Advertisement

ಸೋರುತಿಹುದು ಜ್ಞಾನ ದೇಗುಲಗಳ ಮಾಳಿಗೆ

01:21 PM Jul 25, 2022 | Team Udayavani |

ಧಾರವಾಡ: ಮಳೆಗಾಲ ಆರಂಭವಾದರೆ ಸಾಕು. ಮಕ್ಕಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಆತಂಕ ಶುರು. ಇದಕ್ಕೆ ಕಾರಣ ಜ್ಞಾನದೇಗುಲ ಮಳೆಯಿಂದ ಸೋರುತ್ತಿರುವುದು. ಕೆಲವಂತೂ ದುರಸ್ತಿಗಾಗಿ ಕಾದು ನಿಂತಿದ್ದರೆ ಕೆಲ ಶಾಲೆಗಳ ಗೋಡೆಗಳು ಬಿರುಕು ಬಿಟ್ಟು ಆತಂಕ ಸೃಷ್ಟಿ ಮಾಡಿವೆ. ಇದು ಶಾಲೆಯೊಂದರ ಕಥೆಯಲ್ಲ. ಜಿಲ್ಲೆಯಲ್ಲಿ 374 ಶಾಲೆಗಳ ವ್ಯಥೆ.

Advertisement

ಕೆಲ ದಿನಗಳ ಹಿಂದೆಯಷ್ಟೇ ಸುರಿದ ಮಳೆಯಿಂದ ಧಾರವಾಡ ತಾಲೂಕಿನ ಮುಗದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಡಿಪಿಇಪಿ) ಮಕ್ಕಳು ಅಕ್ಷರಶಃ ಸಂಕಷ್ಟ ಅನುಭವಿಸಿದ್ದಾರೆ. 1ರಿಂದ 7ನೇ ವರ್ಗದಲ್ಲಿ 250 ಮಕ್ಕಳಿದ್ದು, ಶಾಲೆಗೆ 9 ಕೊಠಡಿಗಳಿವೆ. ತರಗತಿಗಾಗಿ ನಿಗದಿ ಮಾಡಿರುವ 7 ಕೊಠಡಿಗಳ ಪೈಕಿ ಬಹುತೇಕ ಎಲ್ಲ ಕೊಠಡಿಗಳು ಸೋರುತ್ತಿದ್ದು, ಕೆಲ ಕೊಠಡಿಗಳ ಗೋಡೆಗಳು ಬಿರುಕುಬಿಟ್ಟಿವೆ. ಹೀಗಾಗಿ ಈ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರೂ ಭಯ ಪಡುವಂತಾಗಿದೆ.

ಜುಲೈ ತಿಂಗಳಲ್ಲಿ ಸುರಿದ ಮಳೆಗೆ ಶಾಲೆಯ ಕೊಠಡಿಗಳು ಸೋರಿದ್ದರಿಂದ 2-3 ತರಗತಿಯ ಮಕ್ಕಳನ್ನು ಒಂದೇ ಕಡೆ ಕೂಡ್ರಿಸಿ, ಪಾಠ ಮಾಡಿದ್ದಾರೆ. ಇನ್ನು 6ನೇ ತರಗತಿಯ ಮಕ್ಕಳಿಗೆ ಶಾಲೆಯ ಪಕ್ಕದ ಕಲ್ಮೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಪಾಠ ಮಾಡಿದ್ದಾರೆ. ಹೀಗಾಗಿ ಈ ರೀತಿಯ ಸಂಕಷ್ಟವು ಮಳೆಗಾಲದಲ್ಲಿ ಮಕ್ಕಳಿಗೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.

ಬೇಗ ದುರಸ್ತಿ ಆಗಲಿ: ಜೂನ್‌-ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ಶಾಲೆಗಳಿಗೆ ಮತ್ತಷ್ಟು ಹಾನಿಯಾಗಿದ್ದು, 261 ಪ್ರಾಥಮಿಕ ಶಾಲೆಗಳ 724 ಕೊಠಡಿಗಳಿಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಅಡಿ ಈ ಕೊಠಡಿಗಳ ದುರಸ್ತಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಒಟ್ಟು 374 ಶಾಲೆಗಳ 1009 ಕೊಠಡಿಗಳು ದುರಸ್ತಿ ಕಾಣಬೇಕಿದೆ. ಈ ಪೈಕಿ ರಾಜ್ಯ ಯೋಜನೆಯಡಿ 48 ಪ್ರಾಥಮಿಕ ಶಾಲೆಗಳ 103, 22 ಪ್ರೌಢಶಾಲೆಗಳ 48, ಎನ್‌ಡಿಆರ್‌ಎಫ್‌ ಅಡಿ 261 ಪ್ರಾಥಮಿಕ ಶಾಲೆಗಳ 724 ಹಾಗೂ 15ನೇ ಹಣಕಾಸು ಅಡಿ 43 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 134 ಕೊಠಡಿಗಳು ದುರಸ್ತಿ ಆಗಬೇಕಿದೆ. ಈ ದುರಸ್ತಿ ಕಾರ್ಯಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದ್ದು, ಈ ಪೈಕಿ ಎಷ್ಟು ಅನುಮೋದನೆ ಸಿಗುತ್ತದೆಯೋ ಕಾದು ನೋಡಬೇಕಿದೆ.

ಇತರೆ ಕಟ್ಟ ಡಗಳ ಸೋರಿಕೆ

Advertisement

ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಕಟ್ಟಡಗಳಿಲ್ಲ. ಆದರೆ ಕೆಲ ಸರಕಾರಿ ಕಚೇರಿಗಳು ಮಾತ್ರ ಸೋರುವುದು ತಪ್ಪಿಲ್ಲ. ಡಿಸಿ ಕಚೇರಿ ಪಕ್ಕದಲ್ಲಿಯೇ ಇರುವ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಅವರದ್ದೇ ಇಲಾಖೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯವರ ಕಚೇರಿಯೇ (ಖನಿಜ) ಸೋರುತ್ತಿದೆ. ಹಂಚಿನ ಮೇಲ್ಛಾವಣಿ ಹೊಂದಿರುವ ಈ ಕಚೇರಿಗೆ ಮಳೆಯಿಂದ ರಕ್ಷಣೆ ಪಡೆಯಲು ಹಂಚಿನ ಮೇಲ್ಛಾವಣಿಯ ಹೊರ ಭಾಗವನ್ನು ತಾಡಪತ್ರಿಯಿಂದ ಮುಚ್ಚಲಾಗಿದೆ. ಇದಲ್ಲದೇ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಅಲ್ಲಲ್ಲಿ ಸೋರಿಕೆ ಕಂಡು ಬಂದಿದ್ದು, ಈ ಮಾದರಿಯಲ್ಲಿಯೇ ಕೆಲ ಸರಕಾರಿ ಕಚೇರಿಯ ಕಟ್ಟಡಗಳಲ್ಲಿಯೂ ಮಳೆಗಾಲದಲ್ಲಿ ಸೋರಿಕೆಯ ಕಾಟ ತಪ್ಪಿಲ್ಲ.

ಸ್ವಂತ ಕಟ್ಟಡವಿಲ್ಲದ ಕೂಗು

ಜಿಲ್ಲೆಯ 763 ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ 18 ಶಾಲೆಗಳಿಗೆ ಇಂದಿಗೂ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ಶಾಲೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. 108 ಸರಕಾರಿ ಪ್ರೌಢಶಾಲೆಗಳ ಪೈಕಿ 88 ಶಾಲೆಗಳಿಗಷ್ಟೇ ಸ್ವಂತ ಕಟ್ಟಡವಿದ್ದು, 21 ಶಾಲೆಗಳಿಗೆ ಈವರೆಗೂ ಸ್ವಂತ ಕಟ್ಟಡ ಲಭ್ಯವಾಗಿಲ್ಲ. ಇದಲ್ಲದೇ ಜಿಲ್ಲೆಯಲ್ಲಿ ಇರುವ 1505 ಅಂಗನವಾಡಿ ಕೇಂದ್ರಗಳ ಪೈಕಿ 831 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ 674 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಈ ಕೇಂದ್ರಗಳು ಬಾಡಿಗೆ ಹಾಗೂ ಇತರೆ ಕಟ್ಟಡಗಳಲ್ಲಿವೆ. ಈ ಪೈಕಿ ಅವಳಿನಗರದಲ್ಲಿರುವ 430 ಅಂಗನವಾಡಿ ಕೇಂದ್ರಗಳ ಪೈಕಿ 34 ಕೇಂದ್ರಗಳಿಗೆ ಅಷ್ಟೇ ಸ್ವಂತ ಕಟ್ಟಡವಿದ್ದು, ಉಳಿದಂತೆ 396 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ.

ಕ್ರಿಯಾ ಯೋಜನೆ ಸಲ್ಲಿಕೆ

ಜಿಲ್ಲೆಯಲ್ಲಿ ಶಾಲೆಗಳಲ್ಲಿ ಹೊಸ ಕೊಠಡಿಗಳ ಬೇಡಿಕೆಯಿದ್ದು, ಹೀಗಾಗಿ ಈ ಕೊರತೆ ನೀಗಿಸಲು ಸಹ ಕೊಠಡಿಗಳ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ  ರಾಜ್ಯ ಯೋಜನೆಯಡಿ 39 ಶಾಲೆಗಳಲ್ಲಿ 58, ಹತ್ತು ಪ್ರೌಢಶಾಲೆಗಳಲ್ಲಿ 28 ಸೇರಿದಂತೆ ಒಟ್ಟು 49 ಶಾಲೆಗಳಲ್ಲಿ 86 ಹೊಸ ಕೊಠಡಿಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಲ್ಲಿಕೆಯಾಗಿವೆ. ಇದರ ಜತೆಗೆ ನರೇಗಾ ಯೋಜನೆಯಡಿ 21 ಶಾಲೆಗಳಲ್ಲಿ ಶೌಚಾಲಯ ಹಾಗೂ 7 ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೂ ಕ್ರಿಯಾ ಯೋಜನೆ ಸಲ್ಲಿಕೆಯಾಗಿವೆ. ಇದಲ್ಲದೇ ಜಿಲ್ಲೆಯ 150 ಅಂಗನವಾಡಿ ಕಟ್ಟಡಗಳು ಕೂಡ ಶಿಥಿಲಾವಸ್ಥೆ ತಲುಪಿದ್ದು, ದುರಸ್ತಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲೆಯ ಶಾಲೆಗಳಲ್ಲಿ ಹೊಸ ಕೊಠಡಿಗಳ ಬೇಡಿಕೆಯಿದೆ. ಈ ಕೊರತೆ ನೀಗಿಸಲು ಮತ್ತು ಜಿಲ್ಲೆಯ 150 ಅಂಗನವಾಡಿ ಕಟ್ಟಡಗಳು ಕೂಡ ಶಿಥಿಲಾವಸ್ಥೆ ತಲುಪಿದ್ದು, ಅವುಗಳನ್ನು ಶೀಘ್ರವೇ ದುರಸ್ತಿ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಿ, ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. -ಶಿವಾನಂದ ಭಜಂತ್ರಿ, ಅಪರ ಜಿಲ್ಲಾಧಿಕಾರಿ

-ಶಶಿಧರ್‌ ಬುದ್ನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next