ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಬುಧವಾರ ಜೈನ ಬಾಂಧವರು ವಿವಿಧ ಧಾರ್ಮಿಕ ಕಾರ್ಯಕ್ರಮ, ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಮಹಾವೀರ ಜಯಂತಿ ಆಚರಿಸಿದರು.
ಸಮಸ್ತ ದಿಗಂಬರ ಜೈನ ಸಮಾಜ, 1008 ಪಾರ್ಶ್ವನಾಥ ಜೈನ ಮಂದಿರ ಆಶ್ರಯದಲ್ಲಿ ನರಸರಾಜ ರಸ್ತೆಯ ಪಾರ್ಶ್ವನಾಥ ಜಿನ ಮಂದಿರದಲ್ಲಿ ಮಹಾವೀರ ಜನ್ಮ ಕಲ್ಯಾಣ-2010 ಕಾರ್ಯಕ್ರಮ ನಡೆಸಲಾಯಿತು.
ಮಹಾವೀರ ಜಯಂತಿ ಅಂಗವಾಗಿ ಕಲಶ ಅಭಿಷೇಕ ಕಾರ್ಯಕ್ರಮದಲ್ಲಿ ಜಲಾಭಿಷೇಕ, ಗಂಧಾಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಮಾವಿನ ಹಣ್ಣಿನ ಅಭಿಷೇಕ, ಚತುಷ್ಕೋನ ಕಲಶಗಳ, ಶಾಂತಿಧಾರ ಅಭಿಷೇಕ ನಡೆಸಲಾಯಿತು.
ಆ ನಂತರ ಪಾರ್ಶ್ವನಾಥ ಜಿನ ಮಂದಿರದಿಂದ ಮಹಾವೀರ ತೀರ್ಥಂಕರರ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಾವೀರ ತೀರ್ಥಂಕರರ ಬಾಲ ಲೀಲೋತ್ಸವ, ನಾಮಕರಣ, ತೊಟ್ಟಿಲ ಕಾರ್ಯಕ್ರಮ ನಡೆದವು. ಚೌಕಿಪೇಟೆಯ ಸುಪಾರ್ಶ್ವನಾಥ್ ಜೈನ ಮೂರ್ತಿ ಪೂಜಕಾ ಸಂಘದಿಂದ ಮಹಾವೀರ ತೀರ್ಥಂಕರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಚುನಾವಣಾ ನೀತಿ ಸಂಹಿತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅತಿ ಸರಳವಾಗಿ ಮಹಾವೀರ ಜಯಂತಿ ಆಚರಿಸಲಾಯಿತು.