Advertisement

ರಸ್ತೆ ಬದಿ ತಿಂಡಿ ಗಾಡಿಗಳ ಮೇಲೆ ಡಿಎಚ್‌ಒ, ಆಹಾರ ಸುರಕ್ಷತಾಧಿಕಾರಿಗಳ ದಾಳಿ

08:20 PM Feb 18, 2020 | Lakshmi GovindaRaj |

ಹಾಸನ: ರಸ್ತೆ ಬದಿ ತಿಂಡಿ ಗಾಡಿಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಆರೋಗ್ಯ ಸುರಕ್ಷತೆಯ ಅಧಿಕಾರಿಗಳು ಮಂಗಳವಾರ ದಿಢೀರ್‌ ದಾಳಿ ನಡೆಸಿ ರಸ್ತೆ ಬದಿ ಗಾಡಿಗಳಲ್ಲಿ ಆಹಾರ ಪದಾರ್ಥದ ಶುಚಿತ್ವ ಹಾಗೂ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ವ್ಯಾಪಾರಿಗಳಿಗೆ ತರಾಟೆ: “ರಸ್ತೆ ಬದಿ ಗಾಡಿಗಳಲ್ಲಿನ ತಿಂಡಿ, ತಿನಿಸು ಎಷ್ಟು ಸುರಕ್ಷಿತ?’ ಎಂಬ ಬಗ್ಗೆ ಉದಯವಾಣಿಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್‌, ಆಹಾರ ಸುರಕ್ಷತಾ ಅಧಿಕಾರಿಗಳಾದ ಅಡ್ಡಬಸವೇಗೌಡ, ಶ್ರೀಕೃಷ್ಣ, ಶಿವರಾಂ,

ಅಂಕಿತ ಪ್ರಭಾರ ಅಧಿಕಾರಿ ಡಾ. ಹಿರಣ್ಣಯ್ಯ ಹಾಗೂ ಸುಕನ್ಯಾ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ಮಹಾರಾಜ ಪಾರ್ಕ್‌ ಪಕ್ಕ ಸಹ್ಯಾದ್ರಿ ಚಿತ್ರಮಂದಿರದ ಎದುರು, ಜಿಲ್ಲಾ ಕಸಾಪ ಭವನದ ಎದರು ರಸ್ತೆ ಬದಿಯ ಗಾಡಿಗಳ ಮೇಲೆ ದಾಳಿ ನಡೆಸಿ ಆಹಾರದ ಗುಣಮಟ್ಟ ಮತ್ತು ಶುಚಿತ್ವ ಕಾಪಾಡದ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.

ಸ್ವಚ್ಛತೆ ಪರಿಶೀಲನೆ: ಆಹಾರ ಪದಾರ್ಥಗಳನ್ನು ವ್ಯಾಪಾರ ಗಾಡಿಗಳ ಸುತ್ತಮುತ್ತ ಸ್ವಚ್ಛವಾಗಿದೆಯೇ, ಅಲ್ಲಿ ಕೆಲಸ ಮಾಡುವ ಕಾರ್ಮಿಕರ ವೈಯಕ್ತಿಕ ಶುಚಿತ್ವ, ಗಾಡಿಗಳಲ್ಲಿನ ಸ್ವಚ್ಛತೆ, ಆಹಾರ ಪದಾರ್ಥಗಳ ಮೇಲೆ ದೂಳು, ನೊಣಗಳ ಹಾವಳಿ ತಡೆಯಲು ಕೈಗೊಂಡಿರುವ ಕ್ರಮಗಳು, ಕುಡಿಯುವ ನೀರಿನ ವ್ಯವಸ್ಥೆ, ತಿಂಡಿ ಕೊಡುವ ತಟ್ಟೆ, ಪ್ಲೇಟುಗಳನ್ನು ಶುಚಿಯಾಗಿ ತೊಳೆಯಲಾಗುತ್ತಿದೆಯಾ ಎಂದು ಅಧಿಕಾರಿಗಳ ತಂಡವು ಪರೀಕ್ಷಿಸಿತು.

ನೋಂದಣಿ ಅರ್ಜಿ ವಿತರಣೆ: ತಿಂಡಿ ಗಾಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೈದ್ಯಕೀಯ ಪ್ರಮಾಣ ಪತ್ರ ಪಡೆದಿದ್ದಾರಾ?, ಆಹಾರದ ಗುಣಮಟ್ಟ, ನಿರುಪಯುಕ್ತ ಆಹಾರ ಪದಾರ್ಥಗಳನ್ನು ವ್ಯವಸ್ಥಿತ ನಿರ್ವಹಣೆ, ತಿಂಡಿ ಗಾಡಿಗಳಲ್ಲಿ ಕೆಲಸ ಮಾಡುವವರು ತಂಬಾಕು ಅಗಿಯುವುದು, ಧೂಮಪಾನ ಹಾಗೂ ಉಗುಳುವುದು ಮಾಡಬಾರದು. ಗ್ರಾಹಕರೂ ಇಂಥ ನಿಷೇಧಿತ ವಸ್ತುಗಳನ್ನು ಗಾಡಿಗಳ ಬಳಿ ಬಳಸಬಾರದು ಎಂದು ಜಾಗೃತಿ ಮೂಡಿಸಿದರು. ಪ್ರತಿ ತಿಂಡಿ ಗಾಡಿಗಳ ವಿವರವನ್ನು ದಾಖಲಿಸಿಕೊಂಡು, ಗಾಡಿಗಳು ನೋಂದಣಿ ಮಾಡಿಕೊಳ್ಳಬೇಕು ಎಂಬ ಅರ್ಜಿ ನಮೂನೆಯನ್ನೂ ವಿತರಿಸಿ ವಿವರ ತುಂಬಿಸಿಕೊಂಡರು.

Advertisement

ವ್ಯಾಪಾರಿಗಳಿಗೆ ಡಿಎಚ್‌ಒ ಸೂಚನೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ಕುಮಾರ್‌ ಅವರು, ರಸ್ತೆ ಬದಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರು ಕಡ್ಡಾಯವಾಗಿ ಸ್ವಚ್ಛತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಆಹಾರ ಪದಾರ್ಥವನ್ನು ತಯಾರಿಸುವಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಕುರಿತು ಎಲ್ಲಾ ಬಗೆಯ ಆಹಾರ ಪದಾರ್ಥ ಮಾರಾಟಗಾರರಿಗೆ ತಿಳಿವಳಿಕೆ ಪತ್ರಗಳನ್ನು ನೀಡಲಾಗಿದೆ ಮತ್ತು ಅದರ ಅನುಸರಣೆಯಲ್ಲಿರುವ ನ್ಯೂನತೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇಡ್ಲಿ ಬೇಯಿಸುವಾಗ ಪ್ಲಾಸ್ಟಿಕ್‌ ಬಳಕೆ ಮಾಡುವಂತಿಲ್ಲ ಮತ್ತು ಆಹಾರವನ್ನು ಪ್ಲಾಸ್ಟಿಕ್‌ ಅಥವಾ ಪ್ರಿಂಟೆಡ್‌ ಪೇಪರ್‌, ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವಂತಿಲ್ಲ. ಊಟ ನೀಡಲು ಬಳಸುವ ತಟ್ಟೆ ಪ್ಲೇಟುಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು, ಬಳಸುವ ನೀರು ಶುದ್ಧವಾಗಿರಬೇಕು ಎಂದರು.

ಆಹಾರ ತಯಾರಿಸಲು ಗುಣಮಟ್ಟದ ಅಡುಗೆ ಎಣ್ಣೆಯನ್ನಷ್ಟೇ ಬಳಸಬೇಕು ಹಾಗೂ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೂಮ್ಮೆ ಬಳಸಬಾರದು. ಬಳಸಿದ ನಂತರ ನಿರುಪಯುಕ್ತ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ರಸ್ತೆಯಲ್ಲೇ ಬಿಸಾಡಬಾರದು ಎಂದು ಅವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next