ಮುಂಬಯಿ: ಐಪಿಎಲ್ ಪಂದ್ಯಾವಳಿಯ ತಾಜಾ ಬೆಳವಣಿಗೆಯಂತೆ ಹಿರಿಯ ಪೇಸ್ ಬೌಲರ್ ಧವಳ್ ಕುಲಕರ್ಣಿ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.
ಮೂಲತಃ ಮುಂಬಯಿಯವರೇ ಆದ ಧವಳ್ ಕುಲಕರ್ಣಿ ಕಳೆದ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.
ಹೀಗಾಗಿ ಅವರು ಸ್ಟಾರ್ ನ್ಪೋರ್ಟ್ಸ್ ಕಮೆಂಟ್ರಿ ಟೀಮ್ ಸೇರಿಕೊಂಡರು. ಈಗ, ಮುಂಬೈ ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸಲು ಕುಲಕರ್ಣಿ ಅವರನ್ನು ಸೇರಿಸಿಕೊಳ್ಳುವ ಕುರಿತು ಬಿರುಸಿನ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ನಾಯಕ ರೋಹಿತ್ ಶರ್ಮ ಈ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
“ಮುಂಬೈ ತಂಡದ ಪೇಸ್ ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನಾಯಕ ರೋಹಿತ್ ಶರ್ಮ ಅವರು ಧವಳ್ ಕುಲಕರ್ಣಿ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಅವರು ಮುಂಬಯಿಯವರೇ ಆಗಿರುವ ಕಾರಣ ತವರಿನ ಹಾಗೂ ಪುಣೆ ಟ್ರ್ಯಾಕ್‌ನಲ್ಲಿ ಹೇಗೆ ಬೌಲಿಂಗ್ ನಡೆಸಬೇಕು ಎಂಬುದನ್ನು ಚೆನ್ನಾಗಿ ಬಲ್ಲರು’ ಎಂದು ಮೂಲವೊಂದು ಹೇಳಿದೆ.
2020ರಲ್ಲಿ ಧವಳ್ ಕುಲಕರ್ಣಿ 75 ಲಕ್ಷ ರೂ. ಮೊತ್ತಕ್ಕೆ ಮುಂಬೈ ಪಾಲಾಗಿದ್ದರು. 2021ರಲ್ಲೂ ಮುಂಬೈ ತಂಡದಲ್ಲಿದ್ದರು. ಆದರೆ ಈ ಅವಧಿಯಲ್ಲಿ ಇವರಿಗೆ ಆಡಲು ಸಿಕ್ಕಿದ್ದು ಒಂದು ಪಂದ್ಯ ಮಾತ್ರ. ಕುಲಕರ್ಣಿ ಅತ್ಯಂತ ವೇಗಿಯೇನಲ್ಲ, ಆದರೆ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಜಾಣ್ಮೆ ಇವರಲ್ಲಿದೆ.
92 ಪಂದ್ಯಗಳ ಅನುಭವಿ
33 ವರ್ಷದ ಧವಳ್ ಕುಲಕರ್ಣಿ 2008ರಿಂದಲೇ ಐಪಿಎಲ್ ಆಡಲಾರಂಭಿಸಿದ್ದರು. ಮುಂಬೈ, ರಾಜಸ್ಥಾನ್ ಮತ್ತು ಗುಜರಾತ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದು, 92 ಐಪಿಎಲ್ ಪಂದ್ಯಗಳಿಂದ 86 ವಿಕೆಟ್ ಕೆಡವಿದ್ದಾರೆ.