“ಧೀರನ್’- ಹೀಗೊಂದು ಸಿನಿಮಾದ ಟೈಟಲ್ ಅನೇಕ ದಿನಗಳಿಂದ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಹೀಗೆ ಸದ್ದು ಮಾಡುತ್ತಿರುವ “ಧೀರನ್’ ಇಂದು ತೆರೆಕಂಡಿದೆ.
ಅಂದಹಾಗೆ, “ಧೀರನ್’ ಮೂಲಕ ವೈ.ಬಿ.ಎನ್. ಸ್ವಾಮಿ ನಿರ್ದೇಶಕರಾಗಿದ್ದಾರೆ. ಜರ್ನಿಯಲ್ಲಿ ನಡೆಯುವ ಕಳ್ಳ ಪೊಲೀಸ್, ಕಳ್ಳ-ಕಳ್ಳ ಹಾಗೂ ಪೊಲೀಸ್- ಪೊಲೀಸ್ ಆಟ… ಹೀಗೆ 3 ಆಯಾಮಗಳಲ್ಲಿ ಧೀರನ್ ಕಥೆ ಹೇಳಿದ್ದಾರಂತೆ. ಇದರ ಜೊತೆಗೆ ಚಿತ್ರದಲ್ಲಿ ಲವ್‌ಸ್ಟೋರಿಯನ್ನು ಬೆಸೆದಿದ್ದಾರೆ.
ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿರುವ ಸ್ವಾಮಿ, ” ಇದು ಚಿತ್ರಕಥೆಯ ಮೇಲೆ ನಿಂತಿರುವ ಸಿನಿಮಾ, ಚಿತ್ರಕ್ಕೆ ಮಾಸ್ತಿ ಉತ್ತಮ ಡೈಲಾಗ್ ಬರೆದಿದ್ದಾರೆ. 5 ಪಾತ್ರಗಳ ಜರ್ನಿ ಮೂಲಕ ಕಥೆ ಆರಂಭವಾಗುವ ಕಥೆಯಲ್ಲಿ ಯಾರು ಗೆಳೆಯರು, ಯಾರು ವಿಲನ್‌ಗಳು ಎಂಬುದೇ ಗೊತ್ತಾಗುವುದಿಲ್ಲ. ಚಿತ್ರ ನೋಡಿದ ಮೇಲೆ ಜನ ಸಂಗೀತ, ಛಾಯಾಗ್ರಹಣದ ವಿಶೇಷತೆ ಬಗ್ಗೆ ಖಂಡಿತ ಮಾತನಾಡುತ್ತಾರೆ. ಧೀರನ್ ಒಂದೊಳ್ಳೆ ಸಿನಿಮಾ ಆಗುತ್ತದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ನಮ್ಮಚಿತ್ರ ಇಷ್ಟವಾಗುತ್ತದೆ. ನಾವು ಹೊಸಬರಾದರೂ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ.
ಚಿತ್ರದಲ್ಲಿ ಮಿಮಿಕ್ರಿ ದಯಾನಂದ್ ಕೂಡಾ ನಟಿಸಿದ್ದಾರೆ. ಮಂಗಳೂರು ಮೂಲದ ನಟಿ ಲಕ್ಷಾ ಶೆಟ್ಟಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಡಯಾಸ್ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ಧೀರನ್ ಸಿನಿ ಸರ್ವೀಸಸ್ ಬ್ಯಾನರ್ ಮೂಲಕ ನಿರ್ಮಿಸಲಾಗಿದೆ.