Advertisement

Health: ಡಯಾಲಿಸಿಸ್‌ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ- ಕಿಡ್ನಿ ವೈಫ‌ಲ್ಯಕ್ಕೊಳಗಾದವರ ಫ‌‌ಜೀತಿ

08:06 PM Oct 01, 2023 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ 169 ಡಯಾಲಿಸಿಸ್‌ ಯೂನಿಟ್‌ಗಳಲ್ಲಿ ನಿರ್ವಹಣೆ ಕೊರತೆಯಿಂದ ಸೂಕ್ತ ಸೇವೆ ಸಿಗದೇ ಕಿಡ್ನಿ ವೈಫ‌ಲ್ಯಕ್ಕೊಳಗಾದ ಸಾವಿರಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್‌ನ ಪ್ರತಿ ಯೂನಿಟ್‌ಗಳಲ್ಲಿ ಓರ್ವ ನೆಫ್ರೋಲಾಜಿಸ್ಟ್‌ , 1 ಎಂಬಿಬಿಎಸ್‌ ವೈದ್ಯರು, 3 ಬೆಡ್‌ಗೆ ಒಬ್ಬ ಡಯಾಲಿಸಿಸ್‌ ಟೆಕ್ನಿಷಿಯನ್‌ ಇರಬೇಕೆಂಬ ನಿಯಮವಿದೆ. ಆದರೆ, ಸದ್ಯ 120 ಡಯಾಲಿಸಿಸ್‌ ಯೂನಿಟ್‌ಗಳಲ್ಲಿ ನೆಪ್ರೋಲಾಜಿಸ್ಟ್‌ ವೈದ್ಯರೇ ಇಲ್ಲ. ತಜ್ಞ ವೈದ್ಯರು ಮಾಡಬೇಕಿರುವ ಡಯಾಲಿಸಿಸ್‌ ಪ್ರಕ್ರಿಯೆಗಳನ್ನು ಟೆಕ್ನಿಷಿಯನ್‌ಗಳ ಕೈಯಲ್ಲೇ ಮಾಡಿಸಲಾಗುತ್ತಿದೆ. ಇತ್ತ ಡಯಾಲಿಸಿಸ್‌ ಯೂನಿಟ್‌ಗಳ ನಿರ್ವಹಣೆ ಕೊರತೆಯಿಂದ ಕಿಡ್ನಿ ವೈಫ‌ಲ್ಯಕ್ಕೊಳಗಾದ 10 ಸಾವಿರಕ್ಕೂ ಅಧಿಕ ಮಂದಿ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.

ಡಯಾಲಿಸಿಸ್‌ ಯೂನಿಟ್‌ನ ಕೊರತೆಗಳೇನು ?: ಬಹುತೇಕ ಯೂನಿಟ್‌ಗಳಲ್ಲಿ ಅರ್ಧದಷ್ಟು ಎಂಬಿಬಿಎಸ್‌ ವೈದ್ಯರಿಲ್ಲ. ಇತ್ತ ಟೆಕ್ನಿಷಿಯನ್‌ಗಳಿಗೆ 2 ವರ್ಷಗಳಿಂದ ಗುತ್ತಿಗೆ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ಕೆಲಸಕ್ಕೆ ಗೈರಾಗಿ ಪ್ರತಿಭಟನೆಗೆ ಮುಂದಾಗುತ್ತಲೇ ಇದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್‌ ವ್ಯವಸ್ಥೆ ಇದ್ದರೂ ನಿರ್ವಹಣಾ ವೈಫ‌ಲ್ಯದಿಂದ ನೊಂದು ಬಡ ರೋಗಿಗಳು ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಕಿಡ್ನಿ ವೈಫ‌ಲ್ಯಕ್ಕೆ ವಾರ್ಷಿಕವಾಗಿ 50 ಸಾವಿರ ಮಂದಿ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.

ಸಿಂಗಲ್‌ ಯೂಸರ್‌ ಡಯಾಲಿಸಿಸ್‌ ಲಭ್ಯ
ಇದುವರೆಗೆ ಖಾಸಗಿಯಲ್ಲಿ ಮಾತ್ರ ದೊರಕುತ್ತಿದ್ದ ಸಿಂಗಲ್‌ ಯೂಸರ್‌ ಡಯಾಲಿಸಿಸ್‌ ವ್ಯವಸ್ಥೆಯು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಿರಲಿದೆ. ಇದುವರೆಗೆ ಒಬ್ಬ ವ್ಯಕ್ತಿಗೆ ಡಯಾಲಿಸಿಸ್‌ ಮಾಡಿ ಅದನ್ನು ಶುಚಿಗೊಳಿಸಿ ಬಾಕ್ಸ್‌ನಲ್ಲಿ ಇಟ್ಟು ಮತ್ತೂಮ್ಮೆ ಆತ ಬಂದಾಗ ಅದನ್ನೇ ಮರು ಬಳಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ಸಿಂಗಲ್‌ ಯೂಸರ್‌ ಡಯಾಲಿಸಿಸ್‌ ಅನ್ನು ಬಳಕೆ ಮಾಡಿ ಎಸೆಯಲಾಗುತ್ತದೆ. ಒಂದು ಡಯಾಲಿಸಿಸ್‌ಗೆ ಅಂದಾಜು 1,500 ರೂ. ತಗುಲಲಿದೆ.

ಸರ್ಕಾರ ನೀಡುತ್ತಿರುವ ಉಚಿತ ಡಯಾಲಿಸಿಸ್‌ನಿಂದ ಸಾವಿರಾರು ಬಡ ಜನರಿಗೆ ಅನುಕೂಲ ಆಗಿದೆ. ಸೂಕ್ತ ಅರ್ಹತೆ ಹೊಂದಿರುವ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತೇವೆ.
| ಡಾ. ನವೀನ್‌ ಭಟ್‌, ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಇಲಾಖೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next