ಮುಂಬಯಿಯ ಕಲಾ ಪ್ರಕಾಶ ಪ್ರತಿಷ್ಠಾನ ಏರ್ಪಡಿಸಿದ ಐದು ದಿನಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪದ್ಮಾ ಕೆ. ಆರ್. ಆಚಾರ್ಯ ಸಾರಥ್ಯದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದ ಕಲಾವಿದೆಯರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ವಾಕ್ಚಾತುರ್ಯದ ಮೂಲಕ ಮುಂಬಯಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.
ಭಾಗವತರಾಗಿ ಕು| ಅಮೃತಾ ಅಡಿಗ, ಚೆಂಡೆಯಲ್ಲಿ ಕು| ಅಪೂರ್ವಾ ಸುರತ್ಕಲ್, ಮದ್ದಳೆಯಲ್ಲಿ, ಕೌಶಿಕ್ ರಾವ್ ಪುತ್ತಿಗೆ, ಸತ್ಯನಾರಾಯಣ ಅಡಿಗ ಹಿಮ್ಮೇಳಕ್ಕೆ ಧ್ವನಿಯಾದರು. ಪ್ರತಿದಿನವೂ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿದ ಸಭಾಗೃಹ ಕಲಾವಿದೆಯರಿಗೆ ಸ್ಫೂರ್ತಿದಾಯಕವಾಗಿತ್ತು.
ಮೊದಲನೆಯ ದಿನ ಘಾಟ್ಕೊಪರ್‌ನಲ್ಲಿ ಕೃಷ್ಣ ಸಂಧಾನ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಶ್ರೀಕೃಷ್ಣನಾಗಿ, ಪದ್ಮಾ ಆಚಾರ್ಯ, ಧರ್ಮರಾಯನಾಗಿ ಜಯಲಕ್ಷ್ಮೀ ವಿ. ಭಟ್, ವಿದುರನಾಗಿ ಅಶ್ವಿನಿ ನಿಡ್ವಣ್ಣಾಯ, ಕೌರವನಾಗಿ ಸುಮಂಗಲಾ ರತ್ನಾಕರ್, ದ್ರೌಪದಿಯಾಗಿ ಆಶಾಲತಾ ಕಲ್ಲೂರಾಯ ವಾದ- ಪ್ರತಿವಾದ, ವಿಷಯಗಳ ಮಂಡನೆಯೊಂದಿಗೆ ಮಿಂಚಿದರು.
ಎರಡನೆಯ ದಿನ ಮೀರಾರೋಡಿನಲ್ಲಿ ವೀರಮಣಿ ಕಾಳಗ ನಡೆಯಿತು. ಹನುಮನಾಗಿ ಪದ್ಮಾ ಆಚಾರ್ಯ, ವೀರಮಣಿಯಾಗಿ ಸುಮಂಗಲಾ ರತ್ನಾಕರ್, ಶತ್ರುಘ್ನನಾಗಿ ಜಯಲಕ್ಷ್ಮೀ ಭಟ್, ಈಶ್ವರನಾಗಿ ಆಶಾಲತಾ ಕಲ್ಲೂರಾಯ , ಶ್ರೀರಾಮನಾಗಿ ಅಶ್ವಿನಿ ನಿಡ್ವಣ್ಣಾಯ ಸಮರ್ಥವಾದ ವಾಗ್ವೆ„ಕರಿಯೊಂದಿಗೆ ಮೆಚ್ಚುಗೆ ಪಡೆದರು.
ಮೂರನೇ ದಿನ ಡೊಂಬಿವಿಲಿಯಲ್ಲಿ ಶ್ರೀಕೃಷ್ಣ ರಾಯಭಾರ ನಡೆಯಿತು. ನಾಲ್ಕನೆಯ ದಿನ ಘನ್ಸೋಲಿಯ ಮೂಕಾಂಬಿಕಾ ದೇವರ ಸನ್ನಿಧಿಯಲ್ಲಿ ಸುಧನ್ವ ಮೋಕ್ಷ ನಡೆಯಿತು. ಸುಧನ್ವನಾಗಿ ಪದ್ಮಾ ಆಚಾರ್ಯ, ಅರ್ಜುನನಾಗಿ ಸುಮಂಗಲಾ ರತ್ನಾಕರ್, ಕೃಷ್ಣನಾಗಿ ಜಯಲಕ್ಷ್ಮೀ ಭಟ್ , ಪ್ರಭಾವತಿಯಾಗಿ ಆಶಾಲತಾ ಕಲ್ಲೂರಾಯ, ಹಂಸಧ್ವಜನಾಗಿ ಅಶ್ವಿನಿ ನಿಡ್ವಣ್ಣಾಯ ಉತ್ಕೃಷ್ಟ ಮಾತುಗಾರಿಕೆ ಮೂಲಕ ಮನಗೆದ್ದರು.
ಕೊನೆಯ ದಿನ ಮಾಟುಂಗಾದಲಿ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು. ಭೀಷ್ಮನಾಗಿ, ಪದ್ಮಾ ಕೆ. ಆರ್. ಆಚಾರ್ಯ, ಅಂಬೆಯಾಗಿ ಸುಮಂಗಲಾ ರತ್ನಾಕರ್, ಪರಶುರಾಮನಾಗಿ ಅಶ್ವಿನಿ ನಿಡ್ವಣ್ಣಾಯ, ಸಾಲ್ವನಾಗಿ ಜಯಲಕ್ಷ್ಮೀ ವಿ. ಭಟ್, ಬ್ರಾಹ್ಮಣನಾಗಿ ಆಶಾಲತಾ ಕಲ್ಲೂರಾಯ ಮನೋಜ್ಞವಾದ ಮಾತುಕತೆಯೊಂದಿಗೆ ಗಮನಸೆಳೆದರು.
ಕಲಾಪ್ರೇಮಿ