ಬ್ರುಸೆಲ್ಸ್ (ಬೆಲ್ಜಿಯಂ): ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ ನ ಫೈನಲ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದೆ ರಜತ ಪದಕ ಗೆದ್ದುಕೊಂಡಿದ್ದ ಭಾರತದ ತಾರಾ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ (Neeraj Chopra) ಬ್ರುಸೆಲ್ಸ್ ನಲ್ಲಿ ಶನಿವಾರ (ಸೆ.14) ನಡೆದ ಡೈಮಂಡ್ ಲೀಗ್ ಫೈನಲ್ (Diamond League Final) ನಲ್ಲಿಯೂ ಎರಡನೇ ಸ್ಥಾನ ಪಡೆದಿದ್ದಾರೆ. ಮೊದಲ ಮತ್ತು ಎರಡನೇ ಸ್ಥಾನಿಗಳ ನಡುವಿನ ಅಂತರ ಕೇವಲ ಒಂದು ಸೆಂ.ಮೀಟರ್!
ಸತತ ಎರಡನೇ ವರ್ಷ ನೀರಜ್ ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನೀರಜ್ ಅವರು 87.86 ಮೀ. ದೂರ ಜಾವೆಲಿನ್ ಎಸೆದರು. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ ಅವರು 87.87 ಮೀ. ಜಾವೆಲಿನ್ ಎಸೆದು ಡೈಮಂಡ್ ಲೀಗ್ ಕಿರೀಟ ಗೆದ್ದರು.
86.82 ಮೀ.ನೊಂದಿಗೆ ಎಸೆತ ಆರಂಭಿಸಿದ ನೀರಜ್, ಮೂರನೇ ಎಸೆತದಲ್ಲಿ 87.86 ಮೀ ದೂರ ಸಾಧಿಸಿದರು. ಜರ್ಮನ್ ಥ್ರೋವರ್ ಜೂಲಿಯನ್ ವೆಬರ್ (85.97) ಮೂರನೇ ಸ್ಥಾನ ಪಡೆದರು.
ಫೈನಲ್ ನಲ್ಲಿ ನೀರಜ್ ತನ್ನ ಎಂದಿನ ಪ್ರದರ್ಶನ ನೀಡಲು ವಿಫಲಾರದರು. ಮೊದಲ ಪ್ರಯತ್ನದಲ್ಲಿ 86.82 ಮೀ ದೂರ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 83.49 ಮೀಟರ್ ಅಷ್ಟೇ ಎಸೆದರು. ಮೂರನೇ ಎಸೆತದಲ್ಲಿ 87.86 ಮೀಟರ್ ಎಸೆದರು. ನಾಲ್ಕನೇ ಎಸೆತದಲ್ಲಿ 82.04 ಮೀಟರ್ ಎಸೆದ ಅವರು ಕೊನೆಯ ಪ್ರಯತ್ನದಲ್ಲಿ 83.30 ಮೀಟರ್ ದೂರವಷ್ಟೇ ಜಾವೆಲಿನ್ ಎಸೆದರು.
ನೀರಜ್ ಚೋಪ್ರಾ ಅವರು 2022ರಲ್ಲಿ ಡೈಮಂಡಲ್ ಲೀಗ್ ಗೆದ್ದುಕೊಂಡಿದ್ದರು. ಇತ್ತೀಚೆಗೆ ಮುಗಿದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿಯೂ ನೀರಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.