ಅಹಮದಾಬಾದ್: ಪ್ರತಿ ವರ್ಷ ತನ್ನ ಉದ್ಯೋಗಿಗಳಿಗೆ ನೀಡುವ ಭಾರಿ ಬೋನಸ್ ಮತ್ತು ಅದ್ದೂರಿ ಉಡುಗೊರೆಗಳಿಗಾಗಿ ಸುದ್ದಿಯಾಗಿದ್ದ ಸೂರತ್‌ನ ವಜ್ರದ ವ್ಯಾಪಾರಿ ಇದೀಗ ವೈದ್ಯಕೀಯ ಮತ್ತು ಇತರ ತುರ್ತು ಉಪಯೋಗಕ್ಕಾಗಿ 50 ಕೋಟಿ ರೂಪಾಯಿ ಮೌಲ್ಯದ ಹೊಚ್ಚಹೊಸ ಹೆಲಿಕ್ಯಾಪ್ಟರ್ ಅನ್ನು ಸೂರತ್ ಗೆ ಕೊಡುಗೆಯಾಗಿ ನೀಡಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ನಂತರ ಅವರ ಕುಟುಂಬದಿಂದ ಸಜೀವ್ ಧೋಲಾಕಿಯಾ ಅವರಿಗೆ ಆಶ್ಚರ್ಯಕರ ಉಡುಗೊರೆ ಹೆಲಿಕಾಪ್ಟರ್ ನೀಡಲಾಗಿತ್ತು. ಆದರೆ, ಅವರು ಅವರು ಉಡುಗೊರೆಯನ್ನು ಸ್ವಯಂ ಬಳಕೆಗೆ ಬದಲಾಗಿ ಸಾಮಾಜಿಕ ಉದ್ದೇಶಕ್ಕಾಗಿ ದಾನ ಮಾಡಲು ನಿರ್ಧರಿಸಿ ಆದರ್ಶ ಮೆರೆದಿದ್ದಾರೆ.
ಸೂರತ್ ಗುಜರಾತ್‌ನ ಆರ್ಥಿಕ ರಾಜಧಾನಿಯಾಗಿದೆ ಆದರೆ ತನ್ನದೇ ಆದ ಹೆಲಿಕಾಪ್ಟರ್ ಹೊಂದಿಲ್ಲ. ಹೀಗಾಗಿ, ನಾನು ಈ ಉಡುಗೊರೆಯನ್ನು ಸೂರತ್‌ನ ಜನರಿಗೆ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ ಎಂದು ಧೋಲಾಕಿಯಾ ಹೇಳಿದ್ದಾರೆ.
ಶಾಲೆ ಬಿಟ್ಟ ಧೋಲಾಕಿಯಾ ಅವರು 1977 ರಲ್ಲಿ ಸೂರತ್‌ಗೆ ರಾಜ್ಯ ಸಾರಿಗೆ ಬಸ್‌ನಲ್ಲಿ ಟಿಕೆಟ್ ದರವಾಗಿ ಕೇವಲ 12.5 ರೂಪಾಯಿಯೊಂದಿಗೆ ಬಂದು ತಮ್ಮ ಚಿಕ್ಕಪ್ಪನ ವಜ್ರದ ವ್ಯಾಪಾರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. 1992 ರಲ್ಲಿ, ಅವರು ತಮ್ಮ ಕಂಪನಿಯ ಅಡಿಪಾಯವನ್ನು ಹಾಕಿ ಈಗ ವಜ್ರ ಉದ್ಯಮ ಮತ್ತು ಸೂರತ್ ನಗರದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಸೌರಾಷ್ಟ್ರದ ಬಂಜರು ಸರ್ಕಾರಿ ಭೂಮಿಯಲ್ಲಿ ಧೋಲಾಕಿಯಾ ಇದುವರೆಗೆ ಸುಮಾರು 75 ಕೊಳಗಳನ್ನು ನಿರ್ಮಿಸಿದ್ದಾರೆ.
ಕಂಪನಿಯಲ್ಲಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಧೋಲಾಕಿಯಾ ಅವರು ಮೂರು ಸಿಬ್ಬಂದಿಗೆ ಮರ್ಸಿಡಿಸ್ -ಬೆಂಜ್ ಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂಬುದನ್ನು ಸ್ಮರಿಸಬಹುದು. ಪ್ರತಿ ವರ್ಷ ಹಬ್ಬದ ಸಂದರ್ಭಗಳಲ್ಲಿ ಅವರು ತಮ್ಮ ಉದ್ಯೋಗಿಗಳಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾರೆ, ಇದರಲ್ಲಿ ಲಾಯಲ್ಟಿ ಬೋನಸ್ ಕಾರ್ಯಕ್ರಮದ ಭಾಗವಾಗಿ ಕಾರುಗಳು, ಫ್ಲಾಟ್‌ಗಳು, ಆಭರಣ ಸೆಟ್‌ಗಳು ಇತ್ಯಾದಿಗಳು ಸೇರಿವೆ.