ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಹೊಸಬರು ಒಂದೆರಡು ವಾರ ದೂರವೇ ಉಳಿದು ಬಿಡುತ್ತಾರೆ. ಸ್ಟಾರ್‌ಗಳ ಜೊತೆ ಸಿನಿಮಾ ಬಿಡುಗಡೆ ಮಾಡುವ ರಿಸ್ಕ್ ಯಾಕೆ ಎಂದು ಹಿಂದೇಟು ಹಾಕುವವರೇ ಜಾಸ್ತಿ. ಆದರೆ, ಇಲ್ಲೊಂದು ಹೊಸಬರ ತಂಡ ಮಾತ್ರ ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿರುವ ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾದ ಎದುರೇ ಬಿಡುಗಡೆಯಾಗುತ್ತಿದೆ. ಅದು “ಧೀರ ಭಗತ್ ರಾಯ್’.
ಈ ಚಿತ್ರ ಡಿ.6ರಂದು ತೆರೆಕಾಣುತ್ತಿದೆ. ಡಿ.5ರಂದು ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ “ಪುಷ್ಪ-2′ ತೆರೆಲಕಾಣುತ್ತಿದೆ. ಆದರೆ, “ಧೀರ ಭಗತ್ ರಾಯ್’ ತಂಡ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕನ್ನಡ ಜನ ತಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯೊಂದಿಗೆ ಬರುತ್ತಿದೆ.
ಕರ್ಣನ್ ಎಸ್. ಈ ಚಿತ್ರದ ನಿರ್ದೇಶಕ. ನಮಗೆ ಥಿಯೇಟರ್ ಸಮಸ್ಯೆ ಆಗಲ್ಲ,ಕನ್ನಡಿಗರು ಕೈ ಬಿಡಲ್ಲ ಎಂಬ ನಂಬಿಕೆ ಇದೆ. ಬಾಹುಬಲಿ ಎದುರು ರಂಗಿತರಂಗ ಗೆದ್ದಂತೆ ಇತಿಹಾಸದಲ್ಲಿ ಕನ್ನಡ ಸಿನಿಮಾ ಗೆಲುವುಗಳೇ ನಮಗೇ ಈ ಡೇಟ್ ರಿಲೀಸ್ ಮಾಡೋದಕ್ಕೆ ಕಾರಣ ಎನ್ನುತ್ತಾರೆ.
ಕಾಟೇರಾ ಚಿತ್ರದಂತೆ ಧೀರ ಭಗತ್ ರಾಯ್ ಕೂಡಾ ದೊಡ್ಡ ಹಿಟ್ ಆಗುತ್ತದೆ ಎನ್ನುವ ವಿಶ್ವಾಸ ತಂಡಕ್ಕಿದೆ. 1974ರಲ್ಲಿ ದೇಶದಲ್ಲಿ ಜಾರಿಗೊಂಡ ಉಳುವವನೇ ಒಡೆಯ ಕಾನೂನು ಅನೇಕ ರೈತರಿಗೆ ಅನುಕೂಲ ಒದಗಿಸಿದರೆ, ಅದರ ಬೆನ್ನಲ್ಲೆ ಒಂದಿಷ್ಟು ಸಮಸ್ಯೆ ಉದ್ಭವಿಸಿದ್ದವು. ನಾನು ಮೂಲತಃ ನೆಲಮಂಗಲದ ಗುಂಡೇನಹಳ್ಳಿಯವನು. ನಮ್ಮೂರಲ್ಲೂ ಸಮಸ್ಯೆಯಾಗಿದ್ದನ್ನುಅರಿತಿದ್ದೆ. ರೈತರಿಗೆ ಭೂಮಿ ಬಂದ ಮೇಲೆ ಅವರ ಬದುಕು ಬದಲಾಗಬೇಕಿತ್ತು. ಆದರೆ, ಅಲ್ಲಿ ಗೊಂದಲ, ಸಮಸ್ಯೆ ಉಂಟಾಗುತ್ತದೆ.
ವ್ಯವಸ್ಥೆಯ ವಿರುದ್ಧ ಪ್ರಶ್ನೆ ಏಳುತ್ತವೆ. ಇದೇ ಅಂಶವನ್ನು ವಿಷಯ ವಸ್ತುವಾಗಿಸಿ ಕಥೆ ರೂಪಿಸಿದೆ ಎನ್ನುತ್ತಾರೆ ನಿರ್ದೇಶಕ ಕರ್ಣನ್. ವೈಟ್ ಲೋಟಸ್ ಎಂಟರ್‌ಟೈನ್‌ಮೆಂಟ್ ಹಾಗೂ ಶ್ರೀ ಓಂ ಸಿನಿ ಎಂಟರ್‌ಟೈನರ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಖ್ಯಾತ ರಂಗಭೂಮಿ ಕಲಾವಿದ ರಾಕೇಶ್ ದಳವಾಯಿ, ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ರಾಜನ್ ಅವರ ಪಾತ್ರದ ಹೆಸರು. ಭಗತ್ ಸಿಂಗ್ ಪ್ರೇರಣೆ, ಹೋರಾಟದ ಮನೋಭಾವ, ಯಾರಿಗೂ ಹೆದರದ ವ್ಯಕ್ತಿತ್ವ ಇದು ನಾಯಕನ ಪಾತ್ರ ವೈಶಿಷ್ಟ್ಯ.
ವೃತ್ತಿಯಿಂದ ಎಚ್‌ಆರ್ ಮ್ಯಾನೇಜರ್ ಆಗಿರುವ ಸುಚರಿತಾ ಅವರು ಚಿತ್ರಕ್ಕೆ ನಾಯಕಿ. ಉಳಿದಂತೆ ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ, ಎಂ.ಕೆ. ಮಠ, ಹರಿರಾಮ್, ಸಂದೇಶ್ ನಟಿಸಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ, ಸೆಲ್ವಂ ಜಾನ್ ಛಾಯಾಗ್ರ ಹಣ, ಎನ್.ಎಂ. ವಿಶ್ವ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೊರ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.