ಮಂಗಳೂರು: ಡಯಾಲಿಸಿಸ್ ಮಾಡಲು ಆಗಮಿಸುವ ರೋಗಿಗಳಿಗೆ ಮಂಗಳೂರಿನ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ)ಯಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕೆಲವು ರೋಗಿಗಳು ಆರೋಪಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆ ಅರಿತ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಲವು ದಿನಗಳಿಂದ ಇಲ್ಲಿಗೆ ಬರುವ ರೋಗಿಗಳಿಗೆ “ಸರ್ವರ್ ದೋಷವಿದೆ’ ಎಂದು ಹೇಳಿ, ದೂರದ ಊರುಗಳಿಂದ ಬರುವ ರೋಗಿಗಳನ್ನು ಸತಾಯಿಸಲಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಸರ್ವರ್ ಸಮಸ್ಯೆ ಇದ್ದರೆ ಇತರ ಆಸ್ಪತ್ರೆಗಳಿಗೆ ನೀಡುವ ಪತ್ರಗಳನ್ನು ಅಂತರ್ಜಾಲದಲ್ಲಿ ಆಗದಿದ್ದರೆ ಕೈ ಬರಹ ಮೂಲಕ ನೀಡಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ನೀಡಬಾರದು ಎಂದು ಸಂಸದರು ಈ ವೇಳೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಓರ್ವ ರೋಗಿಯ ಸಂಬಂಧಿಕರು ಹಲವಾರು ವರ್ಷಗಳಿಂದ ಡಯಾಬಿಟಿಸ್ ರೋಗಿಗಳಿಗೆ ಡಯಾಲಿಸಿಸ್ ಮಾಡಲು ಒಂದು ತಿಂಗಳಿಗೆ 12 ಟೋಕನ್ ನೀಡಲಾಗುತ್ತಿತ್ತು. ಆದರೆ ಅದರ ಪ್ರಮಾಣವನ್ನೂ ಇಳಿಸಲಾಗಿದೆ. ಅದು ಕೂಡ ಸರ್ವರ್ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಸಿಗದೆ ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಡಯಾಲಿಸಿಸ್ ಮಾಡಿಕೊಳ್ಳುವಂತಾಗಿದೆ.
ಅಲ್ಲದೆ ದೂರದ ಊರಿನಿಂದ ಬೆಳಗ್ಗೆ 8 ಗಂಟೆಗೆ ಬಂದ ನಮಗೆ ಸಂಜೆ 5ರ ತನಕವೂ ಸರ್ವರ್ ಸಮಸ್ಯೆ, ಸರಿ ಆಗಿಲ್ಲ ಎನ್ನುತ್ತಾರೆ. ನಮಗೆ ಇಷ್ಟು ದೂರ ನಡೆಯಲು ಸಹ ಸಾಧ್ಯವಿಲ್ಲ. ಅಲ್ಲದೆ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಮಾತ್ರ ಟೋಕನ್ ನೀಡಲಾಗುವುದು ಎನ್ನುವ ನಿಯಮ ಜಾರಿ ಮಾಡಿದ್ದಾರೆ. ಇದರಿಂದ ರೋಗಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.