Advertisement
ಯಾವುದೋ ಕೆಟ್ಟ ಘಳಿಗೆಯಲ್ಲಿ ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದ ಸಾವಿರಾರು ಮಂದಿ ಕ್ಷಣ ಕಾಲ ತಡೆದು “ಆರೋಗ್ಯವಾಣಿ’ಗೆ ಕರೆ ಮಾಡಿ, ಆಪ್ತ ಸಮಾಲೋಚನೆ ಪಡೆದು, ಸಾವಿನ ಆಲೋಚನೆಯಿಂದ ಹೊರಬಂದು ಸವಾಲು ಎದುರಿಸುವ ದಿಟ್ಟತನ ಪ್ರದರ್ಶಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಆರೋಗ್ಯವಾಣಿ ಸಿಬ್ಬಂದಿ 1,174 ಮಂದಿಗೆ ಯಶಸ್ವಿ ಆಪ್ತ ಸಮಾಲೋಚನೆ ನಡೆಸುವ ಮೂಲಕ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
Related Articles
Advertisement
10 ನಿಮಿಷದಿಂದ 3 ಗಂಟೆ ಮಾತು: ಆರೋಗ್ಯವಾಣಿಯಲ್ಲಿ ಕನಿಷ್ಠ 10 ನಿಮಿಷದಿಂದ ಗರಿಷ್ಠ 3 ಗಂಟೆವರೆಗೂ ಸಮಾಲೋಚನೆ ನಡೆಸಿದ ದಾಖಲೆಗಳಿವೆ. ಒಮ್ಮೆ ಸಮಾಲೋಚನೆ ನಡೆಸಿದ ವ್ಯಕ್ತಿ ಮೇಲೆ ಕನಿಷ್ಠ ಮೂರು ತಿಂಗಳವರೆಗೂ ನಿಗಾ ವಹಿಸಿ, ಆಗಾಗ ಕರೆ ಮಾಡಿ ಮಾತನಾಡಿಸುತ್ತೇವೆ ಎನ್ನುತ್ತಾರೆ ಆರೋಗ್ಯವಾಣಿ ಅಧಿಕಾರಿಗಳು.
“ಕರೆ ಮಾಡಿದ ಕೆಲವರು ನಾನೀಗ ರೈಲು ಹಳಿ ಹತ್ತಿರವಿದ್ದೇನೆ, ಕೆರೆ, ನದಿ ದಡದಲ್ಲಿ, ಸೇತುವೆ ಮೇಲೆ ನಿಂತಿದ್ದೇನೆ, ಸಾಯಲು ನಿರ್ಧರಿಸಿದ್ದೇನೆ ಎಂದು ಹೇಳುತ್ತಾರೆ. ಆ ವೇಳೆ ಅವರೊಟ್ಟಿಗೆ ಮಾತನಾಡುತ್ತಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸ್ಥಳಕ್ಕೆ ಕಳುಹಿಸಿದ ಉದಾಹರಣೆಗಳಿವೆ’ ಎಂದು ಆರೋಗ್ಯ ವಾಣಿ ತಂಡದ ವ್ಯವಸ್ಥಾಪಕ ರಾಘವೇಂದ್ರ ಅಡೂರ್ ತಿಳಿಸಿದರು.
ಇಂದು “ವಿಶ್ವ ಆತ್ಮಹತ್ಯೆ ತಡೆ ದಿನ’: ವಿಶ್ವದಲ್ಲಿ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎನ್‌ಸಿಆರ್‌ಬಿ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 10ರಂದು “ವಿಶ್ವ ಆತ್ಮಹತ್ಯೆ ತಡೆ ದಿನ’ ಆಚರಿಸುವ ಆರೋಗ್ಯ ಇಲಾಖೆ, ವಿವಿಧ ಜಾಗೃತಿ ಕಾರ್ಯಕ್ರಮ ನಡೆಸುತ್ತದೆ. ಸಾರ್ವಜನಿಕರು ರಾಜ್ಯದ ಯಾವುದೇ ಭಾಗದಿಂದ ಯಾವುದೇ ಶುಲ್ಕವಿಲ್ಲದೇ ತಮ್ಮ ದೂರವಾಣಿಯಿಂದ “104’ಕ್ಕೆ ಕರೆಮಾಡಿ ಆರೋಗ್ಯ ಸಂಬಂಧಿ ಮಾಹಿತಿ ಜತೆಗೆ “ಉಚಿತ ಆಪ್ತ ಸಮಾಲೋಚನೆ’ ಪಡೆಯಬಹುದು. 24*7 ಸೇವೆ ಲಭ್ಯವಿರುತ್ತದೆ.
ಮೂರು ವರ್ಷಗಳಿಂದ ಆತ್ಮಹತ್ಯೆ ಪ್ರವೃತ್ತಿ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಯುವಜನರೇ ಹೆಚ್ಚು ಕರೆ ಮಾಡುತ್ತಿದ್ದು, ಆಪ್ತ ಸಮಾಲೋಚನೆ ಮೂಲಕ ಅವರನ್ನು ಆ ಮನಸ್ಥಿತಿಯಿಂದ ಹೊರ ತರುತ್ತಿದ್ದೇವೆ. ಆಪ್ತ ಸಮಾಲೋಚನೆ ಮೂಲಕ ಸಾವಿರಾರು ಜೀವ ಉಳಿಸಿದ ಹೆಮ್ಮೆ ಆರೋಗ್ಯವಾಣಿ ತಂಡಕ್ಕಿದೆ.-ರಾಘವೇಂದ್ರ ಅಡೂರ್, ವ್ಯವಸ್ಥಾಪಕರು ಆರೋಗ್ಯವಾಣಿ * ಜಯಪ್ರಕಾಶ್ ಬಿರಾದಾರ್