Advertisement

ವಜ್ರದ ಕಲ್ಲುಗಳು!

03:24 PM Jan 25, 2018 | |

ಒಂದು ಊರಿನಲ್ಲಿ ಗುಂಡ ಎಂಬ ಹುಡುಗನಿದ್ದ. ಆತನಿಗೆ ತಂದೆ ತಾಯಿ ಯಾರು ಇರಲಿಲ್ಲ. ಆತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಅವನು ಬಡವನಾಗಿದ್ದ ನಿಜ. ಆದರೆ ಅವನಲ್ಲಿ ಮಹತ್ವಾಕಾಂಕ್ಷೆ ತುಂಬಾ ಇತ್ತು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಅರ್ಥಪೂರ್ಣವಾಗಿ ಬದುಕಬೇಕು, ಎಂಬೆಲ್ಲಾ ಕನಸುಗಳು ಆತನಿಗಿದ್ದವು. ಅದಕ್ಕೆ ಹಣದ ಅವಶ್ಯಕತೆ ಇದೆ ಎಂಬ ಸತ್ಯ ಅವನಿಗೆ ತಿಳಿದಿತ್ತು. ಹೀಗಾಗಿಯೇ ತನ್ನೆಲ್ಲಾ ಆಸೆ, ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ತನ್ನ ಹಣೆಯಲ್ಲಿ ಭಗವಂತ ಏನು ಬರೆದಿದ್ದಾನೋ ಹಾಗೇ ಆಗಲಿ ಎಂದು ಅವನ ಮೇಲೆ ಭಾರ ಹಾಕಿ ಬದುಕುತ್ತಿದ್ದ. 

Advertisement

ಒಂದು ದಿನ ಗುಂಡ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ನದಿ ದಂಡೆಯಲ್ಲಿ ಹೊಳೆಯುತ್ತಿದ್ದ ಐದಾರು ಕಲ್ಲುಗಳು ಸಿಕ್ಕವು. ನೀರಿನ ಹರಿವಿಗೆ ಸಿಕ್ಕು ಅದೆಲ್ಲಿಂದಲೋ ಬಂದು ಅಲ್ಲಿ ಸೇರಿದ್ದವು. ಅವುಗಳು ಸಾಮಾನ್ಯ ಕಲ್ಲಾಗಿರಲು ಸಾಧ್ಯವೇ ಇಲ್ಲ ಎನ್ನುವುದು ಅವನಿಗೆ ಗೊತ್ತಾಗಿಹೋಯಿತು. ಇಂಥ ಕಲ್ಲುಗಳಿಗೇ, ಹೊಳಪು ಕೊಟ್ಟು ವಜ್ರಗಳನ್ನು ತಯಾರಿಸುತ್ತಾರೆ ಎನ್ನುವುದು ಅವನಿಗೆ ತಿಳಿದಿತ್ತು. ತನ್ನೆಲ್ಲಾ ಕನಸುಗಳನ್ನು ಪೂರೈಸಿಕೋ ಎಂದೇ ದೇವರು ಈ ಕಲ್ಲುಗಳನ್ನು ತನಗೆ ನೀಡಿದ್ದಾನೆ ಎಂದು ಗುಂಡ ತಿಳಿದ. ಅವನು ಭಗವಂತನನ್ನು ಕೃತಜ್ಞತೆಯಿಂದ ಸ್ಮರಿಸಿದ. 

ಆ ಕಲ್ಲುಗಳನ್ನು ಜೇಬಿನಲ್ಲಿಟ್ಟುಕೊಂಡು ಸಂತಸದಿಂದ ಭವಿಷ್ಯದ ಕುರಿತು ಯೋಚಿಸುತ್ತಾ ನಡೆದು ಹೋಗುತ್ತಿದ್ದ. ದಾರಿಯಲ್ಲಿ ಆರ್ತನಾದವೊಂದು ಕೇಳಿಸಿತು. ಜಿಂಕೆಯೊಂದು ಬೇಡನ ಬಳಿ ಸಿಕ್ಕಿಬಿದ್ದಿತ್ತು. ತನ್ನ ಸಾವು ಖಚಿತವೆಂದು ತಿಳಿದ ಜಿಂಕೆ ಸಹಾಯಕ್ಕಾಗಿ ಕೂಗಿಕೊಳ್ಳತೊಡಗಿತ್ತು. ಗುಂಡ, ಕೂಗು ಕೇಳಿಬಂದ ಸ್ಥಳವನ್ನು ತಲುಪಿದ. ಗುಂಡನನ್ನು ಕಂಡ ಜಿಂಕೆ ಅವನ ಕಣ್ಣಲ್ಲಿ ಅನುಕಂಪವನ್ನು ಗ್ರಹಿಸಿತು. ಅದಕ್ಕೇ ಅದು ಗುಂಡನಲ್ಲಿ ತನ್ನನ್ನು ಬಿಡಿಸುವಂತೆ ಕೇಳಿಕೊಂಡಿತು. 

ಜಿಂಕೆಯ ನೋವು ಕಂಡು ಮರುಗಿದ ಗುಂಡ ಅದನ್ನು ಬಿಟ್ಟುಬಿಡುವಂತೆ ಬೇಡನನ್ನು ವಿನಂತಿಸಿಕೊಂಡ. ಆದರೆ ಬೇಡ ಅದಕ್ಕೊಪ್ಪಲಿಲ್ಲ. ಜಿಂಕೆಯನ್ನು ಸಂತೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿದ. ಜಿಂಕೆಗೆ ಸಹಾಯ ಮಾಡಲೇಬೇಕೆಂದಿದ್ದರೆ ಸಾವಿರ ವರಹವನ್ನು ಕೊಟ್ಟು ಬಿಡಿಸಿಕೋ ಎನ್ನುತ್ತಾನೆ. “ನನ್ನ ಬಳಿ ಅಷ್ಟೊಂದು ದೊಡ್ಡ ಮೊತ್ತವಿಲ್ಲ’ ಎಂದಾಗ ಬೇಡ ಅಲ್ಲಿ ನಿಲ್ಲದೆ ಹೊರಟುಬಿಡುತ್ತಾನೆ. ಆಗ ಗುಂಡನಿಗೆ ತನ್ನ ಬಳಿ ಅಮೂಲ್ಯವಾದ ಕಲ್ಲುಗಳು ಇರುವುದು ನೆನಪಾಗುತ್ತದೆ. 

ಹಿಂದೆಮುಂದೆ ಯೋಚಿಸದೆ ಅವುಗಳನ್ನೇ ಬೇಡನಿಗೆ ನೀಡಿ ಜಿಂಕೆಯನ್ನು ಬಿಡಿಸಿಕೊಳ್ಳುತ್ತಾನೆ. ತನ್ನ ಕನಸು, ಭವಿಷ್ಯವನ್ನು ಒತ್ತೆಯಿಟ್ಟು ತನ್ನನ್ನು ಪಾರು ಮಾಡಿದ ಗುಂಡನನ್ನು ಜಿಂಕೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತದೆ. ಗುಂಡ ತನ್ನ ಬದುಕನ್ನು ರೂಪಿಸಿಕೊಳ್ಳುವ ಏಕೈಕ ಅವಕಾಶವನ್ನು ಕೈಚೆಲ್ಲಿಕೊಂಡದ್ದಕ್ಕಿಂತ ಹೆಚ್ಚಾಗಿ, ತನ್ನಿಂದ ಒಂದು ಜೀವ ಉಳಿಯಿತಲ್ಲಾ ಎಂದು ಸಂತಸಪಡುತ್ತಾನೆ. 

Advertisement

ಜಿಂಕೆ ತನ್ನ ಜೀವವನ್ನು ಕಾಪಾಡಿದ್ದಕ್ಕೆ ಕೃತಜ್ಞತೆಯ ರೂಪದಲ್ಲಿ ತನ್ನ ಗೂಡಿನಲ್ಲಿದ್ದ ಒಂದು ಥೈಲಿಯನ್ನು ನೀಡಿತು. ಆ ಥೈಲಿಯಲ್ಲಿ ನದಿದಂಡೆಯಲ್ಲಿ ಸಿಕ್ಕಂಥದ್ದೇ ಹದಿನೈದಿಪ್ಪತ್ತು ಕಲ್ಲುಗಳಿದ್ದವು! ಗುಂಡ ಅದನ್ನು ತನ್ನ ಜತೆಯಲ್ಲಿ ತೆಗೆದುಕೊಂಡು ಹೋಗಿ, ಮುಂದಿನ ದಿನವನ್ನು ಸುಖವಾಗಿ ಆನಂದದಿಂದ ಕಳೆಯುತ್ತಾನೆ.

– ಪುರುಷೋತ್ತಮ್‌ ವೆಂಕಿ

Advertisement

Udayavani is now on Telegram. Click here to join our channel and stay updated with the latest news.

Next