ಅರಸೀಕೆರೆ: ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ತಮ್ಮ ನಡುವೆ ನಡೆದಿರುವ ಸಂಭಾಷಣೆಯನ್ನು ಯಾವುದೇ ರೀತಿಯಲ್ಲಿ ಎಡಿಟ್ ಮಾಡಿಲ್ಲ, ಈ ಬಗ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ತಾವು ಪ್ರಮಾಣ ಮಾಡಲು ಸಿದ್ಧ. ಆದರೆ ಶಾಸಕರು ಆ ರೀತಿ ತಾವು ಮಾತನಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಸವಾಲು ಹಾಕಿದರು.
ಸುದ್ದಿಗಾರರ ಜತೆ ಮಾತನಾಡಿ, ಗಂಡಸಿ ಕ್ಷೇತ್ರದಲ್ಲಿ 18 ಮತಗಳಿಂದ ಸೋತ ಸಂದರ್ಭದಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ಟಿಕೇಟ್ ನೀಡಿ ಕೆ.ಎಂ.ಶಿವಲಿಂಗೇಗೌಡ ಅವರನ್ನ ಗೆಲ್ಲಿಸಿದ್ದು, ಯಾರು? ಸತತ ಮೂರು ಬಾರಿ ಆಯ್ಕೆಯಾಗಲು ದೇವೇಗೌಡರು, ಅವರ ಕುಟುಂಬದ ಬೆಂಬಲದಿಂದಲೇ ಎನ್ನುವುದನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರ ಮುಖ ನೋಡಿ ಜನ ಓಟು ಕೊಡುವುದಿಲ್ಲ ಎಂದ ಶಿವಲಿಂಗೇಗೌಡರು ಈಗ ಕಾಂಗ್ರೆಸ್ ಪಕ್ಷದ ಬಾಗಿಲಿಗೆ ಹೋಗಿ ನಿಂತಿದ್ದಾರೆ. ನಾವು ಏನೇ ತಪ್ಪು ಮಾಡಿದ್ದರೂ ಅದನ್ನು ಬಹಿರಂಗ ಪಡಿಸಲಿ, ಅದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ರೇವಣ್ಣ ಸವಾಲು ಹಾಕಿದರು.