Advertisement

ಕೆ.ಎಲ್. ರಾಹುಲ್ ಸ್ಪೋಟಕ ಆಟ ; ಧವನ್, ಕೊಹ್ಲಿ ಹೋರಾಟ: ಆಸೀಸ್ ಗೆಲುವಿಗೆ 341 ರನ್ ಗುರಿ

10:15 AM Jan 18, 2020 | Hari Prasad |

ರಾಜ್ ಕೋಟ್: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ನಿಗದಿತ 50 ಓವರ್ ಗಳಲ್ಲಿ 06 ವಿಕೆಟ್ ನಷ್ಟಕ್ಕೆ 340 ರನ್ ಗಳನ್ನು ಗಳಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ (96) ಅವರ ಶತಕವಂಚಿತ ಭರ್ಜರಿ ಆಟ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ (78) ಜವಾಬ್ದಾರಿಯುತ ಆಟ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಅವರ (52 ಎಸೆತಗಳಲ್ಲಿ 80) ಸ್ಪೋಟಕ ಆಟದ ನೆರವಿನಿಂದ  ಪ್ರವಾಸಿಗರ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು.


ಮೊದಲ ವಿಕೆಟಿಗೆ ರೋಹಿತ್ ಶರ್ಮಾ (42) ಮತ್ತು ಶತಕ ವಂಚಿತ ಶಿಖರ್ ಧವನ್ (96) ಅವರು 81 ರನ್ ಗಳನ್ನು ದಾಖಲಿಸಿದರು. ಅರ್ಧಶತಕದ ಹಾದಿಯಲ್ಲಿದ್ದ ರೋಹಿತ್ ಶರ್ಮಾ ಅವರು 44 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. ಆ ಬಳಿಕ ಕ್ರೀಸಿಗೆ ಬಂದ ವಿರಾಟ್ ಕೊಹ್ಲಿ (78) ಧವನ್ ಜೊತೆ ಸೇರಿಕೊಂಡು ತಂಡದ ಮೊತ್ತವನ್ನು ಏರಿಸುತ್ತಾ ಹೋದರು. ಡೆಲ್ಲಿ ಮೇಟ್ ಗಳ ಜೊತೆಯಾಟ 103 ರನ್ ಗಳವರೆಗೆ ವಿಸ್ತರಿಸಲ್ಪಟ್ಟಿತು. ಈ ಹಂತದಲ್ಲಿ ಶತಕದ ಸಮೀಪದಲ್ಲಿದ್ದ ಶಿಖರ್ ಧವನ್ ಅವರು ರಿಚರ್ಡ್ಸನ್ ಬೌಲಿಂಗ್ ನಲ್ಲಿ ಮಿಶೆಲ್ ಸ್ಟಾರ್ಕ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.


ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಶ್ರೇಯಸ್ ಅಯ್ಯರ್ ಅವರು ಏಳೇ ರನ್ನಿಗೆ ಆಟ ಮುಗಿಸಿದರು. ವಿಶೇಷವೆಂದರೆ ಸ್ಷೆಷಲಿಸ್ಟ್ ಬ್ಯಾಟ್ಸ್ ಮನ್ ರೂಪದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರು ಇಂದು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದರು. ನಾಯಕ ಕೊಹ್ಲಿ ಮತ್ತು ರಾಹುಲ್ ಸೇರಿಕೊಂಡು 78 ರನ್ ಗಳ ಅಮೂಲ್ಯ ಜೊತೆಯಾಟ ಕಟ್ಟಿದರು.

Advertisement

78 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರು 44ನೇ ಓವರಿನಲ್ಲಿ ಬೌಂಡರಿ ಲೈನಿನಲ್ಲಿ ಆ್ಯಸ್ಟನ್ ಅಗರ್ ಅವರು ಬ್ಲಾಕ್ ಮಾಡಿ ಸ್ಟಾರ್ಕ್ ಹಿಡಿದ ಅದ್ಭುತ ಕ್ಯಾಚ್ ಗೆ ಔಟಾದರು. ನಾಯಕ ವಿರಾಟ್ ಕೊಹ್ಲಿ ಅವರು ಇಂದು ಎರಡು ಅಮೂಲ್ಯ ಜೊತೆಯಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೊಹ್ಲಿ ಔಟಾದಾಗ ತಂಡದ ಮೊತ್ತ 4 ವಿಕೆಟಿಗೆ 276 ರನ್ ಗಳಾಗಿತ್ತು.


ಕೊಹ್ಲಿ ಬಳಿಕ ಬ್ಯಾಟಿಂಗ್ ಗೆ ಬಂದ ಮನೀಶ್ ಪಾಂಡೆ 02 ರನ್ ಗಳಿಸಿ ಔಟಾದರು. ಒಂದೆಡೆ ಉತ್ತಮವಾಗಿ ಆಡುತ್ತಿದ್ದ ಕೆ.ಎಲ್. ರಾಹುಲ್ ಅರ್ಧಶತಕ ದಾಖಲಿಸಿದರು. ಬಳಿಕ ಸ್ಲ್ಯಾಗ್ ಓವರ್ ನಲ್ಲಿ ರಾಹುಲ್ (80) – ಜಡೇಜಾ (ಅಜೇಯ 20) ಜೋಡಿ 48 ರನ್ ಕಲೆ ಹಾಕುವ ಮೂಲಕ ತಂಡ ಉತ್ತಮ ಮೊತ್ತ ಕಲೆ ಹಾಕಲು ಕಾರಣರಾದರು.

ಆಸ್ಟ್ರೇಲಿಯಾ ಪರ ಸ್ಪಿನ್ನರ್ ಆ್ಯಡಂ ಝಂಪಾ 03 ವಿಕೆಟ್ ಕಿತ್ತು ಗಮನ ಸೆಳೆದರೆ, ಕೇನ್ ರಿಚರ್ಡ್ಸ್ ಸನ್ 02 ವಿಕೆಟ್ ಪಡೆದರು. ಮಿಶೆಲ್ ಸ್ಟಾರ್ಕ್ ಸಹಿತ ಆಸೀಸ್ ವೇಗಿಗಳು ಇಂದು ದುಬಾರಿ ಎಣಿಸಿದರು.




ಭಾರತ ತಂಡದಲ್ಲಿ ಇಂದು ಎರಡು ಬದಲಾವಣೆಯನ್ನು ಮಾಡಲಾಗಿತ್ತು ಗಾಯಾಳು ರಿಷಭ್ ಪಂತ್ ಬದಲಿಗೆ ಕನ್ನಡಿಗ ಮನೀಶ್ ಪಾಂಡೆ ಅವರು ಆಡುವ ಬಳಗದಲ್ಲಿ ಅವಕಾಶವನ್ನು ಪಡೆದರು. ಇನ್ನು ವೇಗಿ ಶಾರ್ದೂಲ್ ಠಾಕೂರ್ ಬದಲಿಗೆ ಯುವ ವೇಗಿ ನವದೀಪ್ ಸೈನಿ ಅಂತಿಮ ಹನ್ನೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಪಂತ್ ಅನುಪಸ್ಥಿತಿಯಲ್ಲಿ ರಾಹುಲ್ ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿಲಿದ್ದಾರೆ. ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಕೆ.ಎಸ್. ಭರತ್ ಅವರನ್ನು ಕರೆಸಿಕೊಳ್ಳಲಾಗಿದ್ದರೂ ಇಂದು ತಂಡದಲ್ಲಿ ಅವರಿಗೆ ಸ್ಥಾನ ಲಭಿಸಿಲ್ಲ. ಇನ್ನೊಂದೆಡೆ ಪ್ರವಾಸಿ ಆಸ್ಟ್ರೇಲಿಯಾ ಮುಂಬಯಿಯಲ್ಲಿ ಆಡಿದ್ದ ತಂಡವನ್ನೇ ಇಲ್ಲೂ ಕಣಕ್ಕಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next