸ್ಮಿತಾ ಮಗುವಿನಂತಹ ಮನಸ್ಸಿನವಳು.

ಹೀಗೆ ನಟನೆಯಲ್ಲಿ ಮಿಂಚುತ್ತಿದ್ದ ಮಾದಕ ಕಂಗಳ ತಾರೆ ಸಿಲ್ಕ್ ತಾನೊಂದು ಸಿನಿಮಾ ನಿರ್ಮಾಣ ಮಾಡಬೇಕು ಅದರ ನಾಯಕಿಯಾಗಬೇಕು ಎಂಬ ಹಠಕ್ಕೆ ಬೀಳುತ್ತಾರೆ. ಅಂತೂ ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಹಂಬಲದೊಂದಿಗೆ ನೂರಾರು ಸಿನಿಮಾದಲ್ಲಿ ಗಳಿಸಿದ್ದ ಹಣವನ್ನೆಲ್ಲಾ ತಂದು ತನ್ನ ಸಿನಿಮಾಕ್ಕೆ ಸುರಿಯುತ್ತಾಳೆ. ಚಿತ್ರ ಅತ್ತ ಪೂರ್ಣ ಆಗುವ ಮೊದಲೇ ಸಿಲ್ಕ್ ಹತ್ತಿರ ಇದ್ದ ಹಣವೆಲ್ಲಾ ಖಾಲಿಯಾಗಿತ್ತು! ಇದರೊಂದಿಗೆ ತಾನು ಇಷ್ಟಪಟ್ಟು ಪ್ರೀತಿಸಿದ್ದ ಪ್ರೇಮಿ ಕೂಡಾ ದೂರತಳ್ಳಿಬಿಟ್ಟಿದ್ದ ಇದರಿಂದಾಗಿ ಸಿಲ್ಕ್ ಸ್ಮಿತಾ ಬದುಕು ತ್ರಿಶಂಕು ಸ್ಥಿತಿಯಲ್ಲಿ ಹೊಯ್ದಾಡತೊಡಗಿತ್ತು.

ಆರ್ಥಿಕ ಸೋಲು, ಒತ್ತಡದ ಬದುಕಿನಿಂದ ಕಂಗೆಟ್ಟು ಹೋಗಿದ್ದ ಸಿಲ್ಕ್ ಸ್ಮಿತಾ “ಕುಡಿತದ” ದಾಸಳಾಗಿ ಬಿಟ್ಟಿದ್ದಳು. ತನ್ನೊಳಗಿನ ನೋವು, ಸಂಕಟ ತಡೆಯಲಾರದ ಸಿಲ್ಕ್ ಸ್ಮಿತಾ 1996ರ ಸೆಪ್ಟೆಂಬರ್ 23ರಂದು ತನ್ನ ಆಪ್ತ ಗೆಳತಿ, ಡ್ಯಾನ್ಸರ್ ಅನುರಾಧಾ ಜೊತೆ ಮಾತನಾಡಿ ಚರ್ಚಿಸಿದ್ದಳು. ಆಗ ಅನುರಾಧಾ ನಾನು ನನ್ನ ಮಗುವನ್ನು ಶಾಲೆಗೆ ಬಿಟ್ಟು ನಿನ್ನ ರೂಮಿಗೆ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದರು. ವಿಧಿಯಾಟ ಬೇರೆಯೇ ಆಗಿತ್ತು ಸ್ವಲ್ಪ ಹೊತ್ತಿನಲ್ಲಿಯೇ ಚೆನ್ನೈನ ಸಾಲಿಗ್ರಾಮದಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ಸಿಲ್ಕ್ ನೇಣಿಗೆ ಶರಣಾಗಿದ್ದರು.! ಆಕೆಯ ಸಾವಿನ ಹಿಂದಿನ ರಹಸ್ಯ ಈಗಲೂ ರಹಸ್ಯವಾಗಿಯೇ ಉಳಿದುಬಿಟ್ಟಿದೆ. ಒತ್ತಡದಿಂದಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹಲವರು ನಂಬಿದ್ದರು. ಕೆಲವರು ಇದೊಂದು ಮೂರ್ಖ ನಿರ್ಧಾರ ಎಂದು ಹಳಿದಿದ್ದರು. ಅಂತೂ ಪೋಸ್ಟ್ ಮಾರ್ಟ್ಂ ವರದಿಯಲ್ಲಿ ಆಕೆ ಅತೀಯಾದ ಮದ್ಯ ಸೇವನೆ ಹಾಗೂ ಮಾನಸಿಕ ಒತ್ತಡವೇ ಸಾವಿಗೆ ಕಾರಣ ಎಂದು ಬಹಿರಂಗವಾಗಿತ್ತು. ನೇಣಿಗೆ ಶರಣಾಗುವ ಮೊದಲು ಸಿಲ್ಕ್ ತೆಲುಗಿನಲ್ಲಿ ಈ ರೀತಿ ಡೆತ್ ನೋಟ್ ಬರೆದಿಟ್ಟಿದ್ದಳು…

ನಾನು ತುಂಬಾ ಬಳಲಿ ಬೆಂಡಾಗಿದ್ದೇನೆ.ಬಣ್ಣದ ಲೋಕದ ಮಂದಿ ನನಗೆ ಬದುಕು ನೀಡಿದ್ದಾರೆ. ಆದರೆ ಈಗ ಸೋಲು ನನ್ನ ಕಿತ್ತು ತಿನ್ನುತ್ತಿವೆ. ಅದರಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಈ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇನೆ. ನನ್ನ ಕಲಾಭಿಮಾನಿಗಳಿಗೆ ಧನ್ಯವಾದಗಳು

ನಿಮ್ಮ ಸಿಲ್ಕ್

ಹೀಗೆ ಬಣ್ಣದ ಲೋಕದಲ್ಲಿ ಐಟಂ ಸಾಂಗ್ಸ್ ನಲ್ಲಿ ಮಿಂಚುತ್ತಿದ್ದ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಹಲೋಕ ತ್ಯಜಿಸಿದ್ದಳು. ಸಿಲ್ಕ್ ಆತ್ಮಕಥೆ ಹಿಂದಿಯಲ್ಲಿ “ದಿ ಡರ್ಟಿ ಫಿಕ್ಚರ್” ಎಂಬ ಹೆಸರಿನಲ್ಲಿ ತೆರೆಗೆ ಬಂದಿತ್ತು.

(ಇಂದು (ಡಿಸೆಂಬರ್ 02) ಬದುಕಿರುತ್ತಿದ್ದರೆ 62ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು.)

ನಾಗೇಂದ್ರ ತ್ರಾಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next