Advertisement

ಕೇಂದ್ರ ಸರಕಾರದಿಂದ ಸರ್ವಾಧಿಕಾರಿ ಧೋರಣೆ: ಖರ್ಗೆ ಆರೋಪ

09:19 PM Oct 06, 2021 | Team Udayavani |

ಬೆಂಗಳೂರು: ಕೇಂದ್ರ ಸರಕಾರವು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಉತ್ತರಪ್ರದೇಶದ ಲಖೀಂಪುರದ ಘಟನೆ ಸಾಕ್ಷಿ ಎಂದರು.

ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದೆ. ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ಸರಕಾರಗಳು ಹಾಗೂ ಕೇಂದ್ರ ಸರಕಾರ ದೌರ್ಜನ್ಯ ನಡೆಸುತ್ತಿವೆ ಎಂದು ಆರೋಪಿಸಿದರು.

ಮೂರು ಕರಾಳ ರೈತ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು 10 ತಿಂಗಳುಗಳಿಂದ ಧರಣಿ ಮಾಡುತ್ತಿದ್ದಾರೆ. ಅವರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಅವರು ಈ ಹಿಂದೆ ಪ್ರತಿಭಟನನಿರತ ರೈತರಿಗೆ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು ಎಂದು ಹೇಳಿದರು.

ಇದನ್ನೂ ಓದಿ:ಶಿರಸಿಯಲ್ಲಿ ಕುಂಭದ್ರೋಣ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ

Advertisement

ಉತ್ತರ ಪ್ರದೇಶದ ಕಾಂಗ್ರೆಸ್‌ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರು ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದಾಗ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ. ಇದು ಸರಿಯಲ್ಲ ಎಂದು ಹೇಳಿದರು.

ಮೋದಿಯವರು ನಿನ್ನೆ ಲಕ್ನೋದಲ್ಲಿದ್ದರೂ ರೈತರ ಕುಟುಂಬಕ್ಕೆ ಸಾಂತ್ವನ ಹೇಳದೆ ನಿರ್ಲಕ್ಷಿಸಿದ್ದಾರೆ. ಇದು ಅವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಸಾಕ್ಷಿ ಎಂದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ್‌ ಖಂಡ್ರೆ, ಧ್ರುವ ನಾರಾಯಣ್‌ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next