Advertisement
ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಹೊನ್ನಾವರದಿಂದ 12 ಕಿ.ಮೀ.ದೂರದಲ್ಲಿರುವ ಈ ಕ್ಷೇತ್ರದ ಶಿವ ಮತ್ತು ಗಣಪತಿಯರು ಶೀಘ್ರಫಲ ನೀಡುತ್ತಾರೆಂದು ಖ್ಯಾತವಾಗಿದೆ.
ಸ್ಕಂದ ಪುರಾಣದ ಪ್ರಕಾರ, ನಾರದ ಮಹರ್ಷಿಗಳ ಕೋರಿಕೆಯಂತೆ ಮಹಾಗಣಪತಿ ಇಡಗುಂಜಿಗೆ ಬಂದು ನೆಲೆಸುವ ಸಂದರ್ಭದಲ್ಲಿ ಸುತ್ತಮುತ್ತಲೂ ಹಲವು ಪುಣ್ಯ ಕ್ಷೇತ್ರಗಳಿದ್ದವಂತೆ. ಶರಾವತಿ ನದಿಯ ತಟದಲ್ಲಿ ಶಿವ ಪಾರ್ವತಿಯರು ಎತ್ತರದ ಗುಡ್ಡದಂಥ ನಿರ್ಜನ ಪ್ರದೇಶದಲ್ಲಿ ನೆಲೆಯಾದರಂತೆ. ಹಲವು ಶತಮಾನಗಳ ಕಾಲ ಮೇವಿಗಾಗಿ ಬರುವ ಕೌಲೆ ಹಸುವಿನ ಹಾಲಿನ ಅಭಿಷೇಕದಿಂದ ಧನ್ಯರಾಗುತ್ತಾ ನೆಲೆಯಾಗಿದ್ದರಂತೆ. ಗಣಪತಿಯೂ ಇಡಗುಂಜಿ ಕ್ಷೇತ್ರದಲ್ಲಿ ನೆಲೆಯಾಗಿ ಅಲ್ಲಿ ಅವನಿಗೆ ನಿತ್ಯ ಪೂಜೆ ಆರಂಭವಾಗುತ್ತಿದ್ದಂತೆ, ಇಲ್ಲಿನ ದೇವರಿಗೆ ಸಹ ಚಿಕ್ಕ ಗುಡಿ ನಿರ್ಮಾಣವಾಗಿ ಈ ಮಾರ್ಗದಲ್ಲಿ ಓಡಾಡುವವರಿಂದ ಪೂಜೆ ಪುನಸ್ಕಾರಗಳು ಆರಂಭವಾಯಿತು. ಪೂರ್ವಾಭಿಮುಖವಾಗಿ ನೆಲೆಯಾದ
ತನ್ನ ಕ್ಷೇತ್ರದ ಎದುರಿನ ರಸ್ತೆಯಲ್ಲಿ ಓಡಾಡುವ ಪ್ರತಿಯೊ ಬ್ಬರೂ ತನ್ನನ್ನು ಪೂಜಿಸಿಯೇ ಮುಂದಿನ ಪ್ರಯಾಣ ಬೆಳೆಸಬೇಕೆಂಬ ಇಚ್ಚೆ ಶಿವನದಾಗಿತ್ತು. ನೂರಾರು ವರ್ಷಗಳ ಹಿಂದೆ ಈ ಮಾರ್ಗದ ಮೂಲಕ ಮುಂದಿನ ಗ್ರಾಮಕ್ಕೆ ಸಾಗುತ್ತಿದ್ದ ಮದುವೆ ದಿಬ್ಬಣದ ಕುಟುಂಬಸ್ಥರು ಈ ದೇವರಿಗೆ ಪೂಜಿಸದೆ ಮುಂದೆ ಸಾಗಿದರಂತೆ.ಇದರಿಂದ ಕೋಪಗೊಂಡ ಶಿವನು ಇಡೀ ದಿಬ್ಬಣದ ಪರಿವಾರವೇ ಕಲ್ಲಾಗುವಂತೆ ಶಪಿಸಿದನಂತೆ. ಪರಿಣಾಮ, ದಿಬ್ಬಣದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಕಲ್ಲಾಗಿ ಹೋದರಂತೆ. ಇದರಿಂದಾಗಿ ಈ ಸ್ಥಳಕ್ಕೆ ದಿಬ್ಬಣ ಕಲ್ಲಾದ ಸ್ಥಳ ಎಂಬ ಹೆಸರುಬಂದು ಮುಂದೆ ‘ದಿಬ್ಬಣಗಲ್ಲು’ ಎಂಬ ಹೆಸರು ಶಾಶ್ವತವಾಯಿತು ಎನ್ನುತ್ತದೆ ಇತಿಹಾಸ. ದಿಬ್ಬಣವನ್ನು ಕಲ್ಲಾಗುವಂತೆ ಶಪಿಸುವಾಗ ಕೋಪಗೊಂಡ ಶಿವ ಉಗ್ರಸ್ವರೂಪಿಯಾಗಿ ಬದಲಾದನಂತೆ. ಮುಂದಿನ ದಿನಗಳಲ್ಲಿ ಗುಂಪು ಗುಂಪಾಗಿ ಸಾಗುವ ಜನರಿಗೆಲ್ಲ ಕಲ್ಲಾಗುವ ಶಾಪ ನೀಡುತ್ತಾ ತನ್ನ ಕೋಪ ಪ್ರಕಟಿಸುತ್ತಿದ್ದನಂತೆ. ಇದರಿಂದಾಗಿ, ದೇವಾಲಯದ ಎದುರಿನಲ್ಲಿ ಜಂಬಿಟ್ಟಿಗೆಯ ಕಲ್ಲುಗಳು ಸಾಲಾಗಿ ತಲೆಯೆತ್ತಿ ಗುಡ್ಡವಾಗಿ ನಿಂತವು. ಕೋಪಿಷ್ಟನಾದ ಶಿವನನ್ನು ಶಾಂತಗೊಳಿಸಿಸಲು ಭಕ್ತರೆಲ್ಲ ಸೇರಿ ಶಿವನನ್ನು ಪ್ರಾರ್ಥಿಸುತ್ತಾ, ನಾನಾ ವಿಧದಲ್ಲಿ ಭಜನೆ ಮಾಡುತ್ತಾ, ಸಾಮೂಹಿಕವಾಗಿ ರುದ್ರಪಠಣ ಮಾಡುತ್ತಾ ದೇಗುಲದ ಬಳಿ ಬಂದು ದೇವರ ವಿಗ್ರಹದ ಪಕ್ಕದಲ್ಲೇ ಪ್ರಸನ್ನ ಗಣಪತಿ ದೇವರನ್ನು ಸ್ಥಾಪಿಸಿ ಪೂಜಿಸಿದರಂತೆ. ಭಕ್ತರಿಗೆ ಅಭಯ ನೀಡಿದ ಗಣಪತಿ, ಶಿವನ ಬಳಿ ಕೋಪ ಬಿಟ್ಟು ಭಕೊ¤àದ್ಧಾರಕನಾಗಿ ಶಾಂತಚಿತ್ತ ಬೀರುವಂತೆ ಮೊರೆ ಇಟ್ಟನಂತೆ. ಆಗ ಶಾಂತನಾದ ಶಿವ ಭಕ್ತರ ಪ್ರಾರ್ಥನೆ-ಪೂಜೆಗಳಿಗೆ ಸದಾ ಕಾಲ ಪ್ರಸನ್ನನಾಗಿ ಮನೋಭಿಷ್ಟ ನೆರವೇರಿಸುತ್ತಾ ತನ್ನ ಖ್ಯಾತಿಯನ್ನು ಎಲ್ಲೆಡೆ ಪಸರಿಸಿದನಂತೆ.
Related Articles
Advertisement
ಇಲ್ಲಿನ ದೇವರಿಗೆ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,ಹೂನ ಪೂಜೆ ನಡೆಯುತ್ತದೆ. ಗಣೇಶೋತ್ಸವದಂದು ಮಹಾಗಣಪತಿಗೆ ವೈಭವದ ಪೂಜೆ ನಡೆಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ತ ಸಂಜೆ ಹರಕೆ ಹೊತ್ತ ಭಕ್ತರಿಂದ ಸರದಿ ಪ್ರಕಾರ ದಿಪೋತ್ಸವ ಸೇವೆ ನಡೆಯುತ್ತದೆ.
ವಿದ್ಯೆ, ಉದ್ಯೋಗ, ಸಂತಾನ ಪ್ರಾಪ್ತಿ, ಸಂಸಾರದಲ್ಲಿ ನೆಮ್ಮದಿ,ವ್ಯವಹಾರ ವೃದ್ಧಿ, ಶತ್ರುಭಯ ನಾಶ, ಇಷ್ಟಾರ್ಥ ಸಿದ್ಧಿಗಳಿಗಾಗಿ ಭಕ್ತರು ಇಲ್ಲಿಗೆ ಬಂದು ರುದ್ರಾಭಿಷೇಕ, ದೀಪೋತ್ಸವ, ಗಣಹೋಮ ಇತ್ಯಾದಿ ಹರಕೆ ಹೊರುತ್ತಾರೆ.
ಎನ್.ಡಿ.ಹೆಗಡೆ ಆನಂದಪುರಂ