Advertisement

ಎಬಿವಿಪಿ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಬೆದರಿಕೆ

03:50 AM Feb 28, 2017 | Team Udayavani |

ನವದೆಹಲಿ: ಕಳೆದ ವಾರ ದೆಹಲಿ ರಾಮ್ಜಾಸ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಬಣಗಳ ಸಂಘರ್ಷದ ಬಳಿಕ ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದ ಕಾರ್ಗಿಲ್‌ ಹುತಾತ್ಮ ಯೋಧನ ಪುತ್ರಿ, “ತನ್ನ ಮೇಲೆ ಅತ್ಯಾಚಾರದ ಬೆದರಿಕೆಗಳು ಬಂದಿವೆ,’ ಎಂದು ಆರೋಪಿಸಿದ್ದಾಳೆ.

Advertisement

24 ವರ್ಷದ ಗುರ್ಮೆಹರ್‌ ಕೌರ್‌, “ನಾನು ದೆಹಲಿ ವಿವಿ ವಿದ್ಯಾರ್ಥಿನಿ. ಎಬಿವಿಪಿ ಎಂದರೆ ನನಗೇನೂ ಭಯವಿಲ್ಲ. ಎಲ್ಲ ವಿದ್ಯಾರ್ಥಿಗಳೂ ನನ್ನ ಜತೆಗಿದ್ದಾರೆ,’ ಎಂಬ ಪೋಸ್ಟರ್‌ವೊಂದನ್ನು ಹಿಡಿದು ತೆಗೆಸಿಕೊಂಡಿದ್ದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಳು. ಈ ಫೋಟೋಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಆಕೆಯನ್ನು ಟೀಕಿಸಿ, ಅವಹೇಳನ ಮಾಡಿದ್ದರು. ಈ ಕುರಿತು ಸುದ್ದಿವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ್ದ ಕೌರ್‌, “ಜನ ನನ್ನನ್ನು ದೇಶವಿರೋಧಿ ಎಂದು ಕರೆಯುತ್ತಿದ್ದಾರೆ. ಕೆಲವರಂತೂ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ರಾಹುಲ್‌ ಎಂಬ ಹೆಸರಿನ ಹುಡುಗ ನನ್ನನ್ನು ಹೇಗೆ ರೇಪ್‌ ಮಾಡುತ್ತಾನೆ ಎಂಬುದನ್ನು ವಿಸ್ತೃತವಾಗಿ ಬರೆದಿದ್ದಾನೆ. ರಾಷ್ಟ್ರೀಯತೆಯ ಹೆಸರಲ್ಲಿ ಒಬ್ಬ ಯುವತಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗುತ್ತಿದೆ. ಇದು ಸರಿಯೇ,’ ಎಂದು ಪ್ರಶ್ನಿಸಿದ್ದಳು. ಸೋಮವಾರ ಆಕೆ ದೆಹಲಿ ಮಹಿಳಾ ಆಯೋಗಕ್ಕೆ ಈ ಕುರಿತು ದೂರು ನೀಡಿದ್ದು, ಆಕೆಗೆ ಭದ್ರತೆ ನೀಡಲಾಗಿದೆ.

ರಾಜಕೀಯ ಬಣ್ಣ: ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ, ಸಿಪಿಎಂ ಸೇರಿದಂತೆ ಪ್ರತಿಪಕ್ಷಗಳು ಯುವತಿಗೆ ಬೆದರಿಕೆ ಹಾಕಿದ್ದನ್ನು ಖಂಡಿಸಿವೆ. ಜತೆಗೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ಇನ್ನೊಂದೆಡೆ, ಸೋಮವಾರ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು ಟ್ವೀಟ್‌ ಮಾಡಿ, “ಈ ಯುವತಿ ಮನಸ್ಸನ್ನು ಮಲಿನಗೊಳಿಸು ತ್ತಿರುವುದು ಯಾರು’ ಎಂದು ಪ್ರಶ್ನಿಸಿದ್ದಾರೆ. ಇದನ್ನು ಖಂಡಿಸಿರುವ ಕಾಂಗ್ರೆಸ್‌, “ಈಗ ಸತ್ಯ ಹೇಳುವುದು ಕೂಡ ಮಾಲಿನ್ಯ. ಹುತಾತ್ಮನ ಪುತ್ರಿಗೆ ರೇಪ್‌ ಮಾಡುವ ಬೆದರಿಕೆ ಹಾಕುವುದು ಬಿಜೆಪಿ ಮತ್ತು ಆರೆಸ್ಸೆಸ್‌ನ ರಾಷ್ಟ್ರೀಯವಾದವೇ’ ಎಂದು ಪ್ರಶ್ನಿಸಿದೆ.

ಇದೇ ವೇಳೆ,  ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು, ಗುರ್ಮೆಹರ್‌ ಕುರಿತ ಅವಹೇಳನಕಾರಿ ಟ್ವೀಟ್‌ ಅನ್ನು ರೀ ಟ್ವೀಟ್‌ ಮಾಡಿದ್ದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಸೆಹ್ವಾಗ್‌ ವಿರುದ್ಧವೂ ಕಿಡಿ
ಗುರ್ಮೆಹರ್‌ ಅನ್ನು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, ನಟ ರಣದೀಪ್‌ ಹೂಡಾ “ರಾಜಕೀಯ ಕೈಗೊಂಬೆ’ ಎಂದು ಕರೆದಿದ್ದು, ಇದಕ್ಕೂ ಆಕೆ ಪ್ರತಿಕ್ರಿಯಿಸಿದ್ದಾಳೆ. “ದ್ವೇಷದ ಮಾತುಗಳಿಗೆ ಪ್ರೇರಣೆ ಕೊಟ್ಟಿರುವ ನಿಮಗೆ ತುಂಬಾ ಥ್ಯಾಂಕ್ಸ್‌. ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಿಂಸೆಯನ್ನು ನಾನು ಬೆಂಬಲಿಸುವುದಿಲ್ಲ. ನಾನು ಹುತಾತ್ಮ ಯೋಧನ ಪುತ್ರಿ ಎನ್ನುವುದು ನಿಮಗೆ ಅಷ್ಟೊಂದು ಕಿರಿಕಿರಿ ಉಂಟುಮಾಡುತ್ತಿದ್ದರೆ, ದಯವಿಟ್ಟು ನನ್ನನ್ನು ಹಾಗೆ ಕರೆಯಬೇಡಿ. ನೀವು ನನ್ನನ್ನು ಗುರ್ಮೆಹರ್‌ ಎಂದು ಕರೆದರೆ ಸಾಕು,’ ಎಂಬ ತೀಕ್ಷ್ಣ ಪ್ರತಿಕ್ರಿಯೆಯನ್ನು ಆಕೆ ನೀಡಿದ್ದಾಳೆ.

Advertisement

ಈ ಹುಡುಗಿಯ ಮನಸ್ಸನ್ನು ಮಲಿನಗೊಳಿಸಿದವರ್ಯಾರು? ಭಾರತ ಯಾವತ್ತೂ ಯಾರನ್ನೂ ಆಕ್ರಮಿಸಿಲ್ಲ. ಆದರೆ, ದುರ್ಬಲ ಭಾರತವು ಯಾವತ್ತೂ ಆಕ್ರಮಣಕ್ಕೊಳಗಾಗುತ್ತಲೇ ಬಂದಿದೆ.

ಕಿರಣ್‌ ರಿಜಿಜು, ಕೇಂದ್ರ ಸಚಿವ

ನಿರಂಕುಶ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ನಾವು ವಿದ್ಯಾರ್ಥಿ­ಗಳ ಜತೆಗಿರುತ್ತೇವೆ. ಆಕ್ರೋಶ, ಅಸಹಿಷ್ಣುತೆ ಮತ್ತು ನಿರ್ಲಕ್ಷ್ಯದ ವಿರುದ್ಧದ ಪ್ರತಿ ಧ್ವನಿಯಲ್ಲೂ ಒಬ್ಬ ಗುರ್ಮೆಹರ್‌ ಕೌರ್‌ ಇರುತ್ತಾಳೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ನೇತಾರ

Advertisement

Udayavani is now on Telegram. Click here to join our channel and stay updated with the latest news.

Next