Advertisement

ಮೋದಿ ಮೈಸೂರನ್ನ ಪ್ಯಾರಿಸ್‌ ಮಾಡಿದ್ರಾ?

01:14 PM Feb 18, 2018 | Team Udayavani |

ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರು ಸೋಮವಾರ ಮೈಸೂರಿನಲ್ಲಿ ನಡೆಸುತ್ತಿರುವ ಸಾರ್ವಜನಿಕ ಸಭೆಯ ಉದ್ದೇಶವೇನು ಎಂದು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಪ್ರಶ್ನಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರಿಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಹೇಳಿ ಹೋಗಿ ಎಂದು ಆಗ್ರಹಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆ ಭಾಷಣದಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಮೈಸೂರನ್ನು ಸಿಂಗಾಪುರ, ಪ್ಯಾರೀಸ್‌ ಮಾಡುತ್ತೇನೆ ಎಂದಿದ್ದರು. ಈ ನಾಲ್ಕು ವರ್ಷಗಳಲ್ಲಿ ಮೈಸೂರು ಪ್ಯಾರೀಸ್‌ ಆಗಿದೆಯೇ ಎಂದು ಪ್ರಶ್ನಿಸಿದರು.

ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಪಟ್ಟಿ ಹೊತ್ತು ಬರುತ್ತಿದ್ದಾರೆಯೇ? ಅಥವಾ ಕಳೆದ ಹತ್ತಾರು ವರ್ಷಗಳಿಂದ ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳಿಗೆ ತಾವು ಆಡಳಿತಾತ್ಮಕ ಒಪ್ಪಿಗೆ ನೀಡಿರುವುದಲ್ಲದೆ, ರಾಜ್ಯಕ್ಕೆ ಒದಗಿಸಲಾದ ಅನುಕೂಲತೆಗಳ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ಈ ಸಭೆ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

2008ರಲ್ಲಿ ರಾಜ್ಯದ ಜನತೆ ಬಿಜೆಪಿಗೆ ಅಧಿಕಾರ ನೀಡಿದ್ದರು. ಆ ಐದು ವರ್ಷಗಳ ಕಾಲ ಹಗರಣ ಮುಕ್ತ, ಪಾರದರ್ಶಕ, ಪ್ರಾಮಾಣಿಕ ಆಡಳಿತ ನೀಡಿದ್ದೇವೆ. ಅದೇ ಮಾದರಿಯ ಆಡಳಿತವನ್ನು ಮತ್ತೂಮ್ಮೆ ರಾಜ್ಯಕ್ಕೆ ನೀಡಲು ಅವಕಾಶ ಮಾಡಿಕೊಡಿ ಎಂದು ಜನತೆಗೆ ಮನವಿ ಮಾಡಲು ಬರುತ್ತಿದ್ದಾರೆಯೇ ಎಂದು ಲೇವಡಿ ಮಾಡಿದರು.

ಸಾಮಾಜಿಕ ನ್ಯಾಯದ ವಿರೋಧಿಗಳು: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರಮೋದಿ ಅವರು ಸಾಮಾಜಿಕ ನ್ಯಾಯದ ವಿರೋಧಿಗಳು. ಅವರಿಗೆ ಸಾಮಾಜಿಕ ನ್ಯಾಯದ ಎಬಿಸಿಡಿ ಗೊತ್ತಿಲ್ಲ. ಮೋದಿ ಅವರ ಮಂತ್ರಿ ಮಂಡಲದಲ್ಲಿ ಹಿಂದುಳಿದ ವರ್ಗ, ವೀರಶೈವ-ಲಿಂಗಾಯಿತರು, ಪರಿಶಿಷ್ಟ ಜಾತಿಯವರಿಗೆ ಪ್ರಾತಿನಿಧ್ಯವೇ ಇಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಪಕ್ಷದ ಟಿಕೆಟ್‌ ಕೊಡಲಿಲ್ಲ. ದೇಶದ ಶೇ.48ರಷ್ಟು ಜನಸಂಖ್ಯೆ ಇರುವವರ ಪ್ರಾತಿನಿಧ್ಯವೇ ಇಲ್ಲದೇ ಇವರು ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

Advertisement

ಹೃದಯ ಹೀನರು: ನರೇಂದ್ರಮೋದಿ ಅವರ ಪತ್ನಿ ಜಶೋಧಾ ಬೇಹನ್‌ ಅವರು ತನ್ನ ಪತಿಗೆ ಒಳ್ಳೆಯದಾಗಲಿ ಎಂದು 2014ರಲ್ಲಿ ಕರ್ನಾಟಕಕ್ಕೆ ಬಂದು ಅಂಜನಾದ್ರಿ ಬೆಟ್ಟ ಹತ್ತಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ವಾರದ ಹಿಂದೆ ಅವರು ಪಯಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಜಶೋಧಾ ಬೇಹನ್‌ ಅವರು ಗಾಯಗೊಂಡರೂ ಕನಿಷ್ಠ ಒಂದು ದೂರವಾಣಿ ಕರೆಮಾಡಿ ಆರೋಗ್ಯ ವಿಚಾರಿಸದ ಹೃದಯ ಹೀನ ಪ್ರಧಾನಿ ನರೇಂದ್ರಮೋದಿ ಎಂದು ಟೀಕಿಸಿದರು.

ಸುಷ್ಮಾ ಸ್ವರಾಜ್‌ರನ್ನು ವಿದೇಶಾಂಗ ಸಚಿವಾಲಯದ ಗುಮಾಸ್ತರಂತೆ ನಡೆಸಿಕೊಳ್ಳುತ್ತಿದ್ದಾರೆ. ಇವರು ವಿದೇಶ ಸುತ್ತಿ ಹೊತ್ತು ತಂದ ಕಡತಗಳನ್ನು ವಿಲೇವಾರಿ ಮಾಡಲು ಸುಷ್ಮಾ ಸ್ವರಾಜ್‌ ವಿದೇಶಾಂಗ ಮಂತ್ರಿಯಾದಂತಾಗಿದೆ. ಮೋದಿ ಅವರು ಸಹದ್ಯೋಗಿಗಳನ್ನು ಗೌರವಿಸುವುದಿಲ್ಲ. ತನ್ನ ಶ್ರೀಮತಿಯನ್ನೂ ಗೌರವಿಸುವುದಿಲ್ಲ. ಹಿರಿಯರನ್ನೂ ಗೌರವಿಸುವುದಿಲ್ಲ ಎಂದು ಟೀಕಿಸಿದರು.

ಮಾತಿನ ಮೋಡಿಯಿಂದ ಎಷ್ಟುದಿನ ಆಡಳಿತ: 17ಜನ ಬಿಜೆಪಿ ಲೋಕಸಭಾ ಸದಸ್ಯರನ್ನು ರಾಜ್ಯದ ಜನತೆ ಆರಿಸಿ ಕಳುಹಿಸಿದರೂ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ಇರಲಿ, ಹೇಳಿಕೊಳ್ಳುವಂತಹ ದೊಡ್ಡ ಕಾರ್ಯಕ್ರಮಗಳನ್ನೂ ನೀಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಭಯೋತ್ಪಾದನೆ ನಿರ್ಮೂಲನೆ, ಭ್ರಷ್ಟಾಚಾರ ನಿಗ್ರಹ, ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ವಾಪಸ್‌ ತರುತ್ತೇನೆ, ನಿರುದ್ಯೋಗ ನಿವಾರಣೆ ಮಾಡುತ್ತೇನೆ,

ಗೋಹತ್ಯೆ ನಿಷೇಧ ಮಾಡುತ್ತೇನೆ ಎಂದು ನೀಡಿದ್ದ ಭರವಸೆಗಳಾವುವೂ ಈಡೇರಿಲ್ಲ. ಜತೆಗೆ ಮೋದಿಯವರಿಂದ ದೇಶದ ಜನತೆ ಅಪೇಕ್ಷಿಸಿದ್ದ ಲೋಕಪಾಲ ಮಸೂದೆ ಜಾರಿ, ಗಂಗಾ-ಕಾವೇರಿ ನದಿ ಜೋಡಣೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಮಾಂಸ ರಫ್ತು ನಿಷೇಧದಂತಹ ಕೆಲಸಗಳೂ ಈ ನಾಲ್ಕು ವರ್ಷದಲ್ಲಿ ಆಗಿಲ್ಲ. ಕೇವಲ ಮಾತಿನ ಮೋಡಿಯಿಂದ ಎಷ್ಟು ದಿನ ಆಡಳಿತ ಮಾಡುತ್ತೀರಿ ಎಂದು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಜರಿದರು.

ಆಕಾಶದಲ್ಲಿ ಹಾರಾಡುವ ಹಕ್ಕಿ(ಮೋದಿ)ಯ ಅಂದ ನೋಡಿ ಕೈಯಲ್ಲಿರುವ ಪಾರಿವಾಳ (ಸಿದ್ದರಾಮಯ್ಯ)ವನ್ನು ಬಿಡುವಷ್ಟು ದಡ್ಡರಲ್ಲ ರಾಜ್ಯದ ಜನತೆ. ಜನರ ಕೈಗೆ ಸಿಗುವ, ಕಷ್ಟಕ್ಕೆ ಸ್ಪಂದಿಸುವ ಪಾರಿವಾಳ ಇದು.
-ಸಿ.ಎಚ್‌.ವಿಜಯಶಂಕರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next