ಅಮೂಲ್ಯ ಮತ್ತು ಜಗದೀಶ್ ಅವರ ಮದುವೆ ಸಾಂಗವಾಗಿ ನೆರವೇರಿದೆ. ಸದ್ಯದಲ್ಲೇ ಅವರಿಬ್ಬರ ರಿಸೆಪ್ಶನ್ ಸಹ ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಧ್ಯೆ ಒಂದು ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಅದು ಗಣೇಶ್ ಮತ್ತು ಶಿಲ್ಪಾ ಇಬ್ಬರೂ ಮುಂದೆ ನಿಂತು ಯಾಕೆ ಅಮೂಲ್ಯ ಅವರ ಮದುವೆ ಮಾಡಿಸಿದರು ಎಂದು? ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಯಾವೊಬ್ಬ ನಟ ಸಹ, ತಮ್ಮ ಜೊತೆಗೆ ಅಭಿನಯಿಸಿದ ನಟಿಯ ವಿವಾಹವನ್ನು ಮುಂದೆ ನಿಂತು ಮಾಡಿರಲಿಲ್ಲ.
ಅಮೂಲ್ಯ ಅವರ ಮದುವೆಯನ್ನು ಗಣೇಶ್ ಮತ್ತು ಶಿಲ್ಪಾ ಅವರುಗಳು ಮುಂದೆ ನಿಂತು ಯಾಕೆ ನಡೆಸಿಕೊಟ್ಟರು ಎಂಬುದು ಎಂಬ ಪ್ರಶ್ನೆ ಒಂದು ಕಡೆಯಾದರೆ, ಮುಂದಿನ ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ಪಡೆಯುವುದಕ್ಕೆ ಇಷ್ಟೆಲ್ಲಾ ಆಗಿದೆ ಎಂಬ ಉತ್ತರ ಸಿಗುತ್ತದೆ. ಇಷ್ಟಕ್ಕೂ ಅಮೂಲ್ಯ ಮದುವೆಗೂ, ಶಿಲ್ಪಾ ಅವರು ವಿಧಾನಸಭೆ ಚುನಾವಣೆಯ ಟಿಕೆಟ್ ಪಡೆಯುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಅಮೂಲ್ಯ ಅವರ ಮಾವ ಬಿಜೆಪಿಯ ಮಾಜಿ ಕೌನ್ಸಿಲರ್.
ಅವರ ಮೂಲಕ ಶಿಲ್ಪ ಟಿಕೆಟ್ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಮತ್ತು ಅದಕ್ಕೆ ಕೃತಜ್ಞತಾಪೂರ್ವಕವಾಗಿ ಅವರ ಮಗನಿಗೂ, ಅಮೂಲ್ಯಗೂ ಮದುವೆ ಮಾಡಿಸಿದ್ದಾರೆ ಎಂದು ಕೆಲವು ಕಡೆ ವರದಿಯಾಗಿದೆ. ಈ ಕುರಿತು ಗಣೇಶ್ ಅವರನ್ನು ಸಂಪರ್ಕಿಸಿದಾಗ, ಪ್ರತಿ ಒಳ್ಳೆಯ ಕೆಲಸದ ಕುರಿತೂ ಹೀಗೆ ಹುಳುಕು ಹುಡುಕುವುದು ಅದೆಂತಹ ವಿಕೃತ ಮನಸ್ಥಿತಿ ಎಂದು ಪ್ರಶ್ನಿಸುತ್ತಾರೆ ಗಣೇಶ್. “ಜನ ಯಾಕೆ ಪ್ರತಿ ಕೆಲಸದಲ್ಲೂ ಹುಳುಕು ಹುಡುಕುತ್ತಾರೋ ಆಶ್ಚರ್ಯವಾಗುತ್ತದೆ.
ಹೀಗೆಲ್ಲಾ ಮಾಡುವುದರಿಂದಲೇ ಜನ ಒಳ್ಳೆಯ ಕೆಲಸ ಮಾಡೋದು ಕಡಿಮೆಯಾಗುತ್ತಿದೆ. ನಾನು ಯಾವತ್ತೂ ರಾಜಕೀಯದಿಂದ ಗುರುತಿಸಿಕೊಂಡಿಲ್ಲ. ರಾಜಕೀಯದಿಂದ ನಾನು ದೂರ. ಇನ್ನು ಶಿಲ್ಪಾಗೆ ಟಿಕೆಟ್ ಪಡೆಯುವುದಕ್ಕೆ ಈ ತರಹ ಮಾಡುವ ಅವಶ್ಯಕತೆ ಇಲ್ಲ. ಮದುವೆ ಮಾಡಿಸಿ ರಾಜಕೀಯದಲ್ಲಿ ಬೆಳೆಯುವ ಸ್ಥಿತಿ ಬಂದಿಲ್ಲ. ಅಮೂಲ್ಯ ಮದುವೆಯ ಹಿಂದೆ ನಾವಿದ್ದಿದ್ದಕ್ಕೆ ಕಾರಣ, ಆಕೆಯ ಸ್ನೇಹ. ಅಮೂಲ್ಯ ನನ್ನ ಸಹನಟಿಯಷ್ಟೇ ಅಲ್ಲ, ನಮ್ಮ ಫ್ಯಾಮಿಲಿ ಫ್ರೆಂಡ್ ಕೂಡಾ.
ಇನ್ನು ಜಗದೀಶ್ ಕಡೆಯವರು ಸಹ ನಮ್ಮ ಫ್ಯಾಮಿಲಿ ಫ್ರೆಂಡ್. ಇಬ್ಬರೂ ಕಾಮನ್ ಸ್ನೇಹಿತರಾದ್ದರಿಂದ, ಅವರಿಬ್ಬರ ಮದುವೆ ವಿಷಯ ನಮ್ಮ ಮನೆಯಲ್ಲಿ ಪ್ರಸ್ಥಾಪವಾಗಿ, ನಮ್ಮ ಮನೆ ವೇದಿಕೆಯಾಯಿತು. ಎರಡೂ ಮನೆಯವರು ಜಾತಕ ನೋಡಿ, ಇಬ್ಬರೂ ಪರಸ್ಪರ ಒಪ್ಪಿದ್ದರಿಂದ ಮದುವೆಯಾಯಿತು. ಹಾಗಾಗಿ ರಾಜಕೀಯಕ್ಕೂ, ಮದುವೆಗೂ ಯಾವುದೇ ಸಂಬಂಧವಿಲ್ಲ. ಅಷ್ಟೇ ಅಲ್ಲ, ಚುನಾವಣೆ ಇರುವುದು ಇನ್ನೂ ಒಂದು ವರ್ಷದ ನಂತರ. ಅದಕ್ಕೂ ಮದುವೆ ವಿಷಯಕ್ಕೂ ತಳಕು ಹಾಕಿದ್ದು ಆಶ್ಚರ್ಯದ ವಿಷಯ.
ಇನ್ನು ಈ ತರಹ ಹುಳುಕು ಹುಡುಕೋದು ವಿಕೃತ ಮನಸ್ಥಿತಿ’ ಎನ್ನುತ್ತಾರೆ ಗಣೇಶ್. ಇಂಥ ವಿಷಯ ಕೇಳಿದರೆ ನಗು ಬರುವುದಷ್ಟೇ ಅಲ್ಲ, ಸಿಟ್ಟು ಬರುತ್ತದೆ ಎನ್ನುತ್ತಾರೆ ಗಣೇಶ್. “ನಾನು ಸಾಮಾನ್ಯವಾಗಿ ಸಿಟ್ಟು ಮಾಡಿಕೊಳ್ಳುವವನಲ್ಲ. ಆದರೆ, ಇಂಥ ವಿಷಯ ಕೇಳಿ ಸಿಟ್ಟು ಬರುತ್ತದೆ. ಎಂತಹ ವಿಕೃತ ಮನಸ್ಥಿತಿ ಇದು. ಈ ವಿಷಯ ಕೇಳಿದವರೆಲ್ಲಾ, ನಿಮ್ಮ ಸ್ಥಾನಕ್ಕೆ ಇವೆಲ್ಲಾ ಮಾಡಬೇಕಾ ಎನ್ನುತ್ತಿದ್ದಾರೆ.
ಯಾರೋ ರಾಜಕೀಯದಲ್ಲಿ ಬೆಳೆಯುವುದಕ್ಕೆ, ಇನ್ನಾರಧ್ದೋ ಮದುವೆ ಮಾಡಿಸುವುದು ಹಾಸ್ಯಾಸ್ಪದ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಯಾವಗಲೋ ಆಗುವ ಚುನಾವಣೆಗೆ, ಈಗ ಇವೆಲ್ಲಾ ಮಾಡಬೇಕಾ? ಈ ಮದುವೆಗೆ ನಾವು ಮುಂದೆ ನಿಂತಿದ್ದು, ಅಮೂಲ್ಯ ನಮ್ಮ ಫ್ಯಾಮಿಲಿ ಫ್ರೆಂಡ್ ಎಂಬ ಕಾರಣಕ್ಕೇ ಹೊರತು, ಬೇರೆ ಯಾವುದೇ ಕಾರಣಕ್ಕಲ್ಲ. ಈ ತರಹವೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದರೆ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಗಣೇಶ್.